ಬಸವಣ್ಣ ಜಗತ್ತು ಕಂಡ ಅಪರೂಪದ ಸಂತ

ಧಾರವಾಡ: ಬಸವಣ್ಣನವರು ಜಗತ್ತು ಕಂಡ ಶ್ರೇಷ್ಠ ಸಂತ. ಅವರು ಅನುಭವ ಮಂಟಪ ಎಂಬ ನೂತನ ಪರಿಕಲ್ಪನೆಯ ಮೂಲಕ ಸಾಮಾಜಿಕ ಬದಲಾವಣೆಗೆ ಮುನ್ನುಡಿ ಬರೆದರು ಎಂದು ಸುತ್ತೂರಿನ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಹೇಳಿದರು.

ನಗರದ ಕವಿವಿಯ ಬಸವ ಪೀಠದ ವತಿಯಿಂದ ಮಂಗಳವಾರ ಆಯೋಜಿಸಿದ್ದ ಶ್ರೀ ಬಸವೇಶ್ವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬಸವಣ್ಣ ವಚನಗಳ ಮೂಲಕ ಸಾಮಾಜಿಕ ಕ್ರಾಂತಿಗೆ ನಾಂದಿ ಹಾಡಿ, ಕೆಳಸ್ತರದ ಪ್ರತಿಯೊಬ್ಬರಿಗೂ ಸಮಾನತೆ ನೀಡಬೇಕು ಎಂದು ಪ್ರತಿಪಾದಿಸಿದರು. ಬುದ್ಧನ ನಂತರ ಬದಲಾವಣೆಯ ಹರಿಕಾರ ಎಂಬ ಕೀರ್ತಿ ಬಸವಣ್ಣನಿಗೆ ಸಲ್ಲುತ್ತದೆ. ಅವರು 800 ವರ್ಷಗಳ ಹಿಂದೆಯೇ ಅನುಭವ ಮಂಟಪ ಎಂಬ ಸಂಸತ್ತು ಪದ್ಧತಿಯನ್ನು ಜಗತ್ತಿಗೆ ತೋರಿಸಿ ಕೊಟ್ಟ ಮಹಾನ್​ಪುರುಷ ಎಂದರು.

ಶಿವಕುಮಾರ ಬಳಿಗಾರ ಅವರು ಬರೆದ ‘ಸಾರ್ಥಕ ಬದುಕಿಗೆ ಬಸವ ದೀಪ್ತಿ’ ಪುಸ್ತಕ ಬಿಡುಗಡೆಗೊಳಿಸಿದ ವಿಜಯಪುರದ ಜ್ಞಾನ ಯೋಗಾಶ್ರಮದ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಮಾತನಾಡಿ, ಬಸವಣ್ಣನವರು ಅಂದಿನ ಕಾಲದ ಜೀವನ ಶೈಲಿಯನ್ನು ವಚನಗಳ ಮೂಲಕ ಹೇಳಿದ ಮಹಾನುಭಾವ. ಇಂದು ನಾವೆಲ್ಲ ಇತಿಮಿತಿಯಲ್ಲಿ ಸಿಲುಕಿ ಜಂಜಾಟದಲ್ಲಿದ್ದೇವೆ. ಆದರೆ ಬಸವಣ್ಣನವರಿಗೆ ಪರಿಮಿತಿ ಇರಲಿಲ್ಲ. ಆದ್ದರಿಂದಲೇ ಚಿಂತನೆಗಳು ವಚನಗಳ ರೂಪದಲ್ಲಿ ಹೊರಬಂದವು ಎಂದರು.

ಕೊಲ್ಲಾಪುರದ ಕನೇರಿಯ ಅದೃಶ್ಯ ಕಾಡಸಿದ್ಧೇಶ್ವರ ಶ್ರೀ, ಧಾರವಾಡದ ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕವಿವಿ ಕುಲಪತಿ ಪ್ರಮೋದ ಗಾಯಿ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಬಸವೇಶ್ವರ ಪೀಠದ ಸಂಯೋಜಕ ಡಾ. ಸಿ.ಎಂ. ಕುಂದಗೋಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಲಸಚಿವ ಪ್ರೊ. ಎಂ.ಎನ್. ಸಾಲಿ, ಹಣಕಾಸು ಅಧಿಕಾರಿ ಪ್ರೊ. ಆರ್.ಎಲ್. ಹೈದ್ರಾಬಾದಿ, ಚಂದ್ರಕಾಂತ ಬೆಲ್ಲದ, ಮೋಹನ ಲಿಂಬಿಕಾಯಿ, ಮಾಜಿ ಸಂಸದ ಐ.ಜಿ. ಸನದಿ, ಅಧ್ಯಾಪಕರು ಇದ್ದರು.