ಬರ ನಿರ್ವಹಣೆಗೆ 730 ಕೋಟಿ ರೂ.

ಹುಬ್ಬಳ್ಳಿ: ಎಲ್ಲ ಜಿಲ್ಲೆಗಳಲ್ಲಿ ಬರ ನಿರ್ವಹಣೆಗೆ ರಾಜ್ಯ ಸರ್ಕಾರ 730 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದು, ಶಾಶ್ವತ ಬರ ನಿರ್ವಹಣೆಗೆ ಆದ್ಯತೆ ನೀಡಲಾಗಿದೆ ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ ತಿಳಿಸಿದರು.

ತಾಲೂಕಿನ ಶಿರಗುಪ್ಪಿ ಗ್ರಾಮದಲ್ಲಿ ಮಂಗಳವಾರ ಮೇವು ಬ್ಯಾಂಕ್ ವೀಕ್ಷಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಮಾದರಿ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದುದರಿಂದ ಬರಪೀಡಿತ ಸ್ಥಳಗಳಿಗೆ ಅಧಿಕೃತವಾಗಿ ಭೇಟಿ ನೀಡಲು ಸಾಧ್ಯವಾಗಿರಲಿಲ್ಲ. ಆದರೂ ಬರ ನಿರ್ವಹಣೆ ಮಾಡಲು ಆಯಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ಅದರಂತೆಯೇ ಎಲ್ಲೆಡೆ ಕಾಮಗಾರಿ ನಡೆದಿದೆ ಎಂದರು.

ಈ ಬಾರಿಯೂ ಮುಂಗಾರು ದುರ್ಬಲವಾಗಿದ್ದು, ಬರ ಪರಿಸ್ಥಿತಿ ಮುಂದುವರಿಯುವ ಆತಂಕವಿದೆ. ಕುಡಿಯುವ ನೀರು ಪೂರೈಸಲು ಟ್ಯಾಂಕರ್ ಬಳಸುವ ಅಧಿಕಾರ ಜಿಲ್ಲಾಧಿಕಾರಿಗಳಿಗೆ ಮಾತ್ರ ಇತ್ತು. ಅದನ್ನು ವಿಕೇಂದ್ರೀಕರಣ ಮಾಡಿ ತಹಸೀಲ್ದಾರ್​ಗಳಿಗೆ ನೀಡಲಾಗಿದೆ. ಬೆಂಗಳೂರು ಮತ್ತು ಹುಬ್ಬಳ್ಳಿಯಿಂದ ಮೋಡ ಬಿತ್ತನೆ ಕಾರ್ಯ ನಡೆಸಲು ಸರ್ಕಾರ ನಿರ್ಧರಿಸಿದೆ. ಮುಖ್ಯವಾಗಿ ಯಾರೊಬ್ಬರೂ ಗುಳೆ ಹೋಗಬಾರದು ಎಂಬ ಉದ್ದೇಶದಿಂದ ನರೇಗಾ ಯೋಜನೆ ಅಡಿ ಉದ್ಯೋಗ ಸೃಜನೆ ಕಾಮಗಾರಿಗಳನ್ನು ಅಧಿಕ ಪ್ರಮಾಣದಲ್ಲಿ ಕೈಗೊಳ್ಳಲಾಗುತ್ತಿದೆ. ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಕನಿಷ್ಠ ಒಂದು ಕಾಮಗಾರಿಯನ್ನಾದರೂ ಕೈಗೊಳ್ಳಲು ಸೂಚಿಸಲಾಗಿದೆ. ಜನ, ಜಾನುವಾರುಗಳಿಗೆ ಕುಡಿಯುವ ನೀರು, ಮೇವು ಪೂರೈಸಲು ಸೂಚಿಸಲಾಗಿದೆ. ಯಾವುದೇ ಹಣಕಾಸಿನ ಕೊರತೆ ಇಲ್ಲ. ಜುಲೈ ಅಂತ್ಯದವರೆಗೂ ರಾಜ್ಯದಿಂದ ಮೇವು ಹೊರಗೆ ಕಳಿಸದಂತೆ ನಿರ್ಬಂಧ ಹೇರಲಾಗಿದೆ. 2005, 2007, 2010, 2017 ಹೊರತು ಪಡಿಸಿ ರಾಜ್ಯ ಕಳೆದ 14 ವರ್ಷದಿಂದ ಬರ ಎದುರಿಸಿದೆ. ಶಾಶ್ವತ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಯಬೇಕು. ಅರಣ್ಯ ಬೆಳೆಸಿ ನಿಸರ್ಗ ಕಾಪಾಡಬೇಕು ಎಂದು ಸಚಿವರು ಹೇಳಿದರು.

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎನ್. ಎಚ್. ಕೋನರಡ್ಡಿ, ನವಲಗುಂದ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ, ಜಿಪಂ ಸದಸ್ಯೆ ಚೈತ್ರಾ ಶಿರೂರ, ಜಿಲ್ಲಾಧಿಕಾರಿ ದೀಪಾ ಚೋಳನ್, ಜಿಪಂ ಸಿಇಒ ಡಾ.ಬಿ.ಸಿ. ಸತೀಶ, ಉಪವಿಭಾಗಾಧಿಕಾರಿ ಮಹ್ಮದ್ ಜುಬೇರ್, ಹುಬ್ಬಳ್ಳಿ ಗ್ರಾಮೀಣ ತಹಸೀಲ್ದಾರ್ ಸಂಗಮೇಶ ಬಾಡಗಿ, ಪಶುಪಾಲನೆ ಇಲಾಖೆಯ ಉಪನಿರ್ದೇಶಕ ಡಾ. ವಿಶಾಲ್ ಅಡಹಳ್ಳೀಕರ್ ಇತರರು ಇದ್ದರು.

ಮೇವು, ನೀರಿನ ಕೊರತೆಯಾಗದಂತೆ ನೋಡಿಕೊಳ್ಳಿ :ಹುಬ್ಬಳ್ಳಿ ತಾಲೂಕಿನ ಶಿರಗುಪ್ಪಿಗೆ ಭೇಟಿ ನೀಡಿ ಸಚಿವ ಆರ್.ವಿ. ದೇಶಪಾಂಡೆ ಅವರು ಮೇವು ಬ್ಯಾಂಕ್ ಕಾರ್ಯಚಟುವಟಿಕೆಗಳನ್ನು ವೀಕ್ಷಿಸಿದರು. ಮೇವು ಮತ್ತು ನೀರಿನ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಅಗತ್ಯ ಬಿದ್ದಲ್ಲಿ ಅನುದಾನ ಬಿಡುಗಡೆ ಮಾಡಿ, ಬಳಕೆ ಮಾಡುವಂತೆ ಡಿಸಿ ದೀಪಾ ಚೋಳನ್ ಅವರಿಗೆ ಸೂಚಿಸಿದರು. ಸಚಿವರು, ನಿಗದಿಪಡಿಸಿದ ಕೆಲ ಸ್ಥಳಗಳಿಗೆ ಭೇಟಿ ನೀಡದೇ ಇದೊಂದೇ ಕೇಂದ್ರವನ್ನು ವೀಕ್ಷಿಸಿದರು.

Leave a Reply

Your email address will not be published. Required fields are marked *