ಚಿತ್ರದುರ್ಗ: ವಿಶ್ವಗುರು, ಮಹಾಮಾನವತಾವಾದಿ ಬಸವಣ್ಣ ಅವರ ತತ್ವಾದರ್ಶಗಳ ಕುರಿತು ಜಾಗೃತಿ ಮೂಡಿಸಲು ಎರಡು ದಿನ ಹಮ್ಮಿಕೊಂಡಿರುವ ಬಸವ ಜಯಂತಿ ಅಂಗವಾಗಿ ಜಿಲ್ಲೆಯ ಈಚಘಟ್ಟ ಗ್ರಾಮದಲ್ಲಿ ಭಾನುವಾರ ರಂಗೋಲಿಗಳ ಚಿತ್ತಾರ ಗಮನ ಸೆಳೆದವು.

ಸ್ಪರ್ಧೆಯಲ್ಲಿ ಮಹಾದೇವ, ಬಸವಣ್ಣ, ಲಿಂಗು ಮಾದರಿ ಒಳಗೊಂಡು ಅತ್ಯಾಕರ್ಷಕವಾಗಿ ಮಹಿಳೆಯರು ಬಿಡಿಸಿದ್ದ ವರ್ಣಮಯ ರಂಗೋಲಿಗಳು ಗ್ರಾಮದ ರಸ್ತೆಗಳನ್ನು ಮದುವಣಗಿತ್ತಿಯಂತೆ ಸಿಂಗರಿಸಿದ್ದವು.
ಈಚಘಟ್ಟ ಗ್ರಾಪಂ ಮಾಜಿ ಉಪಾಧ್ಯಕ್ಷ ಯು.ಎಸ್.ತಿಪ್ಪೇಸ್ವಾಮಿ ಮಾತನಾಡಿ, ಬಸವಣ್ಣ ಅವರ ಕಾಯಕದ ಮಹತ್ವವನ್ನು ಪ್ರತಿಯೊಬ್ಬರು ಅರಿತು ದುಡಿಮೆಯಲ್ಲಿ ನಿರತರಾದರೆ, ದೇಶದ ಆರ್ಥಿಕ ಪರಿಸ್ಥಿತಿಯೂ ಸದೃಢವಾಗಲಿದೆ ಎಂದು ಸಲಹೆ ನೀಡಿದರು.
ಜಯಂತಿ ಅಂಗವಾಗಿ ಗ್ರಾಮದ ಸುತ್ತಮುತ್ತಲಿನ ಹಳ್ಳಿಗಳಲ್ಲೂ ಬಸವಣ್ಣ ಅವರ ವಿಚಾರ ಧಾರೆಗಳನ್ನು ಜನರಿಗೆ ತಿಳಿಸುವ ಉದ್ದೇಶದಿಂದ ವ್ಯಾಪಕ ಪ್ರಚಾರ ಕೈಗೊಳ್ಳಲಾಗಿದೆ ಎಂದರು.
ವೀರಭದ್ರೇಶ್ವರ ಅಭಿವೃದ್ಧಿ ಸೇವಾ ಸಮಿತಿ ಕಾರ್ಯದರ್ಶಿ ಯು.ಎಸ್.ಉಜ್ಜಿನ ಸ್ವಾಮಿ ಮಾತನಾಡಿ, ಬಸವಣ್ಣ ಅವರ ಮೂರ್ತಿಯೊಂದಿಗೆ ಸಾಗುವ ವಾಹನ ಮನೆ-ಮನೆಗೂ ಕರಪತ್ರ ಹಂಚಲಿದೆ. ಅಲ್ಲದೆ, ವಚನ ಗೀತೆಗಳ ಮೂಲಕ ಗಮನ ಸೆಳೆಯಲಿದೆ ಎಂದು ತಿಳಿಸಿದರು.
ಮುಖಂಡರಾದ ಸಿ.ಡಿ.ಕರಿಬಸಪ್ಪ, ವೀರೇಶ್, ಡಿ.ಎಂ.ವೀರಭದ್ರಪ್ಪ, ನಾಗರಾಜ ಇತರರಿದ್ದರು.