ಬಲಿಪಶುವಾಗುತ್ತಿರುವ ಜಿಲ್ಲೆಯ ಜನತೆ

ಪಾಂಡವಪುರ: ಮಂಡ್ಯ ಅಂದ್ರೆ ಇಂಡಿಯಾ ಅಂತಾರೆ. ಆದರೆ ಮಂಡ್ಯ ಅಂದ್ರೆ ರೈತರ ಆತ್ಮಹತ್ಯೆ, ಮರ್ಯಾದೆ ಹತ್ಯೆ, ಮಹಿಳೆಯರ ಸಮಸ್ಯೆ, ಮಕ್ಕಳಿಗೆ ಅಪೌಷ್ಟಿಕತೆ, ಶ್ರಮಿಕರ ಸ್ಥಿತಿಗತಿ ಇರುವ ಗಂಭೀರ ಸಮಸ್ಯೆಗಳಿವೆ. ಇವೆಲ್ಲವನ್ನು ಪಕ್ಕಕ್ಕೆ ತಳ್ಳಿ ರಾಜಕೀಯ ಕ್ಷೇತ್ರದಂತೆ ಸೃಷ್ಟಿಸಿ ಜಿಲ್ಲೆ ಜನರನ್ನು ಬಲಿಪಶು ಮಾಡಲಾಗುತ್ತಿದೆ ಸಾಮಾಜಿಕ ಕಾರ್ಯಕರ್ತೆ, ಲೇಖಕಿ ಕೆ.ಆರ್.ಸೌಮ್ಯಾ ಕಳವಳ ವ್ಯಕ್ತಪಡಿಸಿದರು.

ಪಟ್ಟಣದ ವಿಜಯ ಕಾಲೇಜಿನಲ್ಲಿ ಬೆಂಗಳೂರು ರಂಗಸಿಂಚನ ಅಭಿನಯ ಟ್ರಸ್ಟ್ ತಾಲೂಕು ಶಾಖೆ ನೇತೃತ್ವದಲ್ಲಿ ಕನ್ನಡ ಸಂಸ್ಕೃತಿ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಆಯೋಜಿಸಿದ್ದ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

ಮಂಡ್ಯ ಎಂದಾಕ್ಷಣ ಎಲ್ಲರೂ ಸೇರಿಕೊಂಡು ರಾಜಕೀಯ ಕ್ಷೇತ್ರಕ್ಕೆ ಮಾತ್ರ ಮೀಸಲಿಟ್ಟಿದ್ದಾರೆ. ಆದರೆ ಅತಿ ಹೆಚ್ಚು ರೈತರ ಆತ್ಮಹತ್ಯೆ, ಮರ್ಯಾದೆ ಹತ್ಯೆಯಲ್ಲಿ ಜಿಲ್ಲೆ ರಾಜ್ಯಕ್ಕೆ ಮೊದಲ ಸ್ಥಾನದಲ್ಲಿದೆ. ಜನರ ಮಾನಸಿಕ ನೋವುಗಳನ್ನು ಗೌಪ್ಯವಾಗಿಟ್ಟು ರಾಜಕೀಯವೇ ಬದುಕು ಎನ್ನುವಷ್ಟರ ಮಟ್ಟಿಗೆ ರಾಜಕೀಯ ಪ್ರಜ್ವಲಿಸುತ್ತಿದೆ. ರಾಜಕೀಯಕ್ಕೆ ಹೆಚ್ಚು ಗಮನ ಕೊಡುವ ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆಯಾಗಲಿ ಅಥವಾ ಮರ್ಯಾದೆ ಹತ್ಯೆಯಾಗಲಿ ತಡೆಯಲು ಏಕೆ ಸಾಧ್ಯವಾಗಿಲ್ಲ ಎಂದು ಪ್ರಶ್ನಿಸಿದರು.

ಜಿಲ್ಲೆಯಲ್ಲಿ ಜಾತಿ-ಬೇರು ಪ್ರಬಲವಾಗಿ ಬಿಟ್ಟಿದೆ. ಜಾತಿ, ಧರ್ಮದ ವ್ಯವಸ್ಥೆಯಲ್ಲಿ ಸಿಲುಕಿರುವ ಜನರು ದಿಕ್ಕು ಕಾಣದೆ ಮೌನವಾಗಿ ಸಮಾನ ಮನಸ್ಕರಂತೆ ಯೋಚಿಸುವ ಚಿಂತನೆ ಮರೆತಿದ್ದಾರೆ. ಜಿಲ್ಲೆಯಲ್ಲಿ ಇವತ್ತಿಗೂ ಮೂಲಸೌಕರ್ಯ ಇಲ್ಲದ ಎಷ್ಟೋ ಹಳ್ಳಿಗಳಿವೆ. ಸಂವಿಧಾನ ಪ್ರಕಾರ ತಮ್ಮ ಹಕ್ಕುಗಳನ್ನು ಪಡೆಯದ ಜನರು ಕಷ್ಟದ ಬದುಕು ನಡೆಸುತ್ತಿದ್ದಾರೆ. ಇಂತಹ ಗಂಭೀರ ಸಮಸ್ಯೆಗಳ ಬಗ್ಗೆ ಜಿಲ್ಲೆಯ ಪ್ರಜ್ಞಾವಂತರು ಒಗ್ಗೂಡಿ ಸಮಸ್ಯೆ ಬಗೆಹರಿಸಲು ಸರ್ಕಾರದ ಜತೆ ತುರ್ತು ಚರ್ಚೆ ನಡೆಸಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸಂಘದ ಜಿಲ್ಲಾಧ್ಯಕ್ಷ ಪ್ರೊ.ಜಯಪ್ರಕಾಶ್‌ಗೌಡ ಮಾತನಾಡಿದರು. ರಂಗಭೂಮಿ ನಿರ್ದೇಶಕ, ಬರಹಗಾರ ಮಲ್ಲಿಕಾರ್ಜುನ ಮಹಾಮನೆ, ಶ್ರೀರಂಗಪಟ್ಟಣ ರಮೇಶ್ ಪರಿಸರ, ಕರವೇ ಮಹಿಳಾ ಜಿಲ್ಲಾಧ್ಯಕ್ಷೆ ಭಾರತಿ ಕುಮಾರ್, ಪುಸ್ತಕ ಪ್ರೇಮಿ ಅಂಕೇಗೌಡ, ವಿಜಯ ಕಾಲೇಜಿನ ಕನ್ನಡ ಉಪನ್ಯಾಸಕ ಎನ್.ಚಲುವೇಗೌಡ ಅವರನ್ನು ಸನ್ಮಾನಿಸಲಾಯಿತು.

ಸಮಾರಂಭದ ನಂತರ ಎಂ.ಸಿ.ರಾಮು ರಚನೆ ನಿದ್ರಾನಗರಿ ಮತ್ತು ಗಜಾನನ ಶರ್ಮ ರಚನೆಯ ಅಂಚಿನಮನೆ ಪರಸಪ್ಪ ಎಂಬ ನಾಟಕ ಪ್ರದರ್ಶನಗೊಂಡಿತು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಡಾ.ನಂದೀಶ್, ರಂಗಸಿಂಚನ ಅಭಿನಯ ಟ್ರಸ್ಟ್ ಅಧ್ಯಕ್ಷೆ ಸುನೀತಾ ರಾಮಾಚಾರಿ, ಕವಿ ಪಟ್ಟಸೋಮನಹಳ್ಳಿ ಗಾನಸುಮಾ, ಕುಂತಿಬೆಟ್ಟದ ಶಾಲೆ ನಿವೃತ್ತ ಉಪನ್ಯಾಸಕ ಚಂದ್ರಶೇಖರಯ್ಯ, ಲೇಖಕ ಅನಾರ್ಕಲಿ ಸಲೀಂ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *