ಬಸವೇಶ್ವರ ದೇಗುಲದಲ್ಲಿ ಸಂಕ್ರಾಂತಿ ಸಡಗರ

|ಎಸ್.ಎನ್. ಶಾಸ್ತ್ರಿ ಯಶವಂತಪುರ

ಯಶವಂತಪುರ ವಿಧಾನಸಭಾಕ್ಷೇತ್ರ ವ್ಯಾಪ್ತಿಯಲ್ಲಿ ಸೋಂಪುರ ಜಾತ್ರೆ ಎಂದೇ ಪ್ರಸಿದ್ಧಿ ಪಡೆದಿರುವ ಬಸವೇಶ್ವರ ಸ್ವಾಮಿ ಕಡಲೇಕಾಯಿ ಪರಿಷೆಗೆ ಭರದ ಸಿದ್ಧತೆ ನಡೆದಿದೆ. ಸೋಮವಾರ (ಜ.15)ವಿಧ್ಯುಕ್ತವಾಗಿ ಚಾಲನೆಗೊಳ್ಳುವ ಮಹಾಜಾತ್ರೆಗೆ ದಿನಗಣನೆ ಆರಂಭವಾಗಿದೆ. ಸಹಸ್ರಾರು ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಈಗಾಗಲೇ ಪೂರ್ವಸಿದ್ಧ್ದೆ ಚುರುಕುಗೊಂಡಿದೆ.

ಯಶವಂತಪುರದ 4 ದಿಕ್ಕುಗಳಿಂದಲೂ ಭಕ್ತರು ಪಾಲ್ಗೊಳ್ಳಲಿದ್ದಾರೆ. ನೆರೆಯ ಆಂಧ್ರ ಹಾಗೂ ತಮಿಳುನಾಡಿನ ಭಕ್ತರೂ ಸಹ ಆಗಮಿಸುವುದು ಇಲ್ಲಿನ ವಿಶೇಷ. ಬೆಳಗ್ಗೆ 7ಕ್ಕೆ ಅನ್ನದಾಸೋಹ ಆರಂಭವಾಗಲಿದೆ. ಗಿಣ್ಣಿನಿಂದ ತಯಾರಿಸಿದ ಪ್ರಸಾದ ವಿಯೋಗ ಹಾಗೂ ಉಚಿತವಾಗಿ ಕಡಲೆಕಾಯಿ ಹಾಗೂ ಕಬ್ಬು ವಿತರಣೆ ಜಾತ್ರೆಯ ಗೈರತ್ತನ್ನು ಮತ್ತಷ್ಟು ಹೆಚ್ಚಿಸಲಿದೆ. ಸಂಕ್ರಾಂತಿ ಪ್ರಯುಕ್ತ ಕೆಂಗೇರಿ ಹೋಬಳಿ ನೈಸ್ ಕಾರಿಡಾರ್ ಸರ್ಕಲ್ ಬಳಿ ನಡೆಯಲಿರುವ 9ನೇ ವರ್ಷದ ಶ್ರೀ ಬಸವೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಹಲವು ವಿಶೇಷಗಳಿಗೆ ಸಾಕ್ಷಿಯಾಗಲಿದೆ.

ಶ್ರೀ ಬಸವೇಶ್ವರ ಭಕ್ತ ಮಂಡಳಿ ಹಾಗೂ ವಿಜಯವಾಣಿ ಮತ್ತು ದಿಗ್ವಿಜಯ 247 ನ್ಯೂಸ್ ಸುದ್ದಿವಾಹಿನಿ ಮಾಧ್ಯಮ ಸಹಯೋಗದೊಂದಿಗೆ ಜ.15ರಂದು ನಡೆಯಲಿರುವ 9ನೇ ವರ್ಷದ ಕಡಲೆಕಾಯಿ ಪರಿಷೆಗೆ ಇಲ್ಲಿನ ಪುರಾಣ ಪ್ರಸಿದ್ಧ ಶ್ರೀ ಬಸವೇಶ್ವರ ದೇಗುಲ ಆವರಣ ಅಣಿಯಾಗುತ್ತಿದೆ.

ಉದ್ಯಮಿ ಎಂ.ರುದ್ರೇಶ್ ಸಾರಥ್ಯ

ಎಂಆರ್​ಆರ್ ಗ್ರೂಪ್ಸ್ ಚೇರ್ಮನ್ ಎಂ.ರುದ್ರೇಶ್ ಸಾರಥ್ಯದಲ್ಲಿ ನಡೆಯಲಿರುವ ಸೋಂಪುರ ಜಾತ್ರಾ ಮಹೋತ್ಸವಕ್ಕೆ ಕನಕಪುರ ದೇಗುಲ ಮಠದ ಮುಮ್ಮಡಿ ನಿರ್ವಾಣ ಮಹಾಸ್ವಾಮಿ ಚಾಲನೆ ನೀಡಲಿದ್ದಾರೆ. ರೈತಾಪಿ ವರ್ಗದ ಸುಗ್ಗಿ ಸಂಭ್ರಮದ ಸಂಕ್ರಾಂತಿ ಹಬ್ಬವನ್ನು ವಿನೂತನವಾಗಿ ಆಚರಿಸಬೇಕು ಹಾಗೂ ಹಳ್ಳಿಯ ಸೊಗಡಿನ ಸಾಂಪ್ರದಾಯಿಕ ಆಚರಣೆಯನ್ನು ಮುಂದಿನ ಪೀಳಿಗೆಗೂ ಜೀವಂತವಾಗಿರಿಸ ಬೇಕು ಎಂಬ ನಿಟ್ಟಿನಲ್ಲಿ ಕಂಠೀರವ ಸ್ಟುಡಿಯೋ ಮಾಜಿ ಅಧ್ಯಕ್ಷರೂ ಆಗಿರುವ ರುದ್ರೇಶ್, 9 ವರ್ಷಗಳಿಂದ ಆಚರಿಸಿಕೊಂಡು ಬರುತ್ತಿರುವ ಸುಗ್ಗಿ ಸಂಭ್ರಮವೇ ‘ಬಸವೇಶ್ವರ ಸ್ವಾಮಿಯ ಕಡಲೇಕಾಯಿ ಪರಿಷೆ’. ನಗರೀಕರಣದ ಭರಾಟೆ ನಡುವೆ ನಾಡಿನ ಸಾಂಸ್ಕೃತಿಕ ಪ್ರತೀಕಗಳಾಗಿರುವ ಹಬ್ಬ-ಹರಿದಿನಗಳು ಅಸ್ತಿತ್ವ ಕಳೆದುಕೊಳ್ಳುತ್ತಿವೆ. ಇವುಗಳನ್ನು ಉಳಿಸಿಕೊಂಡು ಮುಂದಿನ ತಲೆಮಾರಿಗೂ ಮುಂದುವರಿಸಿಕೊಂಡು ಬರಬೇಕು ಎಂಬ ಅವರ ಮಹಾತ್ವಾಕಾಂಕ್ಷೆಯೇ ಈ ಜಾತ್ರಾ ಮಹೋತ್ಸವ.

ಮಾತೃ-ಪಿತೃ ದೇವೋಭವ

ಪ್ರತಿ ವರ್ಷ ಒಂದಿಲ್ಲೊಂದು ವಿಶೇಷತೆಗಳಿಂದ ಗಮನ ಸೆಳೆಯುವ ಜಾತ್ರೆ ಈ ಬಾರಿ ‘ಮಾತೃ-ಪಿತೃ ದೇವೋಭವ’ ಹೆಸರಿನಲ್ಲಿ ಹಿರಿಯ ನಾಗರಿಕರನ್ನು ಸನ್ಮಾನಿಸುವ ಮತ್ತೊಂದು ವಿಶೇಷತೆಗೆ ಸಾಕ್ಷಿಯಾಗಲಿದೆ. 60 ವರ್ಷ ತುಂಬಿದ ಸಾವಿರ ಜೋಡಿಗಳಿಗೆ ಷಷ್ಟಿಪೂರ್ತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಹಿಂದುಗಳ ಜತೆಗೆ ಮುಸ್ಲಿಂ, ಕ್ರಿಶ್ಚಿಯನ್ ಸಮುದಾಯದ ದಂಪತಿ ಪಾಲೊಳ್ಳಲಿರುವುದು ವಿಶೇಷ. ಸರ್ವಧರ್ಮ ಸಮನ್ವಯತೆ ಕಾಪಾಡಿಕೊಳ್ಳುವ ಸಲುವಾಗಿ ಎಲ್ಲ ವರ್ಗದ, ಧರ್ಮದ ಹಿರಿಯ ದಂಪತಿಯನ್ನು ಸನ್ಮಾನಿಸ ಲಾಗುವುದು ಎಂದು ಎಂ.ರುದ್ರೇಶ್ ಹೇಳಿದ್ದಾರೆ. ಮನೆಗಳಲ್ಲಿ ಹಿರಿಯರನ್ನು ಕಡೆಗಣಿಸುತ್ತಾರೆ. ಇದರ ಫಲವಾಗಿ ಸಮಾಜದಲ್ಲಿ ಎಲ್ಲೆಂದರಲ್ಲಿ ವೃದ್ಧಾಶ್ರಮ ಹುಟ್ಟಿಕೊಳ್ಳುತ್ತಿವೆ. ಕೂಡು ಕುಟುಂಬಗಳ ಹಿನ್ನೆಲೆ ಹೊಂದಿರುವ ನಾಡಿನಲ್ಲಿ ಇಂಥ ಬೆಳವಣಿಗೆ ಕಳವಳಕಾರಿಯಾಗಿದೆ. ಆದ್ದರಿಂದ ನಮ್ಮ ಹಿರಿಯರನ್ನು ಗೌರವಿಸಬೇಕು. ಅವರ ಮಾರ್ಗದರ್ಶನ ಪಡೆಯಬೇಕು ಎಂಬ ನಿಟ್ಟಿನಲ್ಲಿ ಹಿರಿಯರ ಷಷ್ಟಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಬಿ.ಎಸ್.ಯಡಿಯೂರಪ್ಪ ಭಾಗಿ

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮರಳಗವಿ ಮಠದ ಶಿವರುದ್ರಮಹಾಸ್ವಾಮೀಜಿ, ಆರ್ಟ್ ಆಫ್ ಲಿವಿಂಗ್​ನ ಶ್ರೀ ಶ್ರೀ ರವಿಶಂಕರ ಗುರೂಜಿ, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಅನಂತಕುಮಾರ್, ಸಂಸದೆ ಶೋಭಾ ಕರಂದ್ಲಾಜೆ, ಮಾಜಿ ಸಚಿವ ಕುಮಾರ್ ಬಂಗಾರಪ್ಪ, ಶಾಸಕರಾದ ಆರ್.ಅಶೋಕ್, ಮುನಿರಾಜು, ಎಂ.ಕೃಷ್ಣಪ್ಪ, ಸತೀಶ್​ರೆಡ್ಡಿ, ಅಶೋಕ್ ಖೇಣಿ, ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಪಾಲ್ಗೊಳ್ಳಲಿದ್ದಾರೆ.

 

ಸೋಂಪುರ ಕಡಲೇಕಾಯಿ ಪರಿಷೆಗೆ ಭರದ ಸಿದ್ಧ್ದೆ

120 ಹಳ್ಳಿಗಳ ಜನರ ಆರಾಧ್ಯದೈವ

ಚೋಳರ ಕಾಲದಲ್ಲಿ ನಿರ್ವಣವಾದ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ನಂದಿ ವಿಗ್ರಹ ಪ್ರತಿಷ್ಠಾಪನೆಗೊಂಡಿದೆ. ಜಾನುವಾರುಗಳಿಗೆ ಬಾವು, ಕಾಲುಬಾಯಿ ಜ್ವರ ಮತ್ತಿತರ ಕಾಯಿಲೆ ಕಾಣಿಸಿಕೊಂಡರೆ, ಇಲ್ಲಿನ ದೇವರಿಗೆ ಹರಕೆ ಹೊತ್ತರೆ ಅಂಥ ಜಾನುವಾರುಗಳು ಗುಣಮುಖವಾಗುತ್ತವೆ ಎಂಬ ನಂಬಿಕೆ ಸ್ಥಳೀಯರದ್ದು. ಹೈನುಗಾರಿಕೆಯನ್ನು ಜೀವನಾಧಾರ ಮಾಡಿಕೊಂಡಿರುವ ಕೃಷಿಕರ ಪಾಲಿಗೆ ಶ್ರೀ ಬಸವೇಶ್ವರ ದೇವರೆಂದರೆ ವಿಶೇಷ ಭಕ್ತಿ. ಸುತ್ತಮುತ್ತಲಿನ 120 ಹಳ್ಳಿಗಳ ಆರಾಧ್ಯ ದೈವವೆನಿಸಿರುವ ಶ್ರೀ ಬಸವೇಶ್ವರ ದೇವರ ಮೂರ್ತಿಗೆ ಗೀಬಿನ ಹಾಲಿನ ಅಭಿಷೇಕ ವಿಶೇಷ. ಚನ್ನವೀರಯ್ಯನಪಾಳ್ಯ, ವರಹಾಸಂದ್ರ, ಸೋಂಪುರ ಹಾಗೂ ಹೆಮ್ಮಿಗೆಪುರ ಪಂಚಾಯಿತಿಯ ಸುತ್ತಮುತ್ತಲಿನ ಗ್ರಾಮಗಳಿಗೆ ಇಲ್ಲಿನ ದೇಗುಲ ಧಾರ್ವಿುಕ ಶ್ರದ್ಧಾಕೇಂದ್ರವಾಗಿದೆ.

ರಾಜ್ಯದ ಮೂಲೆಗಳಿಂದ ಭಕ್ತಸಾಗರ

ಪಾಳುಬಿದ್ದಿದ್ದ ದೇಗುಲಕ್ಕೆ ಕಾಯಕಲ್ಪ ಕಲ್ಪಿಸಬೇಕೆಂಬ ಸಂಕಲ್ಪ ಮಾಡಿದ ಎಂ.ರುದ್ರೇಶ್ ಜೀಣೋದ್ಧಾರಕ್ಕೆ ಕೈಹಾಕಿದರು. ನೈಸ್ ಕಾರಿಡಾರ್ ಮುಖ್ಯಸ್ಥ ಅಶೋಕ್ ಖೇಣಿ ಸಹಕಾರದೊಂದಿಗೆ 2006ರಲ್ಲಿ ದೇಗುಲ ಪುನರುಜ್ಜೀವನಗೊಂಡಿತು. ಇದಕ್ಕೆ ಹಲವು ಭಕ್ತರ ನೆರವು ಹರಿದುಬಂತು. ಇದೀಗ ಸುತ್ತಮುತ್ತಲ 120 ಹಳ್ಳಿಗಳ ಭಕ್ತರಲ್ಲದೆ ರಾಜ್ಯದ ಮೂಲೆಗಳಿಂದ ಹರಿದು ಬರುತ್ತಿರುವ ಭಕ್ತಸಾಗರದ ಧಾರ್ವಿುಕ ಕೇಂದ್ರವಾಗಿ ಬಸವೇಶ್ವರ ದೇಗುಲ ಗಮನ ಸೆಳೆಯುತ್ತಿದೆ.

ನಿರಂತರ ಅನ್ನದಾಸೋಹ

ಬೆಳಗ್ಗೆ 8 ಗಂಟೆಗೆ ಆರಂಭಗೊಳ್ಳುವ ಅನ್ನದಾಸೋಹ ರಾತ್ರಿ 10 ಗಂಟೆವರೆಗೆ ನಿರಂತವಾಗಿ ನಡೆಯಲಿದೆ. ಇದಕ್ಕಾಗಿಯೇ ಭಕ್ತಮಂಡಳಿಯ 150 ಮಂದಿ ಹಗಲಿರಳು ಸಿದ್ದತೆ ನಡೆಸುತ್ತಿದ್ದಾರೆ.

ಗ್ರಾಮದೇವತೆಗಳ ಉತ್ಸವ

ವರಾಹಸಂದ್ರ, ಹೆಮ್ಮಿಗೆಪುರ, ದೊಡ್ಡಬೆಲೆ, ಚನ್ನವೀರಯ್ಯನಪಾಳ್ಯ, ಎಚ್.ಗೊಲ್ಲಹಳ್ಳಿ, ಗೊಟ್ಟಿಗೆರೆ ಪಾಳ್ಯ, ಸೋಂಪುರ ಸೇರಿ ವಿವಿಧ ಗ್ರಾಮಗಳ ಭಕ್ತರು ಗ್ರಾಮ ದೇವತೆಗಳ ಉತ್ಸವದಲ್ಲಿ ಪಾಲ್ಗೊಳ್ಳಲಿದ್ದು, ಶ್ರೀ ಬಸವೇಶ್ವರಸ್ವಾಮಿ ಕೃಪೆಗೆ ಪಾತ್ರರಾಗಲಿದ್ದಾರೆ.

Leave a Reply

Your email address will not be published. Required fields are marked *