ಬಸವಣ್ಣನ ಆದರ್ಶ ಬದುಕಿಗೆ ದಾರಿದೀಪ

ಲಕ್ಷ್ಮೇಶ್ವರ: ಅಹಿಂಸಾ ತತ್ತ್ವ ಅಸಮತೋಲನ ನಿವಾರಣೆಗೆ ಶ್ರಮಿಸಿ ಮಾನವೀಯ ಮೌಲ್ಯ, ಪರಸ್ಪರ ಪ್ರೀತಿ, ಸೌಹಾರ್ದತೆಯ ಆದರ್ಶ ಸಮಾಜ ಕಟ್ಟ ಬಯಸಿದ ಬಸವಣ್ಣನವರ ಚಿಂತನೆ, ಆದರ್ಶಗಳು ಪ್ರತಿಯೊಬ್ಬರ ಬದುಕಿಗೆ ದಾರಿದೀಪವಾಗಿವೆ ಎಂದು ನೀಲಗುಂದದ ಗುದ್ನೇಶ್ವರ ಮಠದ ಪ್ರಭುಲಿಂಗ ಸ್ವಾಮಿಗಳು ಹೇಳಿದರು.

ಪಟ್ಟಣದಲ್ಲಿ ಬಸವೇಶ್ವರ ಜಯಂತ್ಯುತ್ಸವ ಆಚರಣಾ ಸಮಿತಿ ಉದ್ಘಾಟನೆ ಮತ್ತು ಸನ್ಮಾನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಬಸವಣ್ಣನವರು ತಮ್ಮ ವಚನಗಳ ಮೂಲಕ ಕಾಯಕವೇ ಕೈಲಾಸ, ದಯವೇ ಧರ್ಮದ ಮೂಲವಯ್ಯ, ಅಯ್ಯ ಎಂದರೆ ಸ್ವರ್ಗ ಎಲವೋ ಎಂದರೆ ನರಕ ಎಂದು ಮಾನವತಾ ವಾದಕ್ಕೆ ಸಾಹಿತ್ಯದ ಸ್ಪರ್ಶ ನೀಡಿದ್ದಾರೆ. ಆತ್ಮ ಸಾಕ್ಷಿಯನ್ನು ಆಧಾರವಾಗಿಸಿಕೊಂಡು ಆತ್ಮಾವಲೋಕನ ಮಾಡಿಕೊಳ್ಳುತ್ತಲೇ ಪರಿಶುದ್ಧವಾದ ಬದುಕನ್ನು ಅನಾವರಣ ಮಾಡಿದ ಅವರ ಬದುಕು ಎಲ್ಲರಿಗೂ ಆದರ್ಶ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಮಿತಿಯ ಗೌರವಾಧ್ಯಕ್ಷ ಡಾ. ವೈ.ಎಫ್. ಹಂಜಿ, ಜಗಜ್ಯೋತಿ ಬಸವಣ್ಣನವರು 12ನೇ ಶತಮಾನದಲ್ಲಿ ಬಿತ್ತಿದ ಮೌಲ್ಯಗಳು ಸಾರ್ವಕಾಲಿಕ ಸತ್ಯಗಳಾಗಿವೆ ಎಂದರು.

ಈ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸಾಧನೆಗೈದ ಪ್ರತಿಭಾವಂತ ವಿದ್ಯಾರ್ಥಿಗಳಾದ ಪ್ರಜ್ವಲ್ ಸಾತಣ್ಣವರ, ಕೃಷ್ಣೇಗೌಡ ಪಾಟೀಲ, ಶಿವರಾಜ ಮಾಗಡಿ ಹಾಗೂ ಪುರಸಭೆ ಸದಸ್ಯರನ್ನು ಸನ್ಮಾನಿಸಲಾಯಿತು.

ಲಿಂಬಯ್ಯಸ್ವಾಮಿ ಪ್ರತಿಭಾ ಪ್ರತಿಷ್ಠಾನದ ಎಲ್.ಸಿ. ಲಿಂಬಯ್ಯಸ್ವಾಮಿಮಠ ಅಧ್ಯಕ್ಷತೆ ವಹಿಸಿದ್ದರು. ಚಂದ್ರಶೇಖರ ಮಹಾಜನಶೆಟ್ಟರ್ ಬಸವಣ್ಣನವರ ಸಾಮಾಜಿಕ ಮೌಲ್ಯಗಳ ಕುರಿತು ಉಪನ್ಯಾಸ ನೀಡಿದರು. ಶಿವಣ್ಣ ನೆಲವಗಿ, ಗುರುಪಾದಯ್ಯ ಗಡ್ಡದೇವರಮಠ, ಪ್ರೇಮಕ್ಕ ಬಿಂಕದಕಟ್ಟಿ, ಎಸ್.ಪಿ. ಪಾಟೀಲ, ಸುಭಾಸ ಓದುನವರ, ಸೋಮಣ್ಣ ಮುಳಗುಂದ, ಪೂರ್ಣಾಜಿ ಖರಾಟೆ, ಬಸಣ್ಣ ಬೆಂಡಿಗೇರಿ ಪುರಸಭೆ ಸದಸ್ಯರು, ಗಂಗಾಧರ ಮೆಣಸಿನಕಾಯಿ, ಇತರರು ಉಪಸ್ಥಿತರಿದ್ದರು. ಬಳಿಕ ಹರ್ಲಾಪುರದ ಸಾಂಭಯ್ಯ ಹಿರೇಮಠ ತಂಡದವರಿಂದ ವಚನ ಹಾಗೂ ಜಾನಪದ ಕಾರ್ಯಕ್ರಮಗಳು ನೆರವೇರಿದವು. ಬಿ.ಎಸ್. ಬಾಳೇಶ್ವರಮಠ ಹಾಗೂ ಮಹೇಶ ಹೊಗೆಸೊಪ್ಪಿನ ಕಾರ್ಯಕ್ರಮ ನಿರ್ವಹಿಸಿದರು.

ಚಿನ್ನಾಭರಣ ಖರೀದಿ ಜೋರು

ಗದಗ: ಗದಗ-ಬೆಟಗೇರಿ ಅವಳಿನಗರ ಸೇರಿ ಜಿಲ್ಲೆಯಾದ್ಯಂತ ಮಂಗಳವಾರ ಅಕ್ಷಯ ತೃತೀಯ ಹಿನ್ನೆಲೆಯಲ್ಲಿ ಚಿನ್ನಾಭರಣ ಖರೀದಿ ಜೋರಾಗಿತ್ತು. ಸಾರ್ವಜನಿಕರು ಚಿನ್ನದ ಗಟ್ಟಿ, ಚಿನ್ನದ ನಾಣ್ಯ, ಉಂಗುರ ಹಾಗೂ ವಿವಿಧ ಬಗೆಯ ಚಿನ್ನಾಭರಣಗಳನ್ನು ಖರೀದಿ ಮಾಡಿದರು.

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಿದರೇ ಅದು ಅಕ್ಷಯವಾಗುತ್ತದೆ, ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇದ್ದುದರಿಂದ ಬಹುತೇಕ ಚಿನ್ನಾಭರಣ ಅಂಗಡಿಗಳಲ್ಲಿ ಮಂಗಳವಾರ ಎಂದಿಗಿಂತ ಜನದಟ್ಟಣೆ ಹೆಚ್ಚಾಗಿ ಕಂಡುಬಂದಿತು. ವ್ಯಾಪಾರಿಗಳು ಗ್ರಾಹಕರಿಗೆ ವಿವಿಧ ಆಭರಣಗಳನ್ನು ತೋರಿಸುವುದರಲ್ಲಿ ಮಗ್ನರಾಗಿದ್ದರು. ರೈತರು, ಗ್ರಾಮೀಣ ಭಾಗದ ಸಾರ್ವಜನಿಕರು ಹಾಗೂ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಚಿನ್ನಾಭರಣ ಖರೀದಿಸಿದರು. ಗದಗ-ಬೆಟಗೇರಿ ಅವಳಿನಗರ ಸೇರಿ ಜಿಲ್ಲೆಯಲ್ಲಿ 155 ಚಿನ್ನಾಭರಣ ಅಂಗಡಿಗಳಿವೆ. ಪ್ರತಿನಿತ್ಯ ಚಿನ್ನಾಭರಣ ಅಂಗಡಿಗಳಲ್ಲಿ ಅಂದಾಜು 50 ಸಾವಿರ ರೂ. ದಿಂದ 1 ಲಕ್ಷ ರೂ. ವರೆಗೆ ವಹಿವಾಟು ನಡೆಯುತ್ತದೆ. ಶುಭದಿನ ಸಂದರ್ಭದಲ್ಲಿ 1 ಲಕ್ಷ ರೂ. ದಿಂದ 2 ಲಕ್ಷ ರೂ. ವರೆಗೂ ವ್ಯವಹಾರ ಆಗುತ್ತದೆ. ಅಕ್ಷಯ ತೃತೀಯ ಸಂದರ್ಭದಲ್ಲಿ 8ರಿಂದ 10 ಲಕ್ಷ ರೂ. ವ್ಯವಹಾರ ಮಾಡಲಾಗುತ್ತಿದೆ. ನಗರದಲ್ಲಿ ಚಿನ್ನ 10 ಗ್ರಾಂಗೆ 32,940 ರೂ. ಹಾಗೂ 10 ಗ್ರಾಂ ಬೆಳ್ಳಿಗೆ 500 ರೂ. ದರವಿತ್ತು. ಆದರೂ ಪ್ರಸಕ್ತ ವರ್ಷದ ಅಕ್ಷಯ ತೃತೀಯ ವಹಿವಾಟಿನಲ್ಲಿ ಗಣನೀಯವಾಗಿ ಏರಿಕೆ ಕಂಡಿದೆ ಎಂದು ಚಿನ್ನಾಭರಣ ಅಂಗಡಿಕಾರರು ಹರ್ಷ ವ್ಯಕ್ತಪಡಿಸಿದರು.

ಬಸವೇಶ್ವರ ಪುತ್ಥಳಿ ಪ್ರಾಂಗಣ ಸ್ವಚ್ಛತೆ

ಗದಗ: ಜಗಜ್ಯೋತಿ ಬಸವೇಶ್ವರ ಜಯಂತಿಯ ಅಂಗವಾಗಿ ವಾಯುವಿಹಾರಿಗಳು, ಪರಿಸರ ಪ್ರೇಮಿಗಳು ನಗರದ ಐತಿಹಾಸಿಕ ಭೀಷ್ಮ ಕೆರೆಯ ಆವರಣದಲ್ಲಿರುವ ಬಸವೇಶ್ವರ ಪುತ್ಥಳಿಯ ಪ್ರಾಂಗಣವನ್ನು ಮಂಗಳವಾರ ಸ್ವಚ್ಛಗೊಳಿಸಿದರು.

ಬಸವೇಶ್ವರ ಪುತ್ಥಳಿಯ ತಳಪಾಯದ ಸುತ್ತಲಿನ ಟೈಲ್ಸ್​ಗಳು ಕಿತ್ತು ಹೋಗಿವೆ, ಬಸವೇಶ್ವರ ಮೂರ್ತಿಯ ಪಾದದ ಲೇಪಿಸಿದ ಬಣ್ಣ ಕಳಚಿಕೊಂಡು ಸುಕ್ಕಾಗಿದೆ. ಅಲ್ಲದೇ ಬಸವ ಜಯಂತಿ ಅಂಗವಾಗಿ ಪುತ್ಥಳಿಯ ಪ್ರಾಂಗಣ ಸ್ವಚ್ಛಗೊಳಿಸದೇ ಅಲಂಕಾರ, ವಿದ್ಯುತ್ ದೀಪ ಅಳವಡಿಸದೇ ಜಿಲ್ಲಾಡಳಿತ ನಿರ್ಲಕ್ಷ್ಯ ತೋರಿದೆ ಎಂದು ಆರೋಪಿಸಿದರು. ವಾಯುವಿಹಾರಿಗಳಾದ ಮಂಜುನಾಥ ಬೇಲೇರಿ, ಕುಬೇರಗೌಡ ಪರ್ವತಗೌಡರ, ಎಸ್.ಎಸ್. ಮೇಟಿ, ಮುಖೇಶ್ ಬಂದಾ, ಜೀತೇಂದ್ರ ಜೀರಾವಲ್, ಮಹೇಶ ಕೋರಿ, ಮಹೇಶ ಮುಂಡರಗಿ, ಜಯಂತಿಲಾಲ್ ಕವಾಡ ಸೇರಿ ಮತ್ತಿತರರು ಪಾಲ್ಗೊಂಡಿದ್ದರು.