ಬಸವಾಪಟ್ಟಣದಲ್ಲಿ ಸರ್ಕಾರಿ ಪಬ್ಲಿಕ್ ಶಾಲೆ

ಅರಕಲಗೂಡು: ರಾಜ್ಯದಲ್ಲಿ ಒಂದು ಸಾವಿರ ಆಂಗ್ಲ ಮಾಧ್ಯಮ ಶಾಲೆ ತೆರೆಯುವ ಮೂಲಕ ಸರ್ಕಾರ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವ ಸಂಕಲ್ಪ ಮಾಡಿದೆ ಎಂದು ಶಾಸಕ ಎ.ಟಿ. ರಾಮಸ್ವಾಮಿ ತಿಳಿಸಿದರು.

ತಾಲೂಕಿನ ಬಸವಾಪಟ್ಟಣದಲ್ಲಿ ಬುಧವಾರ ಎಲ್‌ಕೆಜಿ 1ನೇ ತರಗತಿಯಿಂದ ಪಿಯುಸಿ ವರೆಗಿನ ಕರ್ನಾಟಕ ಪಬ್ಲಿಕ್ ಶಾಲೆ ಉದ್ಘಾಟಿಸಿ ಮಾತನಾಡಿದರು.

ಗ್ರಾಮೀಣ ಭಾಗದ ಶಾಲೆಗಳಿಗೆ ಬಡವರು, ಕೂಲಿ ಕಾರ್ಮಿಕರ ಮಕ್ಕಳು ಅಧಿಕವಾಗಿ ಬರುತ್ತಾರೆ. ಶೈಕ್ಷಣಿಕವಾಗಿ ಇಂಥ ಮಕ್ಕಳಿಗೆ ಯಾವುದೇ ಕೊರತೆ ಉಂಟಾಗದಂತೆ ಸರ್ಕಾರ ನಿಗಾ ವಹಿಸಿದೆ. ಶಿಕ್ಷಕರು ಮಕ್ಕಳಿಗೆ ಅನ್ಯಾಯವಾಗದಂತೆ ನೋಡಿಕೊಂಡು ಉತ್ತಮ ಶಿಕ್ಷಣ ನೀಡುವತ್ತ ಹೆಚ್ಚಿನ ಗಮನ ಹರಿಸಬೇಕು ಎಂದರು.

ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಗೆ ಈಗಾಗಲೇ ಶಾಲಾ ನಿರ್ವಹಣಾ ವೆಚ್ಚ 5 ಲಕ್ಷ ರೂ, ದುರಸ್ತಿ ವೆಚ್ಚ 22 ಲಕ್ಷ ರೂ. ಸೇರಿದಂತೆ ಒಟ್ಟು 27 ಲಕ್ಷ ರೂ. ಹಣವನ್ನು ಮುಖ್ಯಶಿಕ್ಷಕರ ಖಾತೆಗೆ ಜಮಾ ಮಾಡಲಾಗಿದೆ. ಪೋಷಕರು ಖಾಸಗಿ ಶಾಲೆಗಳ ಮೇಲಿನ ವ್ಯಾಮೋಹ ತ್ಯಜಿಸಿ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಿ ಭವಿಷ್ಯದ ಬದುಕಿಗೆ ನೆರವಾಗಬೇಕು ಎಂದರು.

ತಾಪಂ ಉಪಾಧ್ಯಕ್ಷ ಎಸ್.ಆರ್. ನಾಗರಾಜ್, ಸದಸ್ಯೆ ಮಮತಾ ಚೇತನ್ ಕುಮಾರ್, ಗ್ರಾಪಂ ಅಧ್ಯಕ್ಷೆ ನಾಗರತ್ನ ಮಹೇಂದ್ರ ಕುಮಾರ್, ಡಿಡಿಪಿಐ ಮಂಜುನಾಥ್, ಡಯಟ್ ಉಪನಿರ್ದೇಶಕ ಪುಟ್ಟರಾಜು, ಬಿಇಒ ಶಿವನಂಜೇಗೌಡ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಂಜೇಗೌಡ, ಸಿಡಿಸಿ ಉಪಾಧ್ಯಕ್ಷ ಮಹೇಶ್, ಸದಸ್ಯ ಮಂಜೇಗೌಡ, ಪ್ರಾಂಶುಪಾಲ ದೇವರಾಜೇಗೌಡ, ಉಪನ್ಯಾಸಕರಾದ ಬಾಬುವರ್ಧನ್, ಜಗದೀಶ್ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *