ಬರೆದಿರದ ಐತಿಹ್ಯವೂ ಅಧ್ಯಯನವಾಗಲಿ

ಶಿರಸಿ: ಓದು ಬರಹ ಇಲ್ಲದ ದಿನಗಳ ಇತಿಹಾಸದ ಬಗ್ಗೆಯೂ ಅಧ್ಯಯನ ನಡೆಸಬೇಕಾದ ಅಗತ್ಯ ಇದೆ ಎಂದು ಧಾರವಾಡ ಕರ್ನಾಟಕ ವಿಶ್ವ ವಿದ್ಯಾಲಯ ಕುಲಪತಿ ಡಾ. ಪ್ರಮೋದ ಗಾಯಿ ಹೇಳಿದರು.

ತಾಲೂಕಿನ ಸ್ವರ್ಣವಲ್ಲೀ ಸಂಸ್ಥಾನದಲ್ಲಿ ಹಮ್ಮಿಕೊಳ್ಳಲಾದ ಎರಡು ದಿನಗಳ ರಾಜ್ಯಮಟ್ಟದ ಇತಿಹಾಸ ಸಮ್ಮೇಳನಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು. ಇತಿಹಾಸ ಅಧ್ಯಯನ ಎಂದರೆ ಈಗಾಗಲೇ ಸಿದ್ಧಗೊಂಡ, ಲಿಖಿತ ರೂಪದಲ್ಲಿರುವ ಸಂಗತಿಗಳ ಬಗ್ಗೆ ಅಭ್ಯಾಸ ಮಾಡುವುದಲ್ಲ. ಜಗತ್ತಿನಲ್ಲಿ ಸಂಶೋಧನೆ ಹೆಚ್ಚಿದಂತೆ ಮಾನವನ ಉಗಮ, ನಂತರದ ಜೀವನ ಕ್ರಮದ ಬಗ್ಗೆ ತಿಳಿದುಕೊಳ್ಳುವ ಆಸಕ್ತಿಯೂ ಹೆಚ್ಚುತ್ತಿದೆ. ಜಗತ್ತಿನಲ್ಲಿ ಇದುವರೆಗೂ ನಡೆದ ಘಟನೆಗಳು ಒಂದು ದಿನ ಎಂದು ಊಹಿಸಿಕೊಂಡರೆ ಲಿಖಿತ ರೂಪದಲ್ಲಿರುವ ಘಟನೆಗಳು ಒಂದು ನಿಮಿಷದಷ್ಟೇ ಆಗಿದೆ. ಬರವಣಿಗೆ ಆರಂಭಗೊಳ್ಳದ ದಿನಗಳ ಬಗ್ಗೆ ನಾವು ಅಧ್ಯಯನ ಮಾಡಬೇಕಾದರೆ ಹಿಂದಿನ ಮನುಷ್ಯರ, ಜೀವಿಗಳ ಎಲುವುಗಳು, ಆ ಸ್ಥಳಗಳಲ್ಲಿರುವ ಕಲ್ಲುಗಳು ಸಾಕ್ಷ್ಯಾಗಿ ಬಳಸಿಕೊಳ್ಳಬೇಕಾಗಿದೆ. ಎಲುವುಗಳಲ್ಲಿರುವ ಡಿಎನ್​ಎ, ಕ್ರೋಮೋಸೋಮ್ಳನ್ನು ಪರೀಕ್ಷಿಸಿ ಅಂದಿನ ಜೀವನ ಯಾವ ರೀತಿಯಾಗಿತ್ತು, ಅಂದಿನ ಮನುಷ್ಯರ ಆರೋಗ್ಯ ಸ್ಥಿತಿ ಹೇಗಿತ್ತು, ಸಾವುಗಳು ಹೇಗೆ ಸಂಭವಿಸುತ್ತಿತ್ತು ಎಂಬುದನ್ನು ಧಾರವಾಡ ವಿಶ್ವ ವಿದ್ಯಾಲಯ ಅಭ್ಯಾಸ ನಡೆಸುತ್ತಿದೆ. ಕ್ಯಾನ್ಸರ್​ನಂತಹ ರೋಗಗಳ ಮುನ್ಸೂಚನೆ ಕ್ರೋಮೋಸೋಮ್ಳ ಅಧ್ಯಯನದಿಂದ ಸಾಧ್ಯವಾಗುತ್ತದೆ. ಹೀಗಾಗಿ, ಅಂದಿನ ಜೀವನ ಕ್ರಮದ ಬಗ್ಗೆ ಹೆಚ್ಚು ತಿಳಿದಷ್ಟೂ ಪ್ರಯೋಜನಕಾರಿಯಾಗಲಿದೆ’ ಎಂದರು.

ಸಾನ್ನಿಧ್ಯ ವಹಿಸಿದ್ದ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಮಾತನಾಡಿ, ‘ಭಾರತೀಯ ಇತಿಹಾಸ ಯೋಗ ಮತ್ತು ಅಧ್ಯಾತ್ಮ ಪ್ರಾಧಾನ್ಯತೆ ಹೊಂದಿದೆ. ಪಾಶ್ಚಿಮಾತ್ಯ ಇತಿಹಾಸ ಭೋಗ ಪ್ರಾಧಾನ್ಯವಾಗಿದೆ. ಹೀಗಾಗಿ, ಭಾರತೀಯ ಇತಿಹಾಸ ವಿಶ್ವದ ಗಮನ ಸೆಳೆಯುತ್ತಿದೆ. ನಮ್ಮ ಇತಿಹಾಸ ಪುಟಗಳಲ್ಲಿ ರಾಜರ ಬಗ್ಗೆ ಮಾಹಿತಿ ಇದ್ದಷ್ಟೇ ಮಹಾಪುರುಷರ ಬಗೆಗೂ ದಾಖಲೆಗಳಿವೆ. ಆದರೆ, ನಮ್ಮಲ್ಲಿ ಇತಿಹಾಸದ ಬಗ್ಗೆ ಚಿಂತನೆ ಮತ್ತು ಅಧ್ಯಯನ ಇತ್ತೀಚಿನ ವರ್ಷಗಳಲ್ಲಿ ಕಡಿಮೆಯಾಗುತ್ತಿದೆ. ಇತಿಹಾಸ ಪ್ರಜ್ಞೆ ಮರೆಯಾಗುವ ಮುನ್ನವೇ ಎಚ್ಚೆತ್ತುಕೊಳ್ಳಬೇಕಾದ ಅಗತ್ಯವಿದೆ’ ಎಂದರು.

ವೇದದ ಅನೇಕ ಗ್ರಂಥಗಳು ಒಂದು ಕಾಲದಲ್ಲಿ ಅಧ್ಯಯನಕ್ಕೆ ನಿರಾಸಕ್ತಿಯ ಕಾರಣದಿಂದಾಗಿ ಉಳಿದುಕೊಳ್ಳಲಿಲ್ಲ. ಈಗ ಈ ಗ್ರಂಥಗಳ ಅಧ್ಯಯನಕ್ಕೆ ಅವಕಾಶ ಇಲ್ಲದಂತಾಗಿದೆ. ನಾವು ಸಾಧ್ಯವಾದಷ್ಟೂ ಪ್ರಾದೇಶಿಕ ಇತಿಹಾಸಗಳ ಬಗ್ಗೆ ತಿಳಿದುಕೊಳ್ಳುವ ಯತ್ನ ನಡೆಸಬೇಕು’ ಎಂದರು.

ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ಇತಿಹಾಸ ತಜ್ಞ ಡಾ. ಎಚ್.ಎಸ್. ಗೋಪಾಲರಾವ್ ವಹಿಸಿದ್ದರು. ಅಂತಾರಾಷ್ಟ್ರೀಯ ಇತಿಹಾಸಕಾರ ಡಾ. ಅ. ಸುಂದರ, ಇತಿಹಾಸ ಅಕಾಡೆಮಿ ಅಧ್ಯಕ್ಷ ಡಾ. ದೇವರಕೊಂಡಾರೆಡ್ಡಿ, ಐಸಿಎಚ್​ಆರ್ ಸದಸ್ಯ ಡಾ. ಎಂ. ಕೊಟ್ರೇಶ್,ಅರಣ್ಯ ಇಲಾಖೆ ಪ್ರಮುಖ ಎಸ್.ಜಿ. ಹೆಗಡೆ, ಮೈಸೂರಿನ ಸಂಸ್ಕೃತಿ ಚಿಂತಕ ಬಾಲಸುಬ್ರಹ್ಮಣ್ಯ ಕೆಸ್ತೂರ್ ಇದ್ದರು. ಸಂಯೋಜಕ ಲಕ್ಷ್ಮೀಶ ಸೋಂದಾ ಪ್ರಾಸ್ತಾವಿಕ ಮಾತನಾಡಿದರು.

ಸಂಶೋಧನೆ ನಿರಂತರ ಕಾರ್ಯ: ಹಿಂದಾದ ಘಟನೆಗಳ ಬಗ್ಗೆ ಅರಿವು ಮೂಡಿಸಿ, ಮುಂದಾಗಬಹುದಾದ ಅನಾಹುತ ತಪ್ಪಿಸುವ, ಆಗಬೇಕಾದ ಕಾರ್ಯವನ್ನು ನೆನಪು ಮಾಡುವ ಕೊಂಡಿಯಾಗಿ ಇತಿಹಾಸ ಕಾರ್ಯ ನಿರ್ವಹಿಸುತ್ತದೆ. ಇತಿಹಾಸ ಸಂಶೋಧನೆ ನಿರಂತರ ಕಾರ್ಯ. ರೈತರು ಹೇಗೆ ತಮ್ಮ ಕಾರ್ಯ ನಿಲ್ಲಿಸುವುದಿಲ್ಲವೋ ಅದೇ ಮಾದರಿಯಲ್ಲಿಯೇ ಇತಿಹಾಸಕಾರ ಸದಾ ಕೆಲಸ ಮಾಡಬೇಕಾದ ಅಗತ್ಯ ಇದೆ ಎಂದು ಡಾ.ಎಚ್.ಎಸ್.ಗೋಪಾಲರಾವ್ ಹೇಳಿದರು. ಇತಿಹಾಸ ಸಮ್ಮೇಳನದ ಸರ್ವಾಧ್ಯಕ್ಷ ನುಡಿಯನ್ನಾಡಿದ ಅವರು, ಇತ್ತೀಚಿನ ವರ್ಷಗಳಲ್ಲಿ ಇತಿಹಾಸದ ಬಗ್ಗೆ ವಿದ್ಯಾರ್ಥಿಗಳ ಆಸಕ್ತಿ ಕಡಿಮೆಯಾಗುತ್ತಿದೆ. ಬೇರಾವ ವಿಷಯದಲ್ಲಿ ಅವಕಾಶ ಲಭಿಸದವರು ಇತಿಹಾಸ ಮತ್ತು ಭೂಗೋಳವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಶಿಕ್ಷಣ ತಜ್ಞರು ಈ ಬಗ್ಗೆ ಗಮನಹರಿಸಬೇಕಾಗಿದೆ. ನಮ್ಮ ಕಲೆ ಮತ್ತು ಸಂಸ್ಕೃತಿಗೆ ಅರಸರ ಕೊಡುಗೆ ಅದಮ್ಯವಾಗಿದೆ. ರಾಜ್ಯಾದ್ಯಂತ ಇರುವ ದೇವಾಲಯಗಳು, ಸುಂದರ ಕೆತ್ತನೆ ಇದಕ್ಕೆ ಸಾಕ್ಷಿಯಾಗಿದೆ. ಸಾಮಂತ ಅರಸರ ಕೊಡುಗೆ ಸಹ ಸದಾ ಸ್ಮರಿಸುವಂಥದ್ದಾಗಿದೆ. ರಾಜರು ಮತ್ತು ಅವರ ಆಳ್ವಿಕೆ ಅಧ್ಯಯನದಿಂದ ನಮಗೆ ಪ್ರಾದೇಶಿಕ ಇತಿಹಾಸ ಸ್ಪಷ್ಟವಾಗುತ್ತದೆ. ಪ್ರಾದೇಶಿಕ ಇತಿಹಾಸ ಅಧ್ಯಯನದ ಬಗ್ಗೆ ನಮ್ಮಲ್ಲಿ ಆಸಕ್ತಿ ಬರಬೇಕು. ಅಧ್ಯಯನಕ್ಕೆ ಬೇಕಾದ ಸಂಗತಿಗಳನ್ನು ಪತ್ತೆ ಮಾಡುವುದು ಈಗಿನ ಸ್ಥಿತಿಯಲ್ಲಿ ಕಷ್ಟವೆನಿಸುವುದಿಲ್ಲ ಎಂದು ಹೇಳಿದರು.

ಸದಾಶಿವರಾಯ ಪ್ರಶಸ್ತಿ ಪ್ರದಾನ ಇಂದು: ಭಾನುವಾರ ಸಂಜೆ 5 ಗಂಟೆಗೆ ಖ್ಯಾತ ಇತಿಹಾಸಕಾರ ಪ್ರೊ. ಲಕ್ಷ್ಮಣ ತೆಲಗಾವಿ ಅವರಿಗೆ ಸೋದೆ ಸದಾಶಿವರಾಯ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಡಾ. ಎಚ್.ಎಸ್.ಗೋಪಾಲರಾವ್ ಸರ್ವಾಧ್ಯಕ್ಷತೆಯಲ್ಲಿ ಸ್ವಾದಿ ಜೈನ ಮಠದ ಶ್ರೀ ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿ ಹಾಗೂ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ವಿಜಯನಗರ ಸಾಮ್ರಾಜ್ಯದ ಶ್ರೀಕೃಷ್ಣ ದೇವರಾಯ ವಂಶಸ್ಥ ಆನೆಗೊಂದಿ ಸಂಸ್ಥಾನದ ರಾಜಾ ಕೃಷ್ಣದೇವರಾಯ, ಹಂಪಿಯ ಡಾ. ವೆಂಕಟರಮಣ ದಳವಾಯಿ, ಪ್ರಾಚ್ಯವಸ್ತು ಇಲಾಖೆ ನಿರ್ದೇಶಕ ಡಾ. ಆರ್.ಗೋಪಾಲ, ಐಸಿಎಚ್​ಆರ್ ನಿರ್ದೇಶಕ ಡಾ. ಎಸ್.ಕೆ.ಅರುಣಿ, ಡಾ. ಅಮರೇಶ ಯತಗಲ್ ಪಾಲ್ಗೊಳ್ಳಲಿದ್ದು ಸಮಾರೋಪ ನುಡಿಯನ್ನು ಡಾ. ದಿವಾಕರ ಹೆಗಡೆ ಕೆರೆಹೊಂಡ ಆಡಲಿದ್ದಾರೆ.