More

  ಬಸವನಬಾಗೇವಾಡಿಯಲ್ಲಿ ವಚನ ಸಾಹಿತ್ಯ ವಿಶ್ವವಿದ್ಯಾಲಯ ಸ್ಥಾಪಿಸಿ

  ಬಸವನಬಾಗೇವಾಡಿ: ವಚನ ಸಾಹಿತ್ಯ ವಿಶ್ವವಿದ್ಯಾಲಯವನ್ನು ಬಸವಜನ್ಮ ಸ್ಥಳ ಬಸವನಬಾಗೇವಾಡಿಯಲ್ಲಿ ಸ್ಥಾಪನೆ ಮಾಡಬೇಕೆಂದು ರಾಷ್ಟ್ರೀಯ ಬಸವ ಸೈನ್ಯದ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ಹೇಳಿದರು.

  ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಅವರು ಮಾತನಾಡಿದರು. 12ನೇ ಶತಮಾನದಲ್ಲಿ ವಚನದ ಮೂಲಕ ಕ್ರಾಂತಿಯನ್ನು ಮಾಡಿದ ಮಹಾ ಮಾನವತವಾದಿ ವಿಶ್ವಗುರು ಬಸವಣ್ಣನವರ ಸಮಕಾಲಿನ ಶರಣರ ವಚನಗಳ ಅಧ್ಯಯನಕ್ಕಾಗಿ ವಚನ ಸಾಹಿತ್ಯ ವಿಶ್ವವಿದ್ಯಾಲಯವನ್ನು ಮುಂದಿನ ವರ್ಷ ಸರ್ಕಾರ ಆರಂಭಿಸುವುದಾಗಿ ಘೋಷಣೆ ಮಾಡಿರುವುದಕ್ಕೆ ಸ್ವಾಗತವಿದೆ ಎಂದರು.

  ಬಸವಣ್ಣನವರು ತಮ್ಮ ಚಿಕ್ಕ ವಯಸ್ಸಿನಲ್ಲಿ ಕಂದಾಚಾರ, ಮೌಢ್ಯತೆ , ಗೊಡ್ಡು ಸಂಪ್ರದಾಯ ಧಿಕ್ಕರಿಸಿ ಎಲ್ಲರಿಗೂ ಸಮಾನತೆ ಇರಲೆಂದು ತಿಳಿಸಿದ್ದರು. ಅವರ ಕುಟುಂಬದವರು ಉಪನಯ ಮಾಡುವುದನ್ನು ವಿರೋಧಿಸಿದ್ದರು. ಈಗಾಗಲೇ ರಾಜ್ಯ ಸರ್ಕಾರವು ಬಸವಣ್ಣನವರ ಕರ್ಮಭೂಮಿ ಬಸವ ಕಲ್ಯಾಣದಲ್ಲಿ ಅಂದಾಜು 600 ಕೋಟಿ ರೂ. ವೆಚ್ಚದಲ್ಲಿ ನೂತನ ಅನುಭವ ಮಂಟಪ ನಿರ್ಮಿಸುತ್ತಿದೆ ಎಂದು ಹೇಳಿದರು.

  ಕೂಡಲಸಂಗಮದಲ್ಲಿ ವಚನ ಅಧ್ಯಯನ ಪೀಠ ಸೇರಿದಂತೆ ಬಸವಣ್ಣನವರ ಸಮಕಾಲಿನ ಶರಣರ ಸ್ಮಾರಕಗಳು ನಿರ್ಮಾಣಗೊಂಡಿದ್ದು ಸಂತಸದ ವಿಷಯವಾಗಿದೆ. ಇತ್ತೀಚೆಗೆ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿ ಆದೇಶ ಮಾಡಿರುವುದು ಕೂಡ ಬಸವ ನಾಡಿನ ಜನತೆಯಲ್ಲಿ ಹರ್ಷ ಉಂಟು ಮಾಡಿದೆ ಎಂದು ಹೇಳಿದರು.

  ಇಲ್ಲಿವರೆಗೆ ಬಸವನಬಾಗೇವಾಡಿ ಪಟ್ಟಣ ಶೈಕ್ಷಣಿಕವಾಗಿ ಬಹಳಷ್ಟು ಹಿಂದುಳಿದಿದೆ. ವಚನ ವಿಶ್ವವಿದ್ಯಾಲಯ ಸ್ಥಾಪಿಸಿ ನಮ್ಮ ಬಸವ ನಾಡಿನಲ್ಲಿ ಶೈಕ್ಷಣಿಕ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಗೆ ಸರ್ಕಾರ ಒತ್ತು ನೀಡಬೇಕು. ವಚನ ಸಾಹಿತ್ಯವನ್ನು ಸಂರಕ್ಷಣೆ ಮಾಡಿದ .ಗು. ಹಳಕಟ್ಟಿ ಅವರ ಜಿಲ್ಲೆ ಕೂಡ ವಿಜಯಪುರ. ಈ ವಿಶ್ವವಿದ್ಯಾಲಯ ಸ್ಥಾಪನೆ ಮಾಡುವುದರ ಮೂಲಕ .ಗು ಹಳಕಟ್ಟಿ ಅವರಿಗೂ ಕೂಡ ಸರ್ಕಾರ ಗೌರವ ಸಲ್ಲಿಸಿದ ಹಾಗೆ ಆಗುತ್ತದೆ. ಬಸವನಬಾಗೇವಾಡಿ ಪರಿಸರದಲ್ಲಿ ವಚನ ವಿಶ್ವವಿದ್ಯಾಲಯವನ್ನು ಸ್ಥಾಪನೆ ಮಾಡಿ ವಚನಗಳಲ್ಲಿ ಬರುವ ಕೃಷಿ ಸೇರಿ ಪ್ರತಿಯೊಂದು ಕಾಯಕಗಳಿಗಾಗಿ ಆದ್ಯತೆ ನೀಡಬೇಕು ಎಂದರು.

  ವಿಶ್ವವಿದ್ಯಾಲಯದ ಆವರಣದಲ್ಲಿ ಎಲ್ಲ ಪ್ರಕಾರದ ಗಿಡ, ಮರ, ಬಳ್ಳಿಗಳು ಹಾಗೂ ಔಷಧೀಯ ಸಸ್ಯಗಳ ಪುಟ್ಟ ಅರಣ್ಯ ಮತ್ತು ಭವ್ಯವಾದ ಉದ್ಯಾನವನವನ್ನು ಸ್ಥಾಪಿಸಬೇಕು. ಅಲ್ಲಿ ವಿಶ್ವಗುರು ಬಸವಣ್ಣನವರ ದೇಶದಲ್ಲಿ ಅತಿ ಎತ್ತರದ ಪುತ್ತಳಿಯನ್ನು ಸ್ಥಾಪನೆ ಮಾಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸುತ್ತೇವೆ ಎಂದು ಹೇಳಿದರು.

  ಸಂಚಾಲಕ ಶ್ರೀಕಾಂತ ಕೊಟ್ರಶೆಟ್ಟಿ, ಮನ್ನನ್ ಶಾಬಾದಿ, ಪ್ರಶಾಂತ್ ಮುಂಜಾನೆ, ಸುನೀಲ ಚಿಕ್ಕೊಂಡ, ಮಹಾಂತೇಶ ಕೆರೂಟಗಿ, ಮಹಾಂತೇಶ ಹೆಬ್ಬಾಳ, ಸಂಗಮೇಶ ಬಿದರಿ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts