ಬರಿಗೈಯಲ್ಲಿದ್ದವನ ಬಳಿಯೀಗ ನೂರಾರು ಕೋಟಿ!

ಸುಮಾರು 20 ವರ್ಷದ ಹಿಂದಿನ ಘಟನೆಯಿದು. ತಮಿಳುನಾಡಿನ ಆ ಯುವಕನಿಗೆ ಇನ್ನೂ 17 ವರ್ಷ ವಯಸ್ಸು. ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಮುಂದೆ ಓದಲು ಹಣವಿಲ್ಲದೇ ಶಿಕ್ಷಣ ಮೊಟಕುಗೊಳಿಸಬೇಕಾಯಿತು. ತುತ್ತು ಅನ್ನಕ್ಕಾಗಿ ದುಡಿಯಲೇಬೇಕಿದ್ದ ಈ ಬಾಲಕ ನೇರವಾಗಿ ಮುಂಬೈಗೆ ಬಂದ. ಬೇಕರಿಗೆ ಸೇರಿದ. ಅಲ್ಲಿ ಪಾತ್ರೆ ತೊಳೆಯುವ ಕೆಲಸ. ಅಲ್ಲಿ ಅವನಿಗೆ ಊಟ ಸಿಗುತ್ತಿತ್ತು. ಮಲಗಲು ಜಾಗವೂ ಸಿಕ್ಕಿತು. 150 ರೂಪಾಯಿ ಸಂಬಳ ಕೊಡುತ್ತಿದ್ದರು. ಅದನ್ನೇ ಮನೆಗೆ ಕಳುಹಿಸುತ್ತಿದ್ದ ಆ ಬಾಲಕ. ಕೈಯಲ್ಲಿ ಪೈಸೆ ಇಲ್ಲ, ಆದರೆ ಕಣ್ತುಂಬಾ ಕನಸುಗಳಿಗೆ ಮಾತ್ರ ಬರವಿರಲಿಲ್ಲ. ಕೆಲ ವರ್ಷ ಹೋಟೆಲ್​ಗಳಲ್ಲಿ ಪಾತ್ರೆ ತೊಳೆಯುವ ಕೆಲಸ ಮಾಡಿದ.

ಅದಾಗಲೇ ಯೌವನಕ್ಕೆ ಕಾಲಿಟ್ಟ ಈತನಿಗೆ ಸ್ವಂತ ಉದ್ಯೋಗ ಮಾಡುವ ಹಂಬಲ. ಸ್ನೇಹಿತರಿಂದ ಸಾಲ ಮಾಡಿ ತಳ್ಳುಗಾಡಿ ಇಟ್ಟುಕೊಂಡ. ಹೋಟೆಲ್​ನಲ್ಲಿ ಮಾಡುತ್ತಿದ್ದ ತಿನಿಸುಗಳನ್ನು ಗಮನವಿಟ್ಟು ನೋಡುತ್ತಿದ್ದ ಈ ಯುವಕ, ತಳ್ಳುಗಾಡಿಯಲ್ಲಿಯೂ ಅದನ್ನೇ ಮಾಡಿದ. ದೋಸೆ, ಇಡ್ಲಿ ವ್ಯಾಪಾರ ಆರಂಭಿಸಿದ. ಆದರೆ ಪೊಲೀಸರ ಕಾಟ ಜಾಸ್ತಿಯಾಗಿ ಅದನ್ನೂ ಬಿಟ್ಟ. ಕ್ಯಾಂಟೀನ್ ಆರಂಭಿಸಿದ. ದೋಸೆ ಮಾಡಿದ. ಈ ಯುವಕ ಮಾಡಿದ ದೋಸೆಯ ರುಚಿ ಕಂಡ ಜನರು ತಂಡೋಪತಂಡವಾಗಿ ಬರಲಾರಂಭಿಸಿದರು. ದೋಸೆ ಸಕತ್ ಫೇಮಸ್ ಆಯಿತು. ಇದನ್ನೇ ದೊಡ್ಡ ಮಟ್ಟದಲ್ಲಿ ಆರಂಭಿಸಿದ ಯುವಕ ‘ದೋಸಾ ಪ್ಲಾಜಾ’ ತೆರೆದ. ಸಾಕಷ್ಟು ಮಂದಿಗೆ ಕೆಲಸವನ್ನೂ ನೀಡಿದ.

ಬೇರೆ ಬೇರೆ ಕಡೆಗಳಲ್ಲಿ ‘ದೋಸಾ ಪ್ಲಾಜಾ’ ತೆರೆದ ಇವರೀಗ 150 ಕೋಟಿ ರೂಪಾಯಿಗಳಿಗೂ ಮಿಕ್ಕಿದ ವ್ಯವಹಾರ ನಡೆಸುತ್ತಿದ್ದಾರೆ. ಇವರೇ ಪ್ರೇಮ್ ಗಣಪತಿ. ಇಂದು ಭಾರತದ 45 ನಗರ ಸೇರಿದಂತೆ ಹಲವಾರು ದೇಶಗಳಲ್ಲಿ ‘ದೋಸಾ ಪ್ಲಾಜಾ’ ಮಳಿಗೆಗಳನ್ನು ಇವರು ನಡೆಸುತ್ತಿದ್ದಾರೆ. ಸಾವಿರಾರು ನೌಕರರು ಇದರಲ್ಲಿ ದುಡಿಯುತ್ತಿದ್ದಾರೆ. ಮನಸ್ಸೊಂದಿದ್ದರೆ ಮಾರ್ಗವು ಉಂಟು… ಎಂದು ಹೇಳುವುದು ಇದಕ್ಕೇ ಅಲ್ಲವೆ?

Leave a Reply

Your email address will not be published. Required fields are marked *