ಬಳ್ಳಿಗಾವಿ ಕೇದಾರೇಶ್ವರಸ್ವಾಮಿ ದೊಡ್ಡ ರಥೋತ್ಸವ

ಶಿರಾಳಕೊಪ್ಪ: ಐತಿಹಾಸಿಕ ಕ್ಷೇತ್ರ ಬಳ್ಳಿಗಾವಿ ಕೇದಾರೇಶ್ವರಸ್ವಾಮಿ ದೊಡ್ಡ ರಥೋತ್ಸವ ಸೋಮವಾರ ಬೆಳಗ್ಗೆ ಸಂಭ್ರಮದಿಂದ ನಡೆಯಿತು. ದಕ್ಷಿಣದ ಕೇದಾರ ಎಂದು ಪ್ರಸಿದ್ಧಿ ಪಡೆದಿರುವ ಬಳ್ಳಿಗಾವಿಯ ಸಾಲಿಗ್ರಾಮ ಶಿಲೆಯ ಕೇದಾರೇಶ್ವರಸ್ವಾಮಿಗೆ ಜಾತ್ರೆ ಅಂಗವಾಗಿ ವಿಶೇಷ ಅಲಂಕಾರ, ಪೂಜೆ ನೆರವೇರಿಸಲಾಯಿತು.

ಈಶ್ವರನ ಎದುರು ಇರುವ ಆಳೆತ್ತರದ ನಂದಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು. ನಂತರ ಕೇದಾರೇಶ್ವರನ ದೊಡ್ಡ ರಥೋತ್ಸವಕ್ಕೆ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಮಲ್ಲಪ್ಪ ಪೂಜೆ ಸಲ್ಲಿಸಿ ಚಾಲನೆ ನೀಡಿದ ನಂತರ ಸಾವಿರಾರು ಭಕ್ತರು ಜಯಘೊಷದೊಂದಿಗೆ ರಥವನ್ನು ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನದವರೆಗೆ ಎಳೆದುಕೊಂಡು ಹೋಗಿ ಪೂಜೆ ಸಲ್ಲಿಸಿದರು.

ಹಲವು ಜನಪದ ವಾದ್ಯದೊಂದಿಗೆ ಆಗಮಿಸುತ್ತಿದ್ದ ತೇರಿಗೆ ಭಕ್ತರು ತಮ್ಮ ಸೇವೆ ಸಲ್ಲಿಸುತ್ತಿದ್ದರು. ಯುವಕರ ಗುಂಪುಗಳು ವಾದ್ಯಕ್ಕೆ ಹೆಜ್ಜೆಹಾಕಿ ನರ್ತಿಸುತ್ತಾ ಮೆರವಣಿಗೆಯಲ್ಲಿ ಭಾಗವಹಿಸಿದರು. ಕೇದಾರೇಶ್ವರನ ತೇರಿಗೆ ವಿವಿಧ ಭಾಗಗಳಿಂದ ಭಕ್ತರು ಆಗಮಿಸಿ ತಮ್ಮ ಇಷ್ಟಾರ್ಥ ಪೂಜೆ ಸಲ್ಲಿಸಿದರು. ಸಂಜೆ ನಡೆದ ಜಾತ್ರಾ ಮಹೋತ್ಸವದಲ್ಲಿ ಸಾವಿರ ಭಕ್ತರು ಆಗಮಿಸಿ ಸ್ವಾಮಿಯ ದರ್ಶನ ಪಡೆದರು.

ಪರೀಕ್ಷಾ ಕೇಂದ್ರದ ಮುಂದೆ ಸ್ತಬ್ಧ:ಎಸ್​ಎಸ್​ಎಲ್​ಸಿ ಪರೀಕ್ಷೆ ನಡೆಯುತ್ತಿದ್ದ ಸರ್ಕಾರಿ ಶಾಲೆಯ ಎದುರು ಸ್ವಾಮಿಯ ರಥ ಬಂದಾಗ ಭಕ್ತರು ಪೊಲೀಸರ ಮನವಿ ಹಿನ್ನೆಲೆಯಲ್ಲಿ ವಾದ್ಯಗಳನ್ನು ಬಾರಿಸದೆ ಸದ್ದುಗದ್ದಲವಿಲ್ಲದೆ ಸಾಗಿ ಶಿಸ್ತುಪಾಲಿಸಿ ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ನೋಡಿಕೊಂಡರು. ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿರುವ ಜಾತ್ರಾ ಮಹೋತ್ಸವ ಕಾರ್ಯಕ್ರಮ ಮಂಗಳವಾರ ಓಕಳಿಯೊಂದಿಗೆ ತೆರೆ ಕಾಣಲಿದೆ. ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.