ಬರಿದಾಗುತ್ತಿದೆ ಬೆಂಗ್ಳೂರು ಅಂತರ್ಜಲ

| ಅಭಯ್ ಮನಗೂಳಿ

ಬೆಂಗಳೂರು: ಬೇಸಿಗೆಗೂ ಮುನ್ನವೇ ರಾಜಧಾನಿಯ ಒಡಲು ಬರಿದಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಪ್ರಮುಖ ಕೆರೆಗಳು ಬತ್ತುತ್ತಿರುವ ಚಿತ್ರಣ ಒಂದೆಡೆಯಾದರೆ, ಇನ್ನೊಂದೆಡೆ ಬಹುಪಾಲು ಬೋರ್​ವೆಲ್​ಗಳು ನೀರಿಲ್ಲದೆ ನಿಷ್ಕಿ›ಯಗೊಳ್ಳುತ್ತಿವೆ.

ಬೆಳ್ಳಂದೂರು, ಜಯನಗರ ಬಳಿಯ ಭೈರಸಂದ್ರ ಕೆರೆ, ವರ್ತರು ಕೆರೆ ಸೇರಿ ಪ್ರಮುಖ ಕೆರೆಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿರುವುದು ಅಂತರ್ಜಲ ಕುಸಿತಕ್ಕೆ ಕಾರಣ. ಇನ್ನುಳಿದ ಕೆರೆಗಳಿಗೆ ತ್ಯಾಜ್ಯ ಸೇರುತ್ತಿರುವುದು ಸಮಸ್ಯೆ ಸೃಷ್ಟಿಸುತ್ತಿದೆ. ಭೈರಸಂದ್ರ ಕೆರೆಯಲ್ಲಿ ಕಳೆದೆರಡು ವರ್ಷಗಳಿಂದ ನೀರು ಸಂಗ್ರಹವಾಗಿತ್ತು. ಆದರೆ, ಈಗ ಈ ಕೆರೆ ಸಂಪೂರ್ಣ ಬರಿದಾಗಿದೆ. ಇದು ಆತಂಕಕ್ಕೆ ಕಾರಣವಾಗಿದೆ.

ನಗರದಲ್ಲಿ ಬೋರ್​ವೆಲ್​ಗಳ ಸಂಖ್ಯೆ ಮಿತಿಮೀರುತ್ತಿರುವ ಹಿನ್ನೆಲೆಯಲ್ಲಿ ಅಂತರ್ಜಲ ಬರಿದಾಗುತ್ತಿದೆ. ಅವಶ್ಯವಿದ್ದ ಕಡೆಗಳಲ್ಲಷ್ಟೇ ಬೋರ್​ವೆಲ್ ಕೊರೆಯಲು ಅನುಮತಿ ನೀಡಬೇಕಿರುವ ಸ್ಥಳೀಯ ಪ್ರಾಧಿಕಾರಗಳು ನಿಯಮಗಳನ್ನು ಗಾಳಿಗೆ ತೂರಿ ಅನುಮತಿ ನೀಡುತ್ತಿವೆ.

ಅರ್ಜಿ ಸಲ್ಲಿಕೆ ಹೆಚ್ಚಳ: ಬೋರ್​ವೆಲ್ ಕೊರೆಯಲು ಅನುಮತಿಗಾಗಿ ಸಲ್ಲಿಕೆಯಾಗುತ್ತಿರುವ ಅರ್ಜಿಗಳ ಸಂಖ್ಯೆಯೂ ಹೆಚ್ಚುತ್ತಿದೆ. ಜಲಮಂಡಳಿಗೆ ಪ್ರತಿತಿಂಗಳು ಅಂದಾಜು 300 ಅರ್ಜಿಗಳು ಬರುತ್ತಿವೆ. ಈ ಅರ್ಜಿಗಳನ್ನು ಸ್ವೀಕರಿಸುವ ಜಲಮಂಡಳಿ ಮುಂದಿನ ಕ್ರಮಕ್ಕಾಗಿ ಗಣಿ ಮತ್ತು ಭೂಗರ್ಭ ವಿಜ್ಞಾನ ಇಲಾಖೆಗೆ ರವಾನಿಸುತ್ತದೆ. ನಂತರ ಅಲ್ಲಿನ ಅಧಿಕಾರಿಗಳು ಅಂತರ್ಜಲ ಮಟ್ಟದ ತಿಳಿದು ಬೋರ್​ವೆಲ್ ಕೊರೆಯಲು ಅನುಮತಿ ನೀಡುವ ವಾಡಿಕೆಯಿದೆ. ಆದರೆ, ಒಂದೇ ಭಾಗದಲ್ಲಿ 10 ಬೋರ್​ವೆಲ್​ಗಳಿದ್ದು, ನೀರು ಬತ್ತಿದ್ದರೂ ಅಂಥ ಸ್ಥಳದಲ್ಲಿ ಕೊಳವೆಬಾವಿ ಕೊರೆಯಲು ಅಧಿಕಾರಿಗಳು ಅನುಮತಿ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ತತ್ಪರಿಣಾಮ ಪ್ರತಿವರ್ಷ ಕನಿಷ್ಠ 20 ಸಾವಿರಕ್ಕೂ ಹೆಚ್ಚು ಬೋರ್​ವೆಲ್​ಗಳು ಕೊರೆಯಲ್ಪಡುತ್ತಿವೆ ಎನ್ನಲಾಗಿದೆ.

ಅಪಾಯದ ಮಟ್ಟಕ್ಕೆ: ನಗರ ಜಿಲ್ಲೆಯ ಆನೇಕಲ್, ಉತ್ತರ ಹಾಗೂ ದಕ್ಷಿಣ ತಾಲೂಕುಗಳಲ್ಲಿ ಅಂತರ್ಜಲ ಅಪಾಯದ ಮಟ್ಟ ತಲುಪಿದೆ ಎಂದು ಕೇಂದ್ರ ಅಂತರ್ಜಲ ಮಂಡಳಿ ಈ ಹಿಂದೆಯೇ ತಿಳಿಸಿದೆ. ನಗರದ ಕೆರೆಗಳು ಮೂಲ ಸ್ವರೂಪದಲ್ಲಿ ಇದ್ದಿದ್ದರೆ 35 ಟಿಎಂಸಿವರೆಗೂ ನೀರು ಸಂಗ್ರಹಿಸಬಹುದು ಎಂಬುದನ್ನು ಐಐಎಸ್​ಸಿ ವಿಜ್ಞಾನಿಗಳು ಹೇಳಿದ್ದರು. ಆದರೆ, ಬಹುತೇಕ ಕೆರೆಗಳು ಒತ್ತುವರಿಯಾಗಿರುವ ಪರಿಣಾಮ ಎರಡು ಟಿಎಂಸಿ ನೀರು ಸಂಗ್ರಹವಾಗುವುದೂ ಕಷ್ಟ ಎಂಬ ಪರಿಸ್ಥಿತಿ ತಲೆದೋರಿದೆ.

ಮಳೆ ಪ್ರಮಾಣವೂ ಕಡಿಮೆ ಕಳೆದ ಮಳೆಗಾಲದಲ್ಲಿ ನಗರದಲ್ಲಿ 38.62 ಸೆಂ.ಮೀ. ಮಳೆಯಾಗಿತ್ತು. ಇದು ವಾಡಿಕೆಗಿಂತ ಕಡಿಮೆ. ಇದರಿಂದ ಸಹಜವಾಗಿ ಕೆರೆಗಳಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿದೆ. ರಾಜಧಾನಿಯಲ್ಲಿ 224ಕ್ಕೂ ಹೆಚ್ಚು ಕೆರೆಗಳಿವೆ. ಕೆಲವೇ ಕೆರೆಗಳು ಜೀವಕಳೆ ಹೊಂದಿವೆ. ಇನ್ನುಳಿದ ಬಹುಪಾಲು ಕೆರೆಗಳು ತ್ಯಾಜ್ಯದ ಸಮಸ್ಯೆಯಿಂದ ನಲುಗುತ್ತಿವೆ.