Thursday, 15th November 2018  

Vijayavani

ಆ್ಯಂಬಿಡೆಂಟ್ ಕೋಟಿ ಕೋಟಿ ಡೀಲ್ ಪ್ರಕರಣ - ಕೆಲವೇ ಕ್ಷಣಗಳಲ್ಲಿ ಜಾಮೀನು ಅರ್ಜಿ ತೀರ್ಪು- ಬಿಡುಗಡೆಯಾಗ್ತಾರಾ ಗಣಿಧಣಿ..?        ನಾನು ಸಕ್ಕರೆ, ಮಾಧ್ಯಮಗಳು ಇರುವೆ - ನಾನು ಹೋದ್ಕಡೆ ನನ್ನನ್ನೇ ಹಿಂಬಾಲಿಸುತ್ತಾರೆ -  ಜಂಭ ಕೊಚ್ಚಿಕೊಂಡ ನಟಿ ಶ್ರುತಿ        ನಮ್ಮ ತಂದೆನೂ ಬ್ರಾಹ್ಮಣರನ್ನ ಸೋಲಿಸಿದ್ರು - ನಾನೂ ಈಗ ಬ್ರಾಹ್ಮಣರ ವ್ಯಕ್ತಿಯನ್ನು ಸೋಲಿಸಿದ್ದೇನೆ - ಸಿದ್ದು ನ್ಯಾಮಗೌಡ ಹೇಳಿಕೆ        ಮಹದಾಯಿ ನದಿ ನೀರು ಹಂಚಿಕೆ ವಿಚಾರ - ಇದೇ 17ರಂದು ಸರ್ವೆ ಪಕ್ಷ ಸಭೆ ಕರೆ ಸಿಎಂ- ಬಿಎಸ್​ವೈ, ದಿನೇಶ್​ ಗುಂಡೂರಾವ್​ಗೆ ಪತ್ರ        ರಫೇಲ್ ಖರೀದಿ ಅವ್ಯವಹಾರ ಆರೋಪ - ಸುದೀರ್ಘ 5 ಗಂಟೆಗಳ ಕಾಲ ನಡೆದ ವಿಚಾರಣೆ ಮುಕ್ತಾಯ - ತೀರ್ಪು ಕಾಯ್ದಿರಿಸಿದ ಸುಪ್ರೀಂ        ವೈಟ್​​ಹೌಸ್​​ನಲ್ಲಿ ದೀಪಾವಳಿ ಸಂಭ್ರಮ - ದೀಪ ಬೆಳಗಿ ಹಿಂದುಗಳಿಗೆ ಶುಭಕೋರಿದ ಟ್ರಂಪ್ - ಮೋದಿ ನನ್ನ ಸ್ನೇಹಿತ ಎಂದ ಟ್ರಂಪ್​       
Breaking News

ಬರಲಿದೆ ಇನ್ಸುಲಿನ್ ಪಿಲ್!

Sunday, 08.07.2018, 3:03 AM       No Comments

| ಡಾ.ಎಚ್.ಎಸ್.ಮೋಹನ್

ಇನ್ಸುಲಿನ್ ಇಂಜೆಕ್ಷನ್ ಬಗ್ಗೆ ಎಲ್ಲರಿಗೆ ಗೊತ್ತಿದೆ. ಡಯಾಬಿಟಿಸ್ ಅಥವಾ ಸಿಹಿಮೂತ್ರ ರೋಗದಲ್ಲಿ ಹಲವರಿಗೆ ಈ ಇಂಜೆಕ್ಷನ್ ಚುಚ್ಚಿಕೊಳ್ಳುವ ಅನಿವಾರ್ಯತೆ ಇದೆ. ಆದರೆ ಇನ್ಸುಲಿನ್ ಪಿಲ್ ಬಗ್ಗೆ ಕೇಳಿದ್ದೀರಾ ? ಹೌದು ಇಂತಹ ಒಂದು ಪಿಲ್ ಬಗ್ಗೆ ಸಂಶೋಧನೆ ನಡೆದಿದೆ. ಅದನ್ನು ಹೊರತರಲು ವಿಜ್ಞಾನಿಗಳು ಅವಿರತವಾಗಿ ಶ್ರಮಿಸುತ್ತಿದ್ದಾರೆ.

ಡಯಾಬಿಟಿಸ್ ಕಾಯಿಲೆಯಲ್ಲಿ ಮುಖ್ಯವಾಗಿ ಎರಡು ವಿಧಗಳಿವೆ. ಟೈಪ್ 1 ಮತ್ತು ಟೈಪ್ 2 ಡಯಾಬಿಟಿಸ್. ಟೈಪ್ 1 ಡಯಾಬಿಟಿಸ್ ಟೈಪ್ 2ಕ್ಕೆ ಹೋಲಿಸಿದರೆ ಕಡಿಮೆ ಜನರಲ್ಲಿದೆ. ಆದರೆ ಇದರ ಚಿಕಿತ್ಸೆಗಾಗಿ ಇನ್ಸುಲಿನ್ ಇಂಜೆಕ್ಷನ್ ಅನಿವಾರ್ಯ. ಟೈಪ್ 2 ಡಯಾಬಿಟಿಸ್ ವಯಸ್ಕರಲ್ಲಿ ಹೆಚ್ಚು ಕಂಡುಬರುವಂತಹದ್ದು. ಇದರಲ್ಲಿ ಹಲವರಿಗೆ ಸೂಕ್ತ ಮಾತ್ರೆಗಳ ಮೂಲಕ ಕಾಯಿಲೆ ಹತೋಟಿಯಲ್ಲಿ ಇಡಬಹುದು. ಮತ್ತೆ ಹಲವರಲ್ಲಿ ಇನ್ಸುಲಿನ್ ಇಂಜೆಕ್ಷನ್ ಬೇಕೇ ಬೇಕಾಗುತ್ತದೆ.

ಟೈಪ್ 1 ಡಯಾಬಿಟಿಸ್ ಹೆಚ್ಚಿನ ಸಂದರ್ಭಗಳಲ್ಲಿ ಅನುವಂಶಿಕವಾಗಿ ಬರುತ್ತದೆ. ಚಿಕ್ಕ ವಯಸ್ಸಿನವರಲ್ಲಿ ಕಾಣಿಸಿಕೊಳ್ಳುತ್ತದೆ. ಕಾಯಿಲೆ ಬರುವುದನ್ನು ತಪ್ಪಿಸಲು ಬರುವುದಿಲ್ಲ. ಈ ಕಾಯಿಲೆಯಲ್ಲಿ ರಕ್ತದಲ್ಲಿ ಸಕ್ಕರೆ ಅಂಶ ನಿಯಂತ್ರಿಸಲು ಅಗತ್ಯವಿರುವ ಇನ್ಸುಲಿನ್ ಹಾರ್ಮೋನು ಮೇದೋಜೀರಕ ಗ್ರಂಥಿಯಲ್ಲಿ ಉತ್ಪನ್ನವಾಗುವುದಿಲ್ಲ. ಮುಖ್ಯ ಕಾರಣವೆಂದರೆ, ದೇಹದ ಪ್ರತಿರೋಧ ವ್ಯವಸ್ಥೆಯು ತಪ್ಪಾಗಿ ಆಕ್ರಮಣ ಮಾಡಿ ಇನ್ಸುಲಿನ್ ಉತ್ಪಾದಿಸುವ ಮೇದೋಜೀರಕ ಗ್ರಂಥಿಯ ಜೀವಕೋಶಗಳನ್ನು ನಾಶಮಾಡುತ್ತವೆ. ಕಾಯಿಲೆ ಚಿಕಿತ್ಸೆ ಮಾಡದೆ ಹಾಗೇ ಬಿಟ್ಟರೆ ರಕ್ತದಲ್ಲಿ ಸಕ್ಕರೆ ಅಂಶ ಜಾಸ್ತಿಯಾಗಿ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಹಾಗಾಗಿ ಕಾಯಿಲೆಯನ್ನು ಹತೋಟಿಯಲ್ಲಿಡಲು, ಕಾಯಿಲೆಯ ಮುಂದುವರಿದ ದೂರಗಾಮಿ ಪರಿಣಾಮಗಳನ್ನು ತಪ್ಪಿಸಲು ಪ್ರತಿದಿನ ಈ ರೋಗಿಗಳು ಇನ್ಸುಲಿನ್​ನ್ನು ಇಂಜೆಕ್ಷನ್ ಅಥವಾ ಪಂಪ್ ರೂಪದಲ್ಲಿ ತೆಗೆದುಕೊಳ್ಳಬೇಕಾಗುತ್ತದೆ. ಪ್ರತಿದಿನ ಇಂಜೆಕ್ಷನ್ ಚುಚ್ಚಿಕೊಳ್ಳುವುದು ಒಂದು ರೀತಿಯಲ್ಲಿ ಹಲವರಿಗೆ ಹಿಂಸೆಯೇ. ಅಲ್ಲದೆ ಇಂಜೆಕ್ಷನ್ ಬಗೆಗೆ ಭಯವಿರುವವರಿಗೆ ಇನ್ನೂ ಕಷ್ಟವೇ.

ಹಾಗಾಗಿ ಇನ್ಸುಲಿನ್​ನ್ನು ಪಿಲ್ ಅಥವಾ ಮಾತ್ರೆಯ ರೂಪದಲ್ಲಿ ಸೇವಿಸುವುದು ಒಳ್ಳೆಯದು. ಆದರೆ ಇನ್ಸುಲಿನ್ ಮಾತ್ರೆಯ ರೂಪದಲ್ಲಿ ನುಂಗಿದರೆ ನಮ್ಮ ಜಠರದಲ್ಲಿ ಗ್ಯಾಸ್ಟ್ರಿಕ್ ಆಮ್ಲ ಅಥವಾ ಎಂಜೈಮ್ಳ ಸಂಪರ್ಕಕ್ಕೆ ಇನ್ಸುಲಿನ್ ಬಂದಾಗ ಅದು ನಾಶವಾಗಿಬಿಡುತ್ತದೆ. ಅಥವಾ ಕರಗಿ ಹೋಗುತ್ತದೆ. ಹಾಗೆ ಆಗದಂತೆ ಅಂದರೆ ಜೀರ್ಣಾಂಗ ವ್ಯೂಹ ದಾಟಿ ನೇರವಾಗಿ ರಕ್ತ ಸೇರುವಂತೆ ಮಾಡಲು ಕೋಟಿಂಗ್ ಇರುವ ಪಿಲ್ ಅಥವಾ ಮಾತ್ರೆ ಅಭಿವೃದ್ಧಿಪಡಿಸಲು ಸಂಶೋಧಕರಿಗೆ ಇಷ್ಟರವರೆಗೆ ಸಾಧ್ಯವಾಗಿರಲಿಲ್ಲ. ಆದರೆ ಇತ್ತೀಚೆಗೆ ಇಂಗ್ಲೆಂಡಿನ ಕೇಂಬ್ರಿಜ್​ನ ಹಾರ್ವರ್ಡ್ ಜಾನ್ ಪಾಲ್​ಸನ್ ಎಂಜಿನಿಯರಿಂಗ್ ಕಾಲೇಜಿನ ವಿಜ್ಞಾನಿಗಳು ಈ ಅಸಾಧ್ಯ ಕೆಲಸವನ್ನು ಸಾಧ್ಯವಾಗಿಸಿದ್ದಾರೆ. ಡಾ.ಸಮೀರ್ ಮಿತ್ರಗೋತ್ರಿ ಈ ಅಧ್ಯಯನದ ಮುಖ್ಯಸ್ಥರು.

ಇನ್ಸುಲಿನ್ ಔಷಧ ಜಠರ ಸೇರಿದ ಮೇಲೆ ಹೊಟ್ಟೆ, ಕರುಳಿನಂತಹ ದುರ್ಗಮ ದಾರಿಯನ್ನು ದಾಟಿ ನಂತರ ರಕ್ತವನ್ನು ಸೇರಬೇಕು. ಇದಕ್ಕಾಗಿ ಸಂಕೀರ್ಣದ ಪಿಲ್ ಕೋಟಿಂಗ್​ನ್ನು ತಯಾರಿಸಿದ್ದಾರೆ ಸಂಶೋಧಕರು. ಇದು ಜಠರ ಭಾಗದ ಗ್ಯಾಸ್ಟ್ರಿಕ್ ಆಮ್ಲ ಮತ್ತು ಕರುಳಿನ ಭಾಗದ ಎಂಜೈಮ್ಳಿಂದ ಇನ್ಸುಲಿನ್ ಔಷಧ ನಾಶವಾಗದಂತೆ ನೋಡಿಕೊಳ್ಳುತ್ತದೆ. ಕೋಲಿನ್ ಮತ್ತು ಗೆರಾನಿಕ್ ಆಮ್ಲಗಳಿರುವ ಐಯಾನಿಕ್ ದ್ರವದಲ್ಲಿ ಇನ್ಸುಲಿನ್ ಇರುತ್ತದೆ. ಇವೆಲ್ಲವುಗಳ ಹೊರಭಾಗದಲ್ಲಿ ಇರುವ ಎಂಟರಿಕ್ ಕೋಟಿಂಗ್ ಗ್ಯಾಸ್ಟ್ರಿಕ್ ಆಮ್ಲದಿಂದ ರಕ್ಷಿಸುತ್ತದೆ. ಹಾಗೆಯೇ ಇವೆಲ್ಲವೂ ಸಣ್ಣ ಕರುಳಿನ ಭಾಗಕ್ಕೆ ಹೋಗುತ್ತವೆ. ಅಲ್ಲಿ ಮೇಲಿನ ಐಯಾನಿಕ್ ದ್ರವ ಎಂಜೈಮ್ಳಿಂದ ರಕ್ಷಿಸುತ್ತದೆ. ಇನ್ಸುಲಿನ್​ನಂತಹ ಪೊ›ಟೀನ್ ಕರುಳಿನ ಭಾಗವನ್ನು ಪ್ರವೇಶಿಸಿದಾಗ ಅಲ್ಲಿನ ಎಂಜೈಮ್ಳು ಅದನ್ನು ಸಣ್ಣ ಸಣ್ಣ ಅಮೈನೋ ಆಸಿಡ್ ಘಟಕಗಳಾಗಿ ವಿಭಜಿಸುತ್ತವೆ. ಆದರೆ ಇದು ಅಯೋನಿಕ್ ದ್ರವದಿಂದ ಆವೃತವಾದ ಇನ್ಸುಲಿನ್ ಆದ್ದರಿಂದ ಇದು ವಿಭಜನೆಗೊಳ್ಳದೆ ಹಾಗೆಯೇ ಉಳಿಯುತ್ತದೆ. ಕೋಲಿನ್ ಮತ್ತು ಗೆರಾನಿಕ್ ಆಮ್ಲಗಳ ಸಂಯೋಗದಿಂದ ಇದು ಸಣ್ಣ ಕರುಳಿನ ಸೂಕ್ಷ್ಮ ಭಾಗವನ್ನು ಭೇದಿಸಿ ರಕ್ತವನ್ನು ಸೇರುತ್ತದೆ.

ಈ ಪಿಲ್​ನ್ನು ತಯಾರಿಸುವುದು ಸುಲಭ. ಬಹಳ ದುಬಾರಿಯೂ ಅಲ್ಲ, ಅಲ್ಲದೇ 2 ತಿಂಗಳವರೆಗೆ ಸಾಮಾನ್ಯ ಕೊಠಡಿಯಲ್ಲಿ ಇಡಬಹುದು. ಈಗ ಲಭ್ಯವಿರುವ ಹಲವು ಇನ್ಸುಲಿನ್ ಇಂಜೆಕ್ಷನ್​ಗಳು ಈ ಅವಧಿಯವರೆಗೆ ಬಾಳಿಕೆ ಬರುವುದಿಲ್ಲ.

ಈ ಹಿಂದೆ ಇನ್ಸುಲಿನ್​ನ್ನು ಪಿಲ್ ರೂಪದಲ್ಲಿ ತರುವ ಬಗೆಗೆ ಹಲವು ಪ್ರಯೋಗಗಳು, ಸಂಶೋಧನೆಗಳು ನಡೆದಿವೆ. ಆದರೆ ಅವ್ಯಾವುವೂ ಸಫಲವಾಗಿರಲಿಲ್ಲ. ಹಾಗಾಗಿ ಈ ಸಂಶೋಧನೆ ಬಹಳ ಮುಖ್ಯವಾದುದು ಎಂದು ಹಲವು ಇತರ ವಿಜ್ಞಾನಿಗಳು ಅಭಿಪ್ರಾಯಪಡುತ್ತಾರೆ. ಅಮೆರಿಕದ ಅಟ್ಲಾಂಟಾದ ಜಾರ್ಜಿಯಾ ತಾಂತ್ರಿಕ ಸಂಸ್ಥೆಯ ರಾಸಾಯನಿಕ ಮತ್ತು ಬಯೋಮಾಲಿಕ್ಯುಲಾರ್ ಎಂಜಿನಿಯರಿಂಗ್ ಪೊ›ಫೆಸರ್ ಮಾರ್ಕ್ ಪ್ರಾಸ್​ನಿಟ್ಜ್ ಇವರಲ್ಲಿ ಪ್ರಮುಖರು. ಅಯೋನಿಕ್ ದ್ರವದೊಂದಿಗೆ ಇನ್ಸುಲಿನ್ ಬಾಯಿಯ ಮೂಲಕ ಕೊಡುವ ಈ ಕ್ರಮ ಇನ್ಸುಲಿನ್ ಇಂಜೆಕ್ಷನ್​ನಷ್ಟೇ ಪರಿಣಾಮಕಾರಿಯಾದುದು. ಈ ಪಿಲ್ ಸಫಲಗೊಂಡರೆ ಇದು ವೈದ್ಯಕೀಯ ರಂಗಕ್ಕೆ ದೊಡ್ಡ ವರವಾಗಬಲ್ಲದು. ಹಲವು ಬೇರೆಯ ಔಷಧಗಳನ್ನೂ ಇದೇ ಮಾದರಿಯಲ್ಲಿ ಮಾರ್ಪಡಿಸಬಹುದು ಎಂಬುದು ಅವರ ಅಭಿಮತ.

ಸಂಶೋಧಕರ ಪ್ರಕಾರ, ಈ ರೀತಿ ಪಿಲ್ ರೂಪದಲ್ಲಿ ಬಾಯಿಯ ಮೂಲಕ ಸೇವಿಸುವ ಇನ್ಸುಲಿನ್ ದೇಹದಲ್ಲಿ ಮೇದೋಜೀರಕ ಗ್ರಂಥಿ ನೈಸರ್ಗಿಕವಾಗಿ ಉತ್ಪಾದಿಸುವ ಇನ್ಸುಲಿನ್​ಗೆ ಸರಿಸಮವಾಗಿರುತ್ತದೆ. ಅಲ್ಲದೆ ಇಂಜೆಕ್ಷನ್ ಚುಚ್ಚಿಕೊಳ್ಳುವ ಹಿಂಸೆ ಇರುವುದಿಲ್ಲ. ಮುಂದಿನ ಹಂತ ಎಂದರೆ ಹಲವು ಪ್ರಾಣಿಗಳಲ್ಲಿ ಇದನ್ನು ಪ್ರಯೋಗಿಸಿ ನಂತರ ಮನುಷ್ಯರಲ್ಲಿ ಪ್ರಯೋಗ ಮಾಡಿ ಇದರ ಉಪಯೋಗ ಅಗತ್ಯ ಇರುವ ಎಲ್ಲರಿಗೂ ಲಭ್ಯವಾಗುವಂತೆ ಮಾಡಬೇಕು. ಅಂತಹ ದಿನಗಳು ಬಹಳ ದೂರವಿಲ್ಲ ಎಂದು ಈ ಸಂಶೋಧಕರ ಅಭಿಮತ.

(ಲೇಖಕರು ಹಿರಿಯ ನೇತ್ರತಜ್ಞರು ಮತ್ತು ವೈದ್ಯಕೀಯ ಬರಹಗಾರರು)

Leave a Reply

Your email address will not be published. Required fields are marked *

Back To Top