ಬರಿದಾಗುತ್ತಿರುವ ಜಲಾಶಯಗಳು

ಚಿಕ್ಕಬಳ್ಳಾಪುರ: ಜಿಲ್ಲೆಯ ಬಹುತೇಕ ಜಲಾಶಯಗಳು ಬರಿದಾಗುತ್ತಿರುವ ಹಿನ್ನೆಲೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಸಲು ಸಮಸ್ಯೆಯಾಗಿದೆ.

ಚಿಕ್ಕಬಳ್ಳಾಪುರ ಮತ್ತು ದೊಡ್ಡಬಳ್ಳಾಪುರ ನಗರಕ್ಕೆ ಜಕ್ಕಲಮಡಗು ಜಲಾಶಯ, ಬಾಗೇಪಲ್ಲಿ ಪಟ್ಟಣ ಮತ್ತು ತಾಲೂಕಿನ ವಿವಿಧ ಗ್ರಾಮಗಳಿಗೆ ಚಿತ್ರಾವತಿ, ವಂಡಮಾನ್ ಜಲಾಶಯ, ಚಿಂತಾಮಣಿ ನಗರಕ್ಕೆ ಕನ್ನಂಪಲ್ಲಿ ಕೆರೆ ನೀರಿನ ಮೂಲಗಳಾಗಿವೆ. ಇವು ಹಲವು ತಿಂಗಳ ಹಿಂದೆ ತುಂಬಿದ್ದವು. ಆದರೆ, ಮಳೆ ಬಾರದ ಹಿನ್ನೆಲೆಯಲ್ಲಿ ನೀರು ಖಾಲಿಯಾಗಿದ್ದು, ನಿಧಾನವಾಗಿ ಸಮಸ್ಯೆ ಕಾಡಲಾರಂಭಿಸಿದೆ. ಜಲಾಶಯಗಳ ಬದಲಿಗೆ ಕೊಳವೆಬಾವಿ ಮೂಲಕ ನೀರು ಪೂರೈಸುವಂತಾಗಿದೆ.

ಜಕ್ಕಲಮಡಗು ಜಲಾಶಯದಲ್ಲಿ ಒಂದೂವರೆ ತಿಂಗಳಿಗಾಗುವಷ್ಟು ನೀರು ಲಭ್ಯವಿದೆ. 45 ಅಡಿ ಪೈಕಿ 9 ಅಡಿ ನೀರಿದ್ದು, ನಗರದ ವಿವಿಧ ವಾರ್ಡ್​ಗಳಿಗೆ ಪ್ರತಿನಿತ್ಯದ ಬದಲಿಗೆ ಮೂರ್ನಾಲ್ಕು ದಿನಕ್ಕೊಮ್ಮೆ ನೀರು ಹರಿಸಲಾಗುತ್ತಿದೆ. ಇದರಿಂದ ಜನರು ತೊಂದರೆ ಅನುಭವಿಸುವಂತಾಗಿದೆ.

ನಿರಂತರವಾಗಿ ಅಂತರ್ಜಲಮಟ್ಟ ಕುಸಿತ ಮತ್ತು ಫ್ಲೋರೈಡ್ ನೀರಿನ ಸಮಸ್ಯೆಯಿಂದ ತತ್ತರಿಸಿರುವ ಬಾಗೇಪಲ್ಲಿಯಲ್ಲೂ ಹಾಹಾಕಾರ ಹೆಚ್ಚಾಗಿದೆ. ಚಿತ್ರಾವತಿ ಜಲಾಶಯದಲ್ಲಿ 17.50 ಅಡಿ ಪೈಕಿ 7 ಅಡಿಯಷ್ಟು ಮಾತ್ರ (0.10ಟಿಎಂಸಿ ಪೈಕಿ 10ಎಂಸಿಎಫ್​ಟಿ ನೀರು ಮಾತ್ರ) ನೀರಿದೆ. ಇನ್ನೂ ಒಂದೂವರೆ ತಿಂಗಳು ಬಾಗೇಪಲ್ಲಿ ಪಟ್ಟಣಕ್ಕೆ ಮಾತ್ರ ಕುಡಿಯುವ ನೀರು ಪೂರೈಸಬಹುದಾಗಿದೆ. ಮತ್ತೊಂದೆಡೆ ಬಾಗೇಪಲ್ಲಿ ಮತ್ತು ಗುಡಿಬಂಡೆ ತಾಲೂಕಿನ 128 ಹಳ್ಳಿಗಳಿಗೆ ನೀರು ಪೂರೈಕೆ ಸ್ಥಗಿತಗೊಳಿಸಲಾಗಿದೆ. ಅಮಾನಿ ಭೈರಸಾಗರ ಕೆರೆಯಲ್ಲಿ ಪ್ರತಿ ವರ್ಷದಂತೆ ಸಮೃದ್ಧ ನೀರು ಇರುವುದರಿಂದ ಗುಡಿಬಂಡೆಯಲ್ಲಿ ಯಾವುದೇ ಸಮಸ್ಯೆ ಇಲ್ಲ.

ಚಿಂತಾಮಣಿಯ ಕನ್ನಂಪಲ್ಲಿ ಕೆರೆಯು ಬಹುತೇಕ ಬತ್ತಿದೆ. ಇದರಿಂದ ವಿವಿಧ ವಾರ್ಡ್​ಗಳಿಗೆ ಕೊಳವೆಬಾವಿ ಮತ್ತು ಖಾಸಗಿ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಉಳಿದಂತೆ ಗೌರಿಬಿದನೂರು, ಶಿಡ್ಲಘಟ್ಟದಲ್ಲಿ ಕೊಳವೆಬಾವಿಗಳೇ ಪ್ರಮುಖ ನೀರಿನ ಮೂಲಗಳಾಗಿವೆ.

ಮುಂಗಾರು ಪೂರ್ವ ಮಳೆ ಮೇ ಅಂತ್ಯದಿಂದ ಜುಲೈವರೆಗೂ ಆದರೆ ಜಲಾಶಯಗಳಲ್ಲಿ ನೀರು ಸಂಗ್ರಹವಾಗುತ್ತದೆ ಎಂಬುದು ಅಧಿಕಾರಿಗಳ ಲೆಕ್ಕಾಚಾರ.

ಕೊಳವೆಬಾವಿ ಆಸರೆ ಹೆಚ್ಚಳ: ಜಲಾಶಯಗಳು ಬರಿದಾಗುತ್ತಿರುವ ಹಿನ್ನೆಲೆ ಕೊಳವೆಬಾವಿ ಆಸರೆ ಹೆಚ್ಚಳವಾಗಿದೆ. ಜಿಲ್ಲೆಯ ಕುಡಿಯುವ ನೀರಿನ ಸಮಸ್ಯಾತ್ಮಕ 257 ಗ್ರಾಮ ಪೈಕಿ 116 ಹಳ್ಳಿಗೆ ಟ್ಯಾಂಕರ್, 141 ಗ್ರಾಮಗಳಿಗೆ ಖಾಸಗಿ ಕೊಳವೆಬಾವಿ ಮೂಲಕ ನೀರು ಪೂರೈಸಲಾಗುತ್ತಿದೆ. ಇದರ ನಡುವೆ ಸಮಸ್ಯಾತ್ಮಕ ಗ್ರಾಮಗಳಲ್ಲಿ ಕೊರೆಸಿರುವ 135 ಕೊಳವೆಬಾವಿಗಳ ಪೈಕಿ 88 ವಿಫಲವಾಗಿವೆ. ಆದರೂ ನೀರಿನ ಸಮಸ್ಯೆ ನಿವಾರಣೆಗೆ ಹಲವೆಡೆ ಕೊಳವೆಬಾವಿ ಕೊರೆಸಲಾಗುತ್ತಿದೆ.