ಬಸವ ವಸತಿ ಅನುದಾನಕ್ಕೂ ಗ್ರಹಣ

ಹಾವೇರಿ: ಬಸವ ವಸತಿ ಯೋಜನೆಯಡಿ ಮನೆ ನಿರ್ವಿುಸಲು ಕಳೆದೊಂದು ವರ್ಷದಿಂದ ಜಿಲ್ಲೆಗೆ ಅನುದಾನ ಬಾರದ್ದರಿಂದ ಬಡ ಫಲಾನುಭವಿಗಳು ಬೇಸರಗೊಂಡಿದ್ದಾರೆ. ಯೋಜನೆಯಡಿ 2016-17, 2017-18ನೇ ಸಾಲಿನಲ್ಲಿ ಒಟ್ಟು 22,389 ಫಲಾನುಭವಿಗಳು ಆಯ್ಕೆಯಾಗಿದ್ದಾರೆ. ಅದರಲ್ಲಿ 3,948 ಫಲಾನು ಭವಿಗಳು ಮನೆ ನಿರ್ಮಾಣ ಕಾಮ ಗಾರಿಯನ್ನೇ ಆರಂಭಿಸಿಲ್ಲ. ಇನ್ನುಳಿದವರಲ್ಲಿ ಹಲವರು ಫೌಂಡೇಷನ್, ಲಿಂಟಲ್, ರೂಫ್ ಹಂತದವರೆಗೆ ನಿರ್ಮಾಣ ಕೈಗೊಂಡಿದ್ದರೆ, ಕೆಲವರು ಪೂರ್ಣವಾಗಿ ಮನೆ ನಿರ್ವಿುಸಿಕೊಂಡಿದ್ದಾರೆ. ಆದರೆ, ವಸತಿ ನಿಗಮದಿಂದ ಅನುದಾನ ಬಾರದೇ ಇರುವುದರಿಂದ ಸಾಲ ಮಾಡಿ ಮನೆ ನಿರ್ವಿುಸಿಕೊಂಡಿರುವ ಫಲಾನುಭವಿಗಳು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರತಿದಿನ ಗ್ರಾಪಂ ಕಚೇರಿಗೆ ಅಲೆದೂ ಅಲೆದು ಸುಸ್ತಾಗಿದ್ದಾರೆ.

ನಿಗಮದಿಂದಲೇ ಬಂದಿಲ್ಲವಂತೆ?: ಆಶ್ರಯ ಯೋಜನೆಯ ಫಲಾನುಭವಿಗಳು ಆಯ್ಕೆಯಾದ ಕೂಡಲೆ ಆನ್​ಲೈನ್ ಮೂಲಕ ಅವರ ಹೆಸರನ್ನು ರಾಜೀವ ಗಾಂಧಿ ವಸತಿ ನಿಗಮಕ್ಕೆ ಕಳಿಸಲಾಗುತ್ತದೆ. ನಂತರ ನಿವೇಶನ, ಫೌಂಡೇಷನ್ ಹಂತದ ಜಿಪಿಎಸ್ ಮಾಡಿ ನಿಗಮಕ್ಕೆ ಕಳಿಸಬೇಕು. ಆಗ ಮೊದಲ ಕಂತಿನ ಅನುದಾನ ಬಿಡುಗಡೆಯಾಗುತ್ತದೆ. ಹೀಗೆ ಹಂತಹಂತವಾಗಿ ಲಿಂಟಲ್, ರೂಫ್ ಲೆವಲ್, ಪೂರ್ಣಗೊಂಡ ಮೇಲೆ ಅನುದಾನ ಬಿಡುಗಡೆಗೊಳ್ಳುತ್ತದೆ. ಅನುದಾನ ಬಿಡುಗಡೆಯಾಗದಿರುವುದರಿಂದ ಫಲಾನುಭವಿಗಳು ಸಾಲ ಮಾಡಿ ಮನೆ ನಿರ್ವಿುಸಿಕೊಂಡಿದ್ದಾರೆ. ಕೆಲವರು ಸಾಲ ಸಿಗದೇ ಅರ್ಧಕ್ಕೆ ನಿಲ್ಲಿಸಿದ್ದಾರೆ. ಈ ಕುರಿತು ಅಧಿಕಾರಿಗಳನ್ನು ಕೇಳಿದರೆ, ನಿಗಮದಿಂದಲೇ ಅನುದಾನ ಬಿಡುಗಡೆಯಾಗಿಲ್ಲ. ಬಿಡುಗಡೆಯಾದ ಕೂಡಲೆ ನಿಮ್ಮ ಖಾತೆಗೆ ಹಣ ಜಮೆಯಾಗಲಿದೆ ಎನ್ನುತ್ತಾರೆ ಎಂದು ಫಲಾನುಭವಿಗಳು ಗೋಳಾಡುತ್ತಿದ್ದಾರೆ.

ಸರ್ಕಾರದ ಗುರಿ

ಬಸವ ವಸತಿ ಯೋಜನೆಯಲ್ಲಿ 2016-17ನೇ ಸಾಲಿನಲ್ಲಿ ಜಿಲ್ಲೆಗೆ 9,522ಮನೆ ನಿರ್ವಣಕ್ಕೆ ಸರ್ಕಾರ ಗುರಿ ನೀಡಿತ್ತು. ಇದರಲ್ಲಿ 9,158 ಫಲಾನುಭವಿಗಳನ್ನು ಆಯ್ಕೆಗೊಳಿಸಲಾಗಿತ್ತು. ಈ ಪೈಕಿ 1,464ಮನೆಗಳು ನಾನಾ ತಾಂತ್ರಿಕ ಕಾರಣಗಳಿಂದ ಬ್ಲಾಕ್ ಆಗಿವೆ. 264 ಮನೆಗಳ ಕಾಮಗಾರಿ ಇನ್ನೂ ಆರಂಭಗೊಂಡಿಲ್ಲ. 4,653 ಮನೆಗಳು ಪೂರ್ಣಗೊಂಡಿವೆ. ಇನ್ನುಳಿದವು ವಿವಿಧ ಹಂತಗಳಲ್ಲಿವೆ. 2017-18ನೇ ಸಾಲಿನಲ್ಲಿ 13,481ಮನೆಗಳ ನಿರ್ವಣಕ್ಕೆ ಗುರಿ ನಿಗದಿಯಾಗಿತ್ತು. ಇದರಲ್ಲಿ 13,231ಫಲಾನುಭವಿಗಳನ್ನು ಆಯ್ಕೆಗೊಳಿಸಲಾಗಿದೆ. ಇದರಲ್ಲಿ 36ಮನೆಗಳು ಬ್ಲಾಕ್ ಆಗಿವೆ. 3,684 ಮನೆಗಳ ಕಾಮಗಾರಿ ಆರಂಭಗೊಂಡಿಲ್ಲ. 2,506ಮನೆಗಳು ಪೂರ್ಣಗೊಂಡಿವೆ. 7,001ಮನೆಗಳು ನಿರ್ಮಾಣ ಹಂತದಲ್ಲಿವೆ.

ರಾಜೀವ ಗಾಂಧಿ ವಸತಿ ನಿಗಮದಿಂದ ಫಲಾನುಭವಿಗಳ ಖಾತೆಗೆ ನೇರವಾಗಿ ಆಯಾ ಕಂತಿನ ಅನುದಾನ ಜಮೆಯಾಗುತ್ತದೆ. ಆರು ತಿಂಗಳಿನಿಂದ ಅನುದಾನ ಬಿಡುಗಡೆಯಾಗದೇ ಇರುವುದರಿಂದ ಬಸವ ವಸತಿ ಯೋಜನೆ ಫಲಾನುಭವಿಗಳಿಗೆ ಸ್ವಲ್ಪ ಸಮಸ್ಯೆಯಾಗಿದೆ. ಶೀಘ್ರದಲ್ಲಿಯೇ ಅನುದಾನ ಬಿಡುಗಡೆಯ ಭರವಸೆಯಿದೆ.

| ಡಾ. ಪಿ.ಎನ್. ಹುಬ್ಬಳ್ಳಿ ಜಿಪಂ ಯೋಜನಾ ನಿರ್ದೇಶಕ

Leave a Reply

Your email address will not be published. Required fields are marked *