ಬರಿದಾಗಿದೆ ಅರೆಂದೂರು ಹಳ್ಳ

ಸಿದ್ದಾಪುರ: ಪಟ್ಟಣಕ್ಕೆ ಹಲವು ವರ್ಷಗಳಿಂದ ನೀರು ಒದಗಿಸುತ್ತಿದ್ದ ಅರೆಂದೂರು ಹಳ್ಳ ಬರಿದಾಗಿದೆ. ನಾಲಾದಲ್ಲಿ ನೀರು ಇಲ್ಲದೆ ಪಟ್ಟಣದ ಜನತೆಗೆ ಟ್ಯಾಂಕರ್ ಮೂಲಕ ನೀರು ಪೂರೈಸುವುದಕ್ಕೆ ಪಟ್ಟಣ ಪಂಚಾಯಿತಿ ಮುಂದಾಗಿದೆ.

ಪಟ್ಟಣದಲ್ಲಿ ಕಳೆದ ಎರಡು ತಿಂಗಳಿನಿಂದ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ಅರೆಂದೂರು ನಾಲಾದಲ್ಲಿ ನೀರು ಇರುವವರೆಗೆ ವಾರದಲ್ಲಿ ಒಂದೆರಡು ದಿನ ಬಿಡಲಾಗುತ್ತಿತ್ತು. ಆದರೆ, ಈಗ ನಾಲಾದಲ್ಲಿಯೇ ನೀರು ಇಲ್ಲದಿರುವುದರಿಂದ ನೀರು ಪೂರೈಕೆ ಮಾಡುವುದಕ್ಕೆ ಪಪಂ ಪಟ್ಟಣದಲ್ಲಿರುವ ಕೊಳವೆ ಬಾವಿಗೆ ಪಂಪ್ ಅಳವಡಿಸಿ 15 ವಾರ್ಡ್​ಗೂ ವಾರದಲ್ಲಿ 4 ದಿನಕೊಮ್ಮೆ ನೀರು ಪೂರೈಸುವುದಕ್ಕೆ ಮುಂದಾಗಿದೆ. ಸದ್ಯ ಪಪಂನ ಟ್ಯಾಂಕರ್ ಹಾಗೂ ಎರಡು ಸಾವಿರ ಲೀಟರ್​ನ ಎರಡು ಸಿಂಟೆಕ್ಸ್ ಮೂಲಕ ಮನೆ ಮನೆಗೆ ನೀರು ಸರಬರಾಜು ಮಾಡಲಾಗುತ್ತಿದೆ.

ಪಟ್ಟಣದಲ್ಲಿ 5 ಕೊಳವೆ ಬಾವಿ ಇದ್ದು, ಅದರಲ್ಲಿ ಈಗಾಗಲೇ ಎರಡು ಕೊಳವೆ ಬಾವಿಗೆ ಪಂಪ್ ಅಳವಡಿಸಿ ನೀರು ಶೇಖರಿಸಿ ಟ್ಯಾಂಕರ್ ಮೂಲಕ ನೀಡಲಾಗುತ್ತಿದೆ, ಆದರೆ ಜನರ ಅವಶ್ಯಕತೆಗೆ ಬೇಕಾಗುವಷ್ಟು ನೀರು ಮಾತ್ರ ಸಿಗುತ್ತಿಲ್ಲ ಎಂದು ನೀರು ಬಳಕೆದಾರರು ಆಡಿಕೊಳ್ಳುತ್ತಿದ್ದಾರೆ. ಪಟ್ಟಣದಲ್ಲಿ 14,500 ಜನಸಂಖ್ಯೆ ಇದ್ದು ಇವರಿಗೆ ಬೇಕಾಗುವಷ್ಟು ನೀರು ಪೂರೈಸುವುದಕ್ಕೆ ಪಟ್ಟಣ ಪಂಚಾಯಿತಿಗೆ ಆಗುತ್ತಿಲ್ಲ. ಮುಂಜಾಗ್ರತೆಯಾಗಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ.

ಶಾಶ್ವತ ಯೋಜನೆಗೆ ಕೂಗು: ಪಟ್ಟಣದಲ್ಲಿ ವರ್ಷದಿಂದ ವರ್ಷಕ್ಕೆ ಜನಸಂಖ್ಯೆ ಹೆಚ್ಚಾದಂತೆ ನೀರಿನ ಬಳಕೆಯೂ ಹೆಚ್ಚಾಗುತ್ತಿದೆ. ಭವಿಷ್ಯದಲ್ಲಿ ಅರೆಂದೂರು ಹೊಳೆಯ ನೀರನ್ನೆ ನಂಬಿಕೊಂಡಿದ್ದರೆ ಸಾಲದು. ಪಪಂನ ನೂತನ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳು ತಜ್ಞರ ಸಲಹೆ ಪಡೆದು ಶಾಶ್ವತ ಕುಡಿಯುವ ನೀರಿನ ಯೋಜನೆಗೆ ಮುಂದಾಗಬೇಕು ಎನ್ನುವ ಮಾತು ಕೇಳಿಬರುತ್ತಿದೆ.

ಕಳೆದ ಕೆಲ ದಿನಗಳಿಂದ ಸರಿಯಾಗಿ ನೀರು ಪೂರೈಕೆ ಆಗುತ್ತಿಲ್ಲ. ಜನರು ಟ್ಯಾಂಕರ್ ನೀರನ್ನು ಎದುರು ನೋಡುವ ಪರಿಸ್ಥಿತಿ ಉಂಟಾಗಿದೆ. ಕೂಲಿ ಕೆಲಸಕ್ಕೂ ಹೋಗಲಿಕ್ಕೆ ಆಗುತ್ತಿಲ್ಲ. ಸಮರ್ಪಕವಾಗಿ ನೀರು ಬಿಡುವ ವ್ಯವಸ್ಥೆ ಆಗಬೇಕಾಗಿದೆ. | ಸಿದ್ದಾಪುರ ಹೊಸೂರು ಎಲ್.ಬಿ.ನಗರದ ಜನತೆ

ಪಟ್ಟಣದ ರವೀಂದ್ರನಗರ, ಹೊಸೂರು, ಹೊಸೂರು ಎಲ್.ಬಿ. ನಗರ, ಕೊಂಡ್ಲಿ, ಕೊಪ್ಪ, ಕನ್ನಳ್ಳಿ, ಹಾಳದಕಟ್ಟಾ ಭಾಗದಲ್ಲಿ ಹೆಚ್ಚು ನೀರಿನ ತೊಂದರೆ ಇದೆ. ಪಟ್ಟಣದಲ್ಲಿ ಸುಸಜ್ಜಿತವಾಗಿರುವ ಇನ್ನೂ ಮೂರು ಕೊಳವೆ ಬಾವಿಗೆ ಪಂಪ್ ಅಳವಡಿಸಿ ನೀರು ಪೂರೈಸುವುದಕ್ಕೆ ಕ್ರಮ ಕೈಗೊಂಡಿದ್ದೇವೆ. ಅಲ್ಲದೆ, ನೀರು ಪೂರೈಸುವುದಕ್ಕೆ ಅಧಿಕಾರಿಗಳನ್ನು ಹಾಗೂ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. | ಸತೀಶ ಗುಡ್ಡೆ, ಪಪಂ ಮುಖ್ಯಾಧಿಕಾರಿ ಸಿದ್ದಾಪುರ

Leave a Reply

Your email address will not be published. Required fields are marked *