ಬರ ಪರಿಸ್ಥಿತಿಗೆ ಪರಿಹಾರ ಕಂಡುಕೊಳ್ಳಿ

ಗದಗ: ಬರದಂತಹ ಸಂಕಷ್ಟ ಸ್ಥಿತಿಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು, ಪಿಡಿಒ ಹಾಗೂ ಕಂದಾಯ ನೀರಿಕ್ಷಕರು ಪ್ರವಾಸ ಕೈಗೊಂಡು ಪ್ರತಿಯೊಂದು ಗ್ರಾಮಕ್ಕೂ ಭೇಟಿ ನೀಡಿ ಬರದ ಪರಿಸ್ಥಿತಿ, ಸಮಸ್ಯೆಗಳನ್ನು ಜಿಲ್ಲಾಡಳಿತದ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳಬೇಕು ಎಂದು ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಹೇಳಿದರು.

ನಗರದ ಜಿಪಂ ಸಭಾಂಗಣದಲ್ಲಿ ಭಾನುವಾರ ಜರುಗಿದ ಜಿಲ್ಲೆಯ ಬರ ನಿರ್ವಹಣೆ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯ ಸಮಗ್ರ ಗ್ರಾಮಗಳಿಗೆ ನೀರು ಪೂರೈಸುವ ಡಿಬಿಒಟಿ (ಬಹುಗ್ರಾಮ ಕುಡಿಯುವ ನೀರಿನ ಯೋಜನೆ) ಯೋಜನೆಯಿಂದಾಗಿ ಜಿಲ್ಲಾಡಳಿತ ನಿರಾಳವಾಗಿ ಕೆಲಸ ಮಾಡುವ ಸ್ಥಿತಿ ಇರುವುದು ನೆಮ್ಮದಿಯ ವಿಷಯವಾಗಿದೆ ಎಂದರು.

ಬಿಸಿಲಿನ ತಾಪದಿಂದ ಪ್ರಾಣ ಹಾನಿಗಳಾಗಿದ್ದಲ್ಲಿ ನಿಯಮಾನುಸಾರ ಪರಿಹಾರ ನೀಡಬೇಕು. ಟಾಸ್ಕ್​ಫೋರ್ಸ್ ಅನುದಾನದಲ್ಲಿ ಜಿಲ್ಲೆಯ ಎಲ್ಲ ಗ್ರಾಮಗಳಲ್ಲಿ ಕುಡಿಯುವ ನೀರಿನ ಪೂರೈಕೆ ಪೈಪ್​ಗಳು ಮನೆ ಮನೆಗೂ ತಲುಪಬೇಕು. ಇದರಿಂದ ಭವಿಷ್ಯದಲ್ಲಿ ಪಂಚಾಯಿತಿಗಳಿಗೆ ಆದಾಯ ಹೆಚ್ಚುತ್ತದೆ. ಬೇಡಿಕೆಗೆ ಅನುಸಾರವಾಗಿ ಮೇವು ಬ್ಯಾಂಕ್ ಪ್ರಾರಂಭಿಸಬೇಕು. ಉದ್ಯೋಗ ಖಾತ್ರಿ ಯೋಜನೆಯಡಿ ಜಿಲ್ಲೆಯಲ್ಲಿ ರೈತರ ಜಮೀನು ಹಾಗೂ ಗ್ರಾಮಗಳಲ್ಲಿ ಜಲ ಸಂವರ್ಧನೆ ಹೆಚ್ಚಿಸುವ ಯೋಜನೆ ಕಾರ್ಯಗತಗೊಳಿಸಬೇಕು. ಮುಂಗಾರು ಹಂಗಾಮಿನಲ್ಲಿ ಮಳೆಯಾದ ತಕ್ಷಣ ರೈತರಿಗೆ ಅಗತ್ಯದ ಗುಣಮಟ್ಟದ ಬೀಜ, ಗೊಬ್ಬರ ಪೂರೈಸಲು, ಈಗಿನಿಂದಲೇ ದಾಸ್ತಾನು ಮಾಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಮಾತನಾಡಿ, ರಾಜ್ಯದಲ್ಲಿ ಮಳೆಗಾಗಿ ಪ್ರಾರ್ಥಿಸಿ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿನ 35 ಸಾವಿರ ದೇವಾಲಯಗಳಲ್ಲಿ ಪರ್ಜನ್ಯ ಜಪ ಏರ್ಪಡಿಸಲು ಚಿಂತನೆ ನಡೆಸಲಾಗುತ್ತಿದೆ ಎಂದರು.

ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮಾತನಾಡಿ, ಜಿಲ್ಲೆಯಲ್ಲಿ 2018-19ರ ಮುಂಗಾರು ಹಂಗಾಮಿನಲ್ಲಿ ಬಿತ್ತನೆಯಾದ 2.17 ಲಕ್ಷ ಹೆಕ್ಟೇರ್ ಪೈಕಿ 1.73 ಲಕ್ಷ ಹೆಕ್ಟೇರ್​ನಲ್ಲಿ ಬೆಳೆ ಹಾನಿಯಾಗಿದ್ದು 118.60 ಕೋಟಿ ರೂ. ಹಾಗೂ ಹಿಂಗಾರು ಹಂಗಾಮಿನಲ್ಲಿ 2 ಲಕ್ಷ ಹೆಕ್ಟೇರ್ ಬಿತ್ತನೆ ಪೈಕಿ 1.95 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದ್ದು 132.23 ಕೋಟಿ ರೂ. ಇನ್​ಪುಟ್ ಸಬ್ಸಿಡಿ ಬೇಡಿಕೆ ಸಲ್ಲಿಸಲಾಗಿದೆ. 2018-19ರ ಸಾಲಿನಲ್ಲಿ ಮುಂಗಾರು ಅವಧಿಯಲ್ಲಿ ಬರಪೀಡಿತ ಪ್ರದೇಶಗಳಲ್ಲಿ ಕುಡಿಯುವ ನೀರು ಪೂರೈಕೆಗೆ 2.07 ಕೋಟಿ ರೂ. ಹಾಗೂ ಹಿಂಗಾರು ಅವಧಿಯಲ್ಲಿ 1.30 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿಗಳನ್ನು ಕೈಕೊಳ್ಳಲಾಗಿದೆ ಎಂದು ಎಂದು ಹೇಳಿದರು.

ಜಿಪಂ ಸಿಇಒ ಮಂಜುನಾಥ ಚವ್ಹಾಣ ಮಾತನಾಡಿ, ಮಹಾತ್ಮಾ ಗಾಂಧೀಜಿ ಉದ್ಯೊಗ ಖಾತ್ರಿ ಯೋಜನೆಯಡಿ 2018-19ರಲ್ಲಿ 96.57 ಕೋಟಿ ರೂ. ವೆಚ್ಚದಲ್ಲಿ 26.07 ಲಕ್ಷ ಮಾನವ ಉದ್ಯೋಗಗಳನ್ನು ಸೃಷ್ಟಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ 140.77 ಕೋಟಿ ರೂ. ಅನುದಾನದ 32.01 ಲಕ್ಷ ಮಾನವ ದಿನಗಳನ್ನು ಸೃಜಿಸುವ ಗುರಿಯಿದ್ದು ಮೇ 14ರ ವರೆಗೆ 18.36 ಕೋಟಿ ರೂ. ವೆಚ್ಚದಲ್ಲಿ 2.60 ಲಕ್ಷ ಮಾನವ ದಿನಗಳ ಉದ್ಯೋಗ ಒದಗಿಸಲಾಗಿದೆ. ಈ ಯೋಜನೆಯಡಿ 100 ದಿನಗಳ ಬದಲಾಗಿ 150 ದಿನಗಳ ಉದ್ಯೋಗ ನೀಡಲಾಗುತ್ತಿದೆ ಎಂದು ಹೇಳಿದರು.

ತೋಟಗಾರಿಕೆ ಇಲಾಖೆ ಸಚಿವ ಎಂ.ಸಿ. ಮನಗೂಳಿ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಉಪವಿಭಾಗಾಧಿಕಾರಿ ಶಿವಾನಂದ ಭಜಂತ್ರಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ರಾಜ್ಯದಲ್ಲಿ 2999 ಗ್ರಾಮಗಳಿಗೆ ಟ್ಯಾಂಕರ್ ನೀರು
ರಾಜ್ಯದಲ್ಲಿ ಬರಗಾಲ ತೀವ್ರ ಸ್ವರೂಪ ಪಡೆದಿರುವುದರಿಂದ ಒಟ್ಟು 2,999 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ ಎಂದು ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಹೇಳಿದರು.

ಈಗಾಗಲೇ 30 ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜಂಟಿ ಖಾತೆಯಲ್ಲಿ ಸುಮಾರು 730 ಕೋಟಿ ರೂ. ಇದೆ. ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ಮೇವಿನ ಅಭಾವವಾಗದಂತೆ, ಜನರಿಗೆ ಉದ್ಯೋಗ ದೊರೆಯುವಂತೆ ಹಾಗೂ ಗುಳೆ ಹೋಗದಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಕ್ರಮ ಜರುಗಿಸಲು ಸೂಚಿಸಲಾಗಿದೆ ಎಂದರು.

ಕಳೆದ ಬಾರಿ ರಾಜ್ಯದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ 10.47 ಕೋಟಿ ಮಾನವ ದಿನಗಳನ್ನು ಉತ್ಪದಿಸಲಾಗಿತ್ತು. ಪ್ರಸಕ್ತ ಸಾಲಿನಲ್ಲಿ 13 ಕೋಟಿ ಮಾನವ ದಿನಗಳನ್ನು ಉತ್ಪಾದಿಸುವ ಗುರಿ ಹೊಂದಲಾಗಿದೆ. ರಾಜ್ಯದಲ್ಲಿ ಕಳೆದ 14 ವರ್ಷಗಳಿಂದ ಸತತ ಬರಗಾಲವಿದ್ದು, ಪ್ರತಿ ವರ್ಷ ತಲೆದೋರುವ ಬರಗಾಲವನ್ನು ಎದುರಿಸಲು ಶಾಶ್ವತ ಪರಿಹಾರ ಕ್ರಮ ಕಂಡುಕೊಳ್ಳಬೇಕಾಗಿದೆ. ಈ ಕುರಿತಂತೆ ಜಿಲ್ಲಾಡಳಿತ ಸ್ಥಳೀಯ ಹಾಗೂ ಅಗತ್ಯ ಸಂಪನ್ಮೂಲಗಳನ್ನು ಆಧಾರವಾಗಿಟ್ಟುಕೊಂಡು ಪ್ರಸ್ತಾವನೆಯನ್ನು ತಯಾರಿಸಲು ಸೂಚಿಸಲಾಗಿದೆ ಎಂದರು.

Leave a Reply

Your email address will not be published. Required fields are marked *