ಬಸವಕಲ್ಯಾಣ: ಮೂಲ ಹಾಗೂ ಸೇವಾ ಸೌಲಭ್ಯ ಒದಗಿಸಬೇಕು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಗ್ರಾಮ ಆಡಳಿತಾಧಿಕಾರಿಗಳ ಸಂಘದಿಂದ ಇಲ್ಲಿಯ ಆಡಳಿತ ಸೌಧ ಎದುರು ಸೋಮವಾರ ಅನಿರ್ದಿಷ್ಟಾವಧಿ ಧರಣಿ ಆರಂಭಿಸಲಾಯಿತು.
ಬಸವಕಲ್ಯಾಣ ಹಾಗೂ ಹುಲಸೂರು ತಾಲೂಕು ಸಂಘದಿಂದ ಜಂಟಿಯಾಗಿ ಹಮ್ಮಿಕೊಂಡ ಮುಷ್ಕರದಲ್ಲಿ ಪಾಲ್ಗೊಂಡ ಗ್ರಾಮ ಆಡಳಿತಾಧಿಕಾರಿಗಳು ಸುಸಜ್ಜಿತ ಕಚೇರಿ ನಿರ್ಮಿಸಿ ಅಗತ್ಯ ಪೀಠೋಪಕರಣ, ಗುಣಮಟ್ಟದ ಮೊಬೈಲ್, ಸಿಮ್ ಮತ್ತು ಡೇಟಾ ಸೌಲಭ್ಯ, ವೃಂದ ಮತ್ತು ನೇಮಕಾತಿ ತಿದ್ದುಪಡಿ ಯಥಾವತ್ ಜಾರಿ, ವಿಕಲಾಂಗರು, ತೀವ್ರ ಅನಿವಾರ್ಯ ಹಾಗೂ ಆರೋಗ್ಯ ಸಮಸ್ಯೆ ಇರುವ ಪ್ರಕರಣಗಳಲ್ಲಿ ಹಾಗೂ ಮಾಜಿ ಸೈನಿಕರ ನಿಯೋಜನೆ ಕೌನ್ಸೆಲಿಂಗ್ ಮೂಲಕ ಮಾಡಬೇಕು, ಕಂದಾಯ ಇಲಾಖೆಯಲ್ಲಿ ವರ್ಗಾವಣೆಗಾಗಿ ವಿಶೇಷ ಮಾರ್ಗಸೂಚಿ ರಚಿಸಬೇಕು ಒತ್ತಾಯಿಸಿದರು.
ಸರ್ಕಾರದ ಆದೇಶದಂತೆ ಇತರ ಇಲಾಖೆಗಳ ಕೆಲಸ ಮಾಡುವಾಗ ೩೦೦೦ ರೂ. ಆಪತ್ತಿನ ಭತ್ಯೆ, ಪ್ರಯಾಣ ಭತ್ಯೆಯನ್ನು ೫ ಸಾವಿರಕ್ಕೆ ಹೆಚ್ಚಿಸಬೇಕು ಸೇರಿ ೨೩ ಪ್ರಮುಖ ಬೇಡಿಕೆ ಈಡೇರಿಸಬೇಕು ಎಂದು ಧರಣಿನಿರತರು ಆಗ್ರಹಿಸಿದರು.
ಸಂಘದ ಬಸವಕಲ್ಯಾಣ ತಾಲೂಕು ಅಧ್ಯಕ್ಷ ಕಾಶೀನಾಥ ಚಂಡಕಾಪುರೆ, ಹುಲಸೂರು ಅಧ್ಯಕ್ಷ ಕಾಶೀನಾಥ ಕಾಮಶೆಟ್ಟಿ, ಪ್ರಮುಖರಾದ ದುಶಾಂತರೆಡ್ಡಿ, ದಿಲೀಪ ದೋಮ್ಮೆ, ಅಂಬರೀಶ್ ರಾಠೋಡ, ರಾಜೇಂದ್ರ ಹಿಪ್ಪೆ, ರಾಜಶೇಖರ ಕ್ಷೀರಸಾಗರ, ಈರಪ್ಪ, ಸಂದೀಪ್ ತೇಲಿ, ಕೆಂಚಪ್ಪ ದಾನಿ, ವೀರೇಶ ಇಟಗಿ, ಸಂಗಪ್ಪ, ಪ್ರಭಾವತಿ, ಪುಷ್ಪಾವತಿ, ಪ್ಯಾರಂಬಿ, ಕಾವೇರಿ, ಸುನೀತಾ, ಸರುಬಾಯಿ ವಿಸಾಜಿ ಇತರರಿದ್ದರು.