ಬಸ್ರಿಕಲ್ ಚೆಕ್​ಪೋಸ್ಟ್ ಮೇಲೆ ಪೆಟ್ರೋಲ್ ಬಾಂಬ್ ದಾಳಿ

ಕಳಸ: ಕುದುರೆಮುಖ ಅಭಯಾರಣ್ಯ ವ್ಯಾಪ್ತಿಯ ಬಸ್ರಿಕಲ್ ಅರಣ್ಯ ಚೆಕ್​ಪೋಸ್ಟ್​ಗೆ ಭಾನುವಾರ ಬೆಳಗಿನ ಜಾವ ದುಷ್ಕರ್ವಿುಗಳು ಸೀಮೆಎಣ್ಣೆ ಮತ್ತು ಪೆಟ್ರೋಲ್ ಬಾಂಬ್ ಎಸೆದಿದ್ದಾರೆ.

ರಾತ್ರಿ ಪಾಳಿಯಲ್ಲಿ ಉದಯಕುಮಾರ್ ಮತ್ತು ಶಶಾಂಕ್ ಕರ್ತವ್ಯ ನಿರ್ವಹಿಸುತ್ತಿದ್ದರು. ತಡರಾತ್ರಿ 3 ಗಂಟೆಗೆ ವಿಶ್ರಾಂತಿ ತೆಗೆದುಕೊಳ್ಳುತ್ತಿರುವ ವೇಳೆ ಏಕಾಏಕಿ ಪೆಟ್ರೋಲ್ ತುಂಬಿದ ಸುಮಾರು ಆರು ಬಾಟಲಿಗಳನ್ನು ಚೆಕ್​ಪೋಸ್ಟ್ ಪಕ್ಕದ ಶಾಲೆ ಕಡೆಯಿಂದ ಎಸೆದಿದ್ದಾರೆ. ಸ್ಫೋಟ ಹಾಗೂ ಬೆಂಕಿ ಕಂಡ ಅರಣ್ಯ ಇಲಾಖೆ ಸಿಬ್ಬಂದಿ ಬೊಬ್ಬೆ ಹಾಕಿ ಹೊರಬಂದಿದ್ದಾರೆ. ಆಗ ಬಾಟಲಿಗಳನ್ನು ಎಸೆದು ಪರಾರಿಯಾಗಿದ್ದಾರೆ.

ಶಬ್ದ ಕೇಳಿ ಅಕ್ಕಪಕ್ಕದ ಮನೆ ಹಾಗೂ ಅಂಗಡಿ ಮಾಲೀಕರು ಎದ್ದುಬಂದಿದ್ದಾರೆ. ಮನೆಯಿಂದ ಹೊರಬರುವಷ್ಟರಲ್ಲಿ ದುಷ್ಕರ್ವಿುಗಳು ಪರಾರಿಯಾಗಿದ್ದಾರೆ. ಘಟನೆಯಲ್ಲಿ ರಿಜಿಸ್ಟರ್ ಪುಸ್ತಕದ ಸ್ವಲ್ಪ ಭಾಗ ಸುಟ್ಟಿದೆ. ಬೇರ್ಯಾವುದೇ ಅನಾಹುತ ಸಂಭವಿಸಿಲ್ಲ. ಸ್ಥಳಕ್ಕೆ ಎಎಸ್ಪಿ ಶ್ರುತಿ, ಕುದುರೆಮುಖ ಸಿಪಿಐ ರಾಮಚಂದ್ರ, ಆರ್​ಎಫ್​ಒ ಮಧುಸೂದನ್ ಭೇಟಿ ನೀಡಿ ಪರಿಶೀಲಿಸಿದರು. ಕುದುರೆಮುಖ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.