ಬಸವರಾಜ ಹೊರಟ್ಟಿ ಮನೆಗೆ ಶಿಕ್ಷಕರ ಮುತ್ತಿಗೆ

ಹುಬ್ಬಳ್ಳಿ: ಶಿಕ್ಷಕರ ಕಡ್ಡಾಯ ವರ್ಗಾವಣೆ ವಿರೋಧಿಸಿ ನೂರಾರು ಪ್ರಾಥಮಿಕ ಶಿಕ್ಷಕರು ಸೋಮವಾರ ವೇಮನ ಬೀದಿ ದೇಸಾಯಿ ವೃತ್ತದ ಬಳಿಯ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ನಿವಾಸಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಈಗಾಗಲೇ 10ರಿಂದ 15 ವರ್ಷಗಳ ಕಾಲ ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸಿ ಪಟ್ಟಣ ಪ್ರದೇಶಕ್ಕೆ ಬಂದಿರುವ ಶಿಕ್ಷಕರಿಗೆ ಮತ್ತೆ ಗ್ರಾಮೀಣ ಭಾಗಕ್ಕೆ ವರ್ಗಾವಣೆ ಮಾಡಲಾಗುತ್ತಿದೆ. ಪತಿ- ಪತ್ನಿ ಇಬ್ಬರೂ ಸರ್ಕಾರಿ ನೌಕರಿಯಲ್ಲಿ ಇರುವವರಿಗೆ ಒಂದು ನಿಯಮ, ಉಳಿದವರಿಗೆ ಒಂದು ನಿಯಮ ಎಂದು ತಾರತಮ್ಯ ಮಾಡಲಾಗುತ್ತಿದೆ. ರಾಜ್ಯ ಸರ್ಕಾರದ ಇಂತಹ ನಿರ್ಧಾರದಿಂದ ಶಿಕ್ಷಕರ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಕಡ್ಡಾಯ ವರ್ಗಾವಣೆ ನಿಯಮಗಳು ನ್ಯಾಯ ಸಮ್ಮತವಾಗಿಲ್ಲ. ಕೂಡಲೇ ಶಿಕ್ಷಕ ಸ್ನೇಹಿ ವರ್ಗಾವಣೆ ನಿಯಮ ರೂಪಿಸಬೇಕು ಎಂದು ಹೊರಟ್ಟಿ ಅವರಿಗೆ ಮನವಿ ಸಲ್ಲಿಸಿದರು. ರಾಜ್ಯ ಸರ್ಕಾರದ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದರು. ಮನವಿ ಸ್ವೀಕರಿಸಿ ಮಾತನಾಡಿದ ಹೊರಟ್ಟಿ, ಶಿಕ್ಷಕರ ಕಡ್ಡಾಯ ವರ್ಗಾವಣೆಯಿಂದ ಹಲವರಿಗೆ ಸಮಸ್ಯೆ ಉಂಟಾಗಿದೆ. ಈ ಕುರಿತು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಗಮನಕ್ಕೆ ತರುತ್ತೇನೆ ಎಂದರು.

Leave a Reply

Your email address will not be published. Required fields are marked *