ಬಸ್​ಗಾಗಿ ಬಸವಳಿದ ವಿಜಯಪುರ ಜನ

ವಿಜಯಪುರ: ಬಸ್ ಏರಲು ಹರಸಾಹಸ, ಬಸ್ ಹತ್ತಿದರೂ ಕಿಲೋ ಮೀಟರ್​ಗಟ್ಟಲೆ ನಿಲ್ಲುವ ಗೋಳು, ಬಸ್​ನಲ್ಲಿ ಹೆಚ್ಚಿನ ಪ್ರಯಾಣಿಕರಿಂದಾಗಿ ವೃದ್ಧರು, ಮಹಿಳೆಯರಿಗೆ ತಪ್ಪದ ಸಂಕಷ್ಟ… ಇದು ವಿಜಯಪುರದಿಂದ ಬೆಂಗಳೂರಿಗೆ ನಿತ್ಯ ಬಸ್​ನಲ್ಲಿ ತೆರಳುವ ಪ್ರಯಾಣಿಕರು ಅನುಭವಿಸುವ ನರಕ.

ದೇವನಹಳ್ಳಿ ತಾಲೂಕಿನ ವಿಜಯಪುರ ಬೆಂಗಳೂರಿನ ಸಮೀಪವೇ ಇರುವುದರಿಂದ ಸಿಲಿಕಾನ್ ಸಿಟಿಗೆ ನಿತ್ಯವೂ ಸಾವಿರಾರು ಪ್ರಯಾಣಿಕರು ಸಂಚರಿಸುತ್ತಾರೆ. ಆದರೆ ಸಮರ್ಪಕ ಬಸ್ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳು, ಪ್ರಯಾಣಿಕರು ಪರಿತಪಿಸುವಂತಾಗಿದೆ.

ಇದಕ್ಕೆ ಮುಖ್ಯ ಕಾರಣ ವಿಜಯಪುರದಲ್ಲಿ ಬಸ್ ಡಿಪೋ ಇಲ್ಲ ಹಾಗೂ ಇಲ್ಲಿಂದ ನೇರವಾಗಿ ಯಾವುದೇ ಬಸ್​ಗಳು ಬೆಂಗಳೂರಿಗೆ ತೆರಳುವುದಿಲ್ಲ. ಬೇರೆ ಮಾರ್ಗಗಳಿಂದ ಬರುವ ಬಸ್​ಗಳಲ್ಲಿಯೇ ಪ್ರಯಾಣ ಮಾಡಬೇಕು. ಆದರೆ ವಿಜಯಪುರಕ್ಕೆ ಬಸ್ ಬರುವಷ್ಟರಲ್ಲಿ ಬಹುತೇಕ ತುಂಬಿರುತ್ತದೆ.

ಬೆಳಗ್ಗೆ ಬಸ್​ನಿಲ್ದಾಣಕ್ಕೆ ಬಂದು ನಿಂತರೆ ಗಂಟೆಗಟ್ಟಲೇ ಕಾಯಬೇಕು. ಪಟ್ಟಣಕ್ಕೆ ಬಸ್ ಬರುವಷ್ಟರಲ್ಲೇ ಬಾಗಿಲಿನಲ್ಲಿ ಜನರು ನೇತಾಡುವಷ್ಟು ತುಂಬಿರುತ್ತವೆ. ಮಹಿಳೆಯರು, ವೃದ್ಧರಂತೂ ಸೀಟಿನಲ್ಲಿ ಕುಳಿತು ಪ್ರಯಾಣಿಸುವುದಿರಲಿ, ಬಸ್ ಹತ್ತಲೂ ಸಾಧ್ಯವಾಗದ ದುಸ್ಥಿತಿ ಇದೆ.

ವಿದ್ಯಾರ್ಥಿಗಳು ಸೇರಿ ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ವಿಜಯಪುರದಿಂದ ಬಸ್ ವ್ಯವಸ್ಥೆ ಕಲ್ಪಿಸಿದರೆ ಈ ಸಮಸ್ಯೆಗೆ ಮುಕ್ತಿ ಕಾಣಲಿದೆ.

ವಿಜಯಪುರ ಬಸ್ ನಿಲ್ದಾಣದಲ್ಲಿ ಬೆಳಗ್ಗೆ ಬಸ್ ಹತ್ತಲು ಸಾಧ್ಯವಾಗದಷ್ಟು ಪ್ರಯಾಣಿಕರ ಸಂದಣಿ ಇರುತ್ತದೆ.

| ನಿತಿನ್ ವೆಂಕಟೇಶ್ ವಿದ್ಯಾರ್ಥಿ, ವಿಜಯಪುರ

ವಿಜಯಪುರದಲ್ಲಿ ಕೆಎಸ್​ಆರ್​ಟಿಸಿ, ದೇವನಹಳ್ಳಿಯಲ್ಲಿ ಬಿಎಂಟಿಸಿ ಬಸ್ ಡಿಪೋ ಆರಂಭಿಸುವುದಾಗಿ 10 ವರ್ಷಗಳಿಂದಲೂ ಜನಪ್ರತಿನಿಧಿಗಳು ಭರವಸೆ ನೀಡುತ್ತಲೇ ಬಂದಿದ್ದಾರೆ. ಇನ್ನಾದರೂ ಡಿಪೋ ಆರಂಭಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು.

| ಸಿ.ಮುನಿಕೃಷ್ಣ ವಿಜಯಪುರ

ವಿಜಯಪುರದಿಂದ ಕೆಎಸ್​ಆರ್​ಟಿಸಿ ಬಸ್ ಮತ್ತು ಬೆಂಗಳೂರು ಬಿಎಂಟಿಸಿ ಬಸ್​ಗಳಲ್ಲಿ ನಿತ್ಯಪಾಸ್ ಪಡೆದು ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ. ಕೆಲವು ದಿನಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚುವ ಹಿನ್ನೆಲೆಯಲ್ಲಿ ಬಸ್ ಸಂಚಾರ ಹೆಚ್ಚಿಸಬೇಕೆಂಬ ಮನವಿ ಇದ್ದು, ಈ ಬಗ್ಗೆ ಮೇಲಧಿಕಾರಿ ಗಮನಕ್ಕೆ ತರಲಾಗುವುದು.

| ನಾಗೇಶ್ ಸಂಚಾರ ನಿಯಂತ್ರಣಾಧಿಕಾರಿ, ವಿಜಯಪುರ

ಡಿಪೋ ಆರಂಭಿಸಿ ಬಸ್ ಸಂಚಾರ ಹೆಚ್ಚಿಸುವಂತೆ ಸಾರಿಗೆ ಸಚಿವರಿಗೆ ಮನವಿ ಮಾಡಿದ್ದು, ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಶೀಘ್ರವೇ ಡಿಪೋ ಆರಂಭಕ್ಕೆ ಕ್ರಮಕೈಗೊಳ್ಳಲಾಗುವುದು. ಬೆಳಗ್ಗೆ ಮತ್ತು ಸಂಜೆ ವೇಳೆ ಹೆಚ್ಚು ಬಸ್ ವ್ಯವಸ್ಥೆ ಕಲ್ಪಿಸಲು ಚಿಕ್ಕಬಳ್ಳಾಫುರ, ಚಿಂತಾಮಣಿ ಬಸ್ ಡಿಪೋ ಅಧಿಕಾರಿಗಳಿಗೆ ಸೂಚಿಸಲಾಗುವುದು.

| ಎಲ್.ಎನ್.ನಾರಾಯಣಸ್ವಾಮಿ ಶಾಸಕ ನಿಸರ್ಗ