ಬಲಾಢ್ಯರ ಪಾಲಾದ 4 ಕೋಟಿ ರೂ.?

ಚನ್ನಪಟ್ಟಣ: ಕೇಂದ್ರ ತೆಂಗು ಅಭಿವೃದ್ಧಿ ಮಂಡಳಿಯಿಂದ ರೈತರಿಗೆ ನೀಡುವ ಸವಲತ್ತುಗಳು ತಾಲೂಕಿನಲ್ಲಿ ಅರ್ಹ ಫಲಾನುಭವಿಗಳಿಗೆ ತಲುಪದೆ ಬಲಾಢ್ಯರ ಪಾಲಾಗಿವೆ. ಇದರಲ್ಲಿ 4 ಕೋಟಿ ರೂ.ಗಳಿಗೂ ಅಧಿಕ ವಂಚನೆ ನಡೆದಿದೆ ಎಂದು ಆರ್​ಟಿಐ ಕಾರ್ಯಕರ್ತ ರೋಹಿತ್ ಆರೋಪಿಸಿದ್ದಾರೆ.

ಕೇಂದ್ರ ತೆಂಗು ಅಭಿವೃದ್ಧಿ ಮಂಡಳಿ ತಾಲೂಕಿನ ತೆಂಗು ಬೆಳೆಗಾರರ ಸಂಘದ ಮೂಲಕ ರೈತರಿಗೆ ರಸಗೊಬ್ಬರ, ಬೇವಿನಹಿಂಡಿ, ಬಿತ್ತನೆ ಬೀಜ, ಟ್ರಾ್ಯಕ್ಟರ್, ಟಿಲ್ಲರ್, ತೆಂಗಿನ ಮರ ಹತ್ತುವ ಯಂತ್ರ ಸೇರಿ ಯಂತ್ರೋಪಕರಣಗಳನ್ನು ವಿತರಣೆ ಮಾಡಿದೆ. ಆದರೆ, ಇವು ಅರ್ಹ ರೈತರಿಗೆ ತಲುಪಿಲ್ಲ. ಬೇನಾಮಿ ಸಂಘಗಳನ್ನು ರಚಿಸಿಕೊಂಡು ಕೆಲ ಪ್ರಭಾವಿಗಳು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ತಾಲೂಕಿನಲ್ಲಿ 7 ಸಂಘಗಳು ಕಾರ್ಯನಿರ್ವಹಿಸುತ್ತಿವೆ. ಆದರೆ, ಸದಸ್ಯರಿಗೆ ತಾವು ಸಂಘದ ಸದಸ್ಯರೆಂಬ ಮಾಹಿತಿಯೇ ಇಲ್ಲ. ಆ ರೈತರ ಹೆಸರಿನಲ್ಲಿ ಬೇರೆಯವರು ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ. ಆರ್​ಟಿಇ ಮೂಲಕ ಪಡೆದ ದಾಖಲೆಗಳಲ್ಲಿ ಈ ಎಲ್ಲ ಮಾಹಿತಿಗಳು ಲಭ್ಯವಾಗಿದ್ದು, ಕಳೆದ 10 ವರ್ಷಗಳಿಂದ ಬಹಳಷ್ಟು ಸವಲತ್ತುಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆಪಾದಿಸಿದರು.

ದಲಿತರ ಹೆಸರಲ್ಲಿ ದೋಖಾ: ತಾಲೂಕಿನ ಎಸ್.ಎಂ.ದೊಡ್ಡಿ ಗ್ರಾಮದ ಶ್ರೀ ಬಸವೇಶ್ವರ ತೆಂಗು ಅಭಿವೃದ್ಧಿ ಸಂಘ ಎಂಬ ಹೆಸರಿನಲ್ಲಿ ಸಂಘಟನೆಯೊಂದು ಮಂಡಳಿಯಲ್ಲಿ ನೋಂದಣಿಯಾಗಿದೆ. ಈ ಸಂಘದ ಸದಸ್ಯರೆಲ್ಲರೂ ದಲಿತರು ಎಂದು ಮಂಡಳಿಗೆ ದಾಖಲೆ ನೀಡಲಾಗಿದೆ. ಆದರೆ, ಈ ಗ್ರಾಮದಲ್ಲಿ ಒಂದೇ ಒಂದು ದಲಿತ ಕುಟುಂಬ ವಾಸವಾಗಿಲ್ಲ, ಬೇರೆ ಯಾರ್ಯಾರದೋ ದಾಖಲೆ ಸೇರಿಸಿ ಸಂಘ ರಚಿಸಿ ಮಂಡಳಿಗೆ ದೋಖಾ ಮಾಡಲಾಗಿದೆ. ಮರ ಹತ್ತುವ ಯಂತ್ರ ಹಾಗೂ ಗೊಬ್ಬರವನ್ನು ನಗರದ ಕೆಲ ಕೃಷಿ ಅಂಗಡಿಗಳ ಮೂಲಕ ಮಾರಾಟ ಮಾಡಲಾಗಿದೆ. ಈ ಮೂಲಕ ಕೋಟ್ಯಂತರ ರೂ. ದುರ್ಬಳಕೆ ಮಾಡಲಾಗಿದೆ ಎಂದು ಗಂಭೀರ ಆರೋಪ ಮಾಡಿದರು.

ಹಿರಿಯ ರೈತ ಹೋರಾಟಗಾರ ಸಿ.ಪುಟ್ಟಸ್ವಾಮಿ, ಎಸ್.ಎಂ. ಹಳ್ಳಿ ಮೋಹನ್​ಕುಮಾರ್, ರಾಮಕೃಷ್ಣ, ಚನ್ನೇಗೌಡ, ಮತ್ತಿತರರು ಇದ್ದರು.

ಮುಖ್ಯಮಂತ್ರಿ ಹಾಗೂ ಸಂಸದರಿಗೆ ಮನವಿ: ಮಂಡಳಿಯಲ್ಲಿ ನಡೆದಿರುವ ಹಗರಣದಲ್ಲಿ ತಾಲೂಕಿನ ಕೆಲ ರಾಜಕೀಯ ಪಕ್ಷಗಳ ಬೆಂಬಲಿಗರು ಹಾಗೂ ತೆಂಗು ಅಭಿವೃದ್ಧಿ ಮಂಡಳಿ ಅಧಿಕಾರಿಗಳು ಶಾಮೀಲಾಗಿದ್ದಾರೆ. ಇದರ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಯಬೇಕಾಗಿದ್ದು, ಇದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಆರ್​ಟಿಐ ಮೂಲಕ ಕಲೆ ಹಾಕಿದ್ದು, ಎಲ್ಲ ದಾಖಲೆಗಳನ್ನು ಪ್ರಧಾನಮಂತ್ರಿ, ಕೇಂದ್ರ ಕೃಷಿ ಸಚಿವರು, ಕ್ಷೇತ್ರದ ಸಂಸದರು ಮತ್ತು ವಿಶೇಷವಾಗಿ ಗಮನ ಹರಿಸುವಂತೆ ಕ್ಷೇತ್ರಕ್ಕೆ ಆಗಮಿಸುತ್ತಿರುವ ಮುಖ್ಯಮಂತ್ರಿಗಳಿಗೆ ಸಲ್ಲಿಸುವುದಾಗಿ ರೋಹಿತ್ ತಿಳಿಸಿದರು.

Leave a Reply

Your email address will not be published. Required fields are marked *