ಬಲಿಗಾಗಿ ಕಾದಿವೆ ಸೇತುವೆಗಳು

ಚನ್ನಪಟ್ಟಣ: ಮುಖ್ಯಮಂತ್ರಿಗಳ ಸ್ವಕ್ಷೇತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಅಭಿವೃದ್ದಿಗೊಂಡಿದ್ದರೂ ಅಧಿಕಾರಿಗಳ ಉದಾಸೀನತೆಯಿಂದ ಮಾರ್ಗದಲ್ಲಿರುವ ಕಿರಿದಾದ ಸೇತುವೆಗಳು ಬಲಿಗಾಗಿ ಕಾಯುತ್ತಿವೆ.

ಈ ರಸ್ತೆ ಕಬ್ಬಾಳು ದೇವಸ್ಥಾನ, ಪ್ರವಾಸಿ ತಾಣಗಳಾದ ಸಂಗಮ, ಮೇಕೆದಾಟು, ಮುತ್ತತ್ತಿ ಸೇರಿ ಸಾತನೂರು, ಕನಕಪುರ ಹಾಗೂ ಹಲಗೂರು ಪಟ್ಟಣಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಪತ್ರಿನಿತ್ಯ ಸಾವಿರಾರು ವಾಹನಗಳು ಸಂಚರಿಸುವ ಈ ರಸ್ತೆಯನ್ನು ಎರಡು ವರ್ಷಗಳ ಹಿಂದೆ ನಗರದ ಮಹದೇಶ್ವರ ದೇವಸ್ಥಾನದಿಂದ ಬುಕ್ಕಸಾಗರ ಗೇಟ್​ವರೆಗೆ ಅಭಿವೃದ್ದಿಗೊಳಿಸಲಾಗಿದೆ. ರಾಜ್ಯ ಹೆದ್ದಾರಿಯಾಗಿರುವ ಈ ರಸ್ತೆಯಲ್ಲಿ ವಾಹನಗಳು ವೇಗವಾಗಿ ಚಲಿಸುತ್ತವೆ.

ಈ ರಸ್ತೆಯಲ್ಲಿ ಬಿ.ವಿ. ಹಳ್ಳಿಯಿಂದ ಸಿಂಗರಾಜಪುರ ಗ್ರಾಮದವರೆಗೆ ಕಿರಿದಾದ 4 ಸೇತುವೆಗಳಿದ್ದು, ರಸ್ತೆ ವಿಸ್ತರಣೆ ವೇಳೆ ಇವುಗಳನ್ನು ವಿಸ್ತರಿಸದೆ ಬಿಟ್ಟಿರುವುದು ಅಪಾಯಕ್ಕೆ ಆಹ್ವಾನ ನೀಡಿದಂತಿದೆ. ಸೇತುವೆಗಳು ಬಹಳ ಕಿರಿದಾಗಿದ್ದು, ವಾಹನಗಳು ಸಂಚರಿಸುವ ವೇಳೆ ಎದುರಿಗೆ ಬರುವ ವಾಹನ ಅನತಿ ದೂರದಲ್ಲಿ ನಿಲ್ಲಬೇಕಾಗಿದೆ. ಒಂದು ಕ್ಷಣ ಸವಾರನ ಗಮನ ತಪ್ಪಿದರೆ ಅನಾಹುತ ಕಟ್ಟಿಟ್ಟಬುತ್ತಿ.

ಸಾವಿನ ಸೇತುವೆ: ಸೇತುವೆ ಅಕ್ಕಪಕ್ಕದಲ್ಲಿ ಹಳೇ ಮರಗಳಿದ್ದು, ಜತೆಗೆ ರಸ್ತೆಯಲ್ಲಿ ಕಡಿದಾದ ತಿರುವುಗಳಿವೆ. ಇದರಿಂದ ಎದುರು ಬರುವ ವಾಹನದ ಬಗ್ಗೆ ಸುಳಿವು ಸಿಗುವುದಿಲ್ಲ. ಪ್ರತಿ ಮಂಗಳವಾರ, ಶುಕ್ರವಾರ ಮತ್ತು ಭಾನುವಾರ ಹಾಗೂ ವಿಶೇಷ ದಿನಗಳಲ್ಲಿ ಕಬ್ಬಾಳಮ್ಮನ ಸನ್ನಿಧಿಗೆ ನೂರಾರು ವಾಹನಗಳಲ್ಲಿ ಪ್ರಯಾಣಿಕರು ಸಂಚರಿಸುತ್ತಾರೆ. ಈ ಸೇತುವೆಗಳ ಪರಿವೇ ಇಲ್ಲದೇ ಅಪಘಾತಗಳಾಗಿ ಕೈಕಾಲು ಮುರಿದುಕೊಂಡಿರುವುದು, ಪ್ರಾಣಾಪಾಯಗಳಾಗಿರುವ ಹಲವು ಉದಾಹರಣೆಗಳಿವೆ.

ಲೋಕೋಪಯೋಗಿ ಇಲಾಖೆ ನಿರ್ಲಕ್ಷ್ಯ: ಹಲವಾರು ವರ್ಷಗಳಿಂದ ಸಮಸ್ಯೆ ಇದ್ದರೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸದಿರುವುದು ಈ ಭಾಗದ ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ. ರಸ್ತೆ ವಿಸ್ತರಣೆ ವೇಳೆ ಸೇತುವೆಗಳ ವಿಸ್ತರಣೆ ಕಾಮಗಾರಿಯನ್ನು ಕ್ರಿಯಾ ಯೋಜನೆಗೆ ಸೇರಿಸದಿರುವುದು ಯಾಕೆ ಎಂಬುದು ಯಕ್ಷಪ್ರಶ್ನೆಯಾಗಿದೆ. ಸೇತುವೆಗಳ ಬಳಿ ಅಪಘಾತ ಸೂಚನಾ ಫಲಕ ಹಾಕಿ ಇಲಾಖೆ ಕೈತೊಳೆದುಕೊಂಡಿರುವುದೇ ಸಾಧನೆಯಾಗಿದೆ. ಇದೀಗ ಈ ರಸ್ತೆಯ ಉಸ್ತುವಾರಿಯನ್ನು ಹೆದ್ದಾರಿ ಪ್ರಾಧಿಕಾರಕ್ಕೆ ವರ್ಗಾಯಿಸಿರುವುದಾಗಿ ಲೋಕೋಪ ಯೋಗಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದೇ ರಸ್ತೆಯಲ್ಲಿ ಚನ್ನಪಟ್ಟಣದಿಂದ ಸ್ವಗ್ರಾಮಕ್ಕೆ ಸಂಚರಿಸುವ ಸಚಿವ ಡಿ.ಕೆ ಶಿವಕುಮಾರ್, ಸಂಸದ ಡಿ.ಕೆ ಸುರೇಶ್ ಅವರಿಗೆ ಈ ಭಾಗದ ಮುಖಂಡರು ಸೇತುವೆ ಸಮಸ್ಯೆ ಬಗ್ಗೆ ಗಮನ ಸೆಳೆದಿದ್ದಾರೆ. ಮುಖ್ಯಮಂತ್ರಿ ಕ್ಷೇತ್ರದಲ್ಲಿರುವ ಈ ಸಾವಿನ ಸೇತುವೆಗಳನ್ನು ಇನ್ನಾದರೂ ವಿಸ್ತರಣೆ ಮಾಡಿ ವಾಹನ ಸವಾರರು ನೆಮ್ಮದಿಯಾಗಿ ಸಂಚರಿಸಲು ಅನುವು ಮಾಡಿಕೊಡುವರೇ ಕಾದು ನೋಡಬೇಕಾಗಿದೆ.

ಕಿರಿದಾದ ಸೇತುವೆಗಳನ್ನು ವಿಸ್ತರಿಸಿ, ಅಭಿವೃದ್ಧಿಗೊಳಿಸಲು ಟೆಂಡರ್ ಪ್ರಕ್ರಿಯೆ ಚಾಲನೆಯಲ್ಲಿದೆ. ಚುನಾವಣಾ ನೀತಿಸಂಹಿತೆ ಮುಗಿದ ತಕ್ಷಣ ಕಾಮಗಾರಿ ಆರಂಭಿಸಲಾಗುವುದು. ಈ ಮಾರ್ಗದ ರಸ್ತೆಯಲ್ಲಿ ಯಾವುದೇ ಸಮಸ್ಯೆಯಾಗದಂತೆ ಅಭಿವೃದ್ದಿಗೊಳಿಸಲಾಗುವುದು.

| ಮೋಹನ್​ಲಾಲ್ ಎಇಇ, ರಾಷ್ಟ್ರೀಯ ಹೆದ್ದಾರಿ ಅಭಿವೃದ್ದಿ ಪ್ರಾಧಿಕಾರ, ಬೆಂಗಳೂರು ಉಪವಿಭಾಗ

 

ಪ್ರತಿನಿತ್ಯ ಈ ರಸ್ತೆಯಲ್ಲಿ ನೂರಾರು ವಾಹನಗಳು ಸಂಚಾರ ಮಾಡುತ್ತವೆ. ಈ ಕಿರಿದಾದ ಸೇತುವೆಗಳಿಂದ ರಾತ್ರಿ ವೇಳೆ ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ. ಈ ರಸ್ತೆ ಅಭಿವೃದ್ದಿಯಾದ ನಂತರ ಕನಕಪುರ, ಬೆಂಗಳೂರು ಮಾರ್ಗದ ವಾಹನಗಳ ಸಂಚಾರ ಅಧಿಕವಾಗಿದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಸೇತುವೆಗಳ ವಿಸ್ತರಣೆಗೆ ಕ್ರಮ ಕೈಗೊಳ್ಳಬೇಕು.

| ರವಿಕುಮಾರ್ ಹನಿಯೂರು ಗ್ರಾಮಸ್ಥ