ಬರವನ್ನು ಸಮರ್ಥವಾಗಿ ಎದುರಿಸಿ

ಹುಬ್ಬಳ್ಳಿ: ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗಬಾರದು. ಅಧಿಕಾರಿಗಳು ಬರವನ್ನು ಸಮರ್ಥವಾಗಿ ನಿವಾರಿಸಬೇಕು ಎಂದು ಕಂದಾಯ ಸಚಿವ, ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ ಸೂಚಿಸಿದರು.

ನಗರದ ಸಾಂಸ್ಕೃತಿಕ ಭವನದಲ್ಲಿ ಶನಿವಾರ ನಡೆದ ಜಿಲ್ಲೆ ಬರ ಅಧ್ಯಯನ, ಪರಿಹಾರ ಹಾಗೂ ನಿರ್ವಹಣೆ ಕುರಿತಾದ ‘ಬೆಳಗಾವಿ ವಿಭಾಗ ಮಟ್ಟದ ಸಚಿವ ಸಂಪುಟದ ಉಪಸಮಿತಿ ಸಭೆ’ಯಲ್ಲಿ ಅವರು ಮಾತನಾಡಿದರು.

ಜನರು ಗುಳೆ ಹೋಗದಂತೆ ಅಧಿಕಾರಿಗಳು ಮುಂದಾಲೋಚನೆ ಮಾಡಿ ಅಗತ್ಯ ಕ್ರಮ ಕೈಗೊಳ್ಳಬೇಕು. ಮೇವು ಬ್ಯಾಂಕ್​ಗಳನ್ನು ಸ್ಥಾಪಿಸಬೇಕು. ಅಗತ್ಯ ಬಿದ್ದರೆ ಗೋ ಶಾಲೆ ತೆರೆಯಬೇಕು. ಅವಶ್ಯಕತೆ ಅರಿತು ಬೋರ್​ವೆಲ್ ಕೊರೆಸಬೇಕು. ಜಿಲ್ಲಾಧಿಕಾರಿ ಬಳಿ ಇರುವ ಹಣ ಸಮಸ್ಯೆ ನಿವಾರಣೆಗೆ ಸದ್ವಿನಿಯೋಗವಾಗಬೇಕು. ಮೇ ವರೆಗೆ ಅಧಿಕಾರಿಗಳು ರಜೆ ಮಾಡದೇ ಕೆಲಸ ಮಾಡಬೇಕು ಎಂದು ಸೂಚಿಸಿದರು.

ಜಿ.ಪಂ. ಸಿಇಒ, ಎಇಇ, ಇಒ, ಪಿಡಿಒ ಸೇರಿದಂತೆ ಅಧಿಕಾರಿಗಳು ಜಿಲ್ಲೆಯಲ್ಲಿ ಸಂಚರಿಸಿ ಕುಡಿಯುವ ನೀರಿನ ಸಮಸ್ಯೆ ಪರಿಶೀಲಿಸಬೇಕು. ಶುದ್ಧ ಕುಡಿಯುವ ನೀರಿನ ಘಟಕಗಳು ಬಹಳಷ್ಟು ಕಡೆ ಸ್ಥಗಿತವಾಗಿವೆ. ಅವುಗಳನ್ನು ದುರಸ್ತಿಗೊಳಿಸಬೇಕು. ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳೂ ನೀರಿನ ಸಮಸ್ಯೆ ನಿವಾರಣೆಗೆ ಸಜ್ಜಾಗಬೇಕು ಎಂದು ಸಚಿವ ಸಿ.ಎಸ್. ಶಿವಳ್ಳಿ ಸೂಚಿಸಿದರು.

ಪ್ರತಿಕ್ರಿಯಿಸಿದ ಜಿ.ಪಂ. ಸಿಇಒ ಸತೀಶ್ ಬಿಸಿ, 54 ಶುದ್ಧ ನೀರಿನ ಘಟಕಗಳು ಕೆಲಸ ನಿರ್ವಹಿಸುತ್ತಿಲ್ಲ. ನಿರ್ವಹಣೆಗೆ ಟೆಂಡರ್ ಪಡೆದಿದ್ದ ಏಜೆನ್ಸಿ ಸರಿಯಾಗಿ ಕೆಲಸ ನಿರ್ವಹಿಸಿಲ್ಲ. ಇಂತಹ ಎರಡು ಏಜೆನ್ಸಿಗಳನ್ನು ಕಪ್ಪು ಪಟ್ಟಿಗೆ ಸೇರಿಸಾಗಿದೆ. ಘಟಕ ನಿರ್ವಹಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ನವಲಗುಂದ ತಾಲೂಕು ಅಣ್ಣಿಗೇರಿಯಲ್ಲಿ 45 ಕೋಟಿ ರೂ. ವೆಚ್ಚದ ಕುಡಿಯುವ ನೀರಿನ ಯೋಜನೆಗೆ ಟೆಂಡರ್ ಆಗಿದೆ. ಭೂಮಿಪೂಜೆ ಆಗಿದೆ. ಅಧಿಕಾರಿಗಳ ನಿಷ್ಕಾಳಜಿಯಿಂದ ಆರು ತಿಂಗಳಾದರೂ ಕೆಲಸ ಆರಂಭವಾಗುತ್ತಿಲ್ಲ. ಶೀಘ್ರ ಕಾಮಗಾರಿ ಆರಂಭಿಸಬೇಕು ಎಂದು ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ತಾಕೀತು ಮಾಡಿದರು. ಪ್ರತಿಕ್ರಿಯಿಸಿದ ಅಧಿಕಾರಿಗಳು ತಾಂತ್ರಿಕ ತೊಂದರೆಯಿಂದ ಕಾಮಗಾರಿ ವಿಳಂಬವಾಗಿತ್ತು. ಅತೀ ಶೀಘ್ರದಲ್ಲೇ ಕೆಲಸ ಪ್ರಾರಂಭಿಸುತ್ತೇವೆ ಎಂದರು.

ಸಂಸದ ಪ್ರಲ್ಹಾದ ಜೋಶಿ, ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತ ಪಿ.ಎ. ಮೇಘಣ್ಣವರ, ಜಿಲ್ಲಾಧಿಕಾರಿ ದೀಪಾ ಚೋಳನ್, ಜಿ.ಪಂ. ಅಧ್ಯಕ್ಷೆ ಚೈತ್ರಾ ಶಿರೂರ ವೇದಿಕೆಯಲ್ಲಿದ್ದರು.