ಬರದ ಬವಣೆಗೆ ಕಂಗೆಟ್ಟ ಅನ್ನದಾತ

ಮುಂಡರಗಿ: ಕೈಕೊಟ್ಟ ಮುಂಗಾರು-ಹಿಂಗಾರಿನ ಬೆಳೆಗಳು. ಬೆಳೆ ಹಾನಿ ವಿಮೆ ಪರಿಹಾರ ಸಿಗದೆ ಸರ್ಕಾರಿ ಕಚೇರಿಗಳಿಗೆ ಅಲೆಯುತ್ತಿರುವ ರೈತರು. ಕೆಲಸವಿಲ್ಲದೆ ಜೀವನ ನಿರ್ವಹಣೆಗೆ ಉದ್ಯೋಗ ಅರಸಿ ಗುಳೆ ಹೊರಟ ಜನ…

ಸತತ ನಾಲ್ಕೈದು ವರ್ಷಗಳಿಂದ ಬರಗಾಲಕ್ಕೆ ತುತ್ತಾಗಿರುವ ತಾಲೂಕಿನಲ್ಲಿ ಕಂಡುಬರುತ್ತಿರುವ ರೈತಾಪಿ ವರ್ಗದ ದುಸ್ಥಿತಿ ಇದು.

ಪ್ರಸಕ್ತ ಸಾಲಿನಲ್ಲಿ ಮುಂಗಾರು ಮಳೆ ಬಾರದೆ ಬೆಳೆ ಕೈಕೊಟ್ಟಿತು. ಹಿಂಗಾರು ಕೈ ಹಿಡಿಯುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ರೈತರ ಹೊಲಗಳಲ್ಲಿ ಮಳೆಯಿಲ್ಲದೆ ತೇವಾಂಶ ಕೊರತೆಯಿಂದ ಬೆಳೆಗಳ ಬೆಳವಣಿಗೆ ಕುಂಠಿತವಾಗಿ ಒಣಗುತ್ತಿವೆ. ಇನ್ನೊಂದೆಡೆ ಅಂತರ್ಜಲ ಮಟ್ಟ ಕುಸಿದು ಬೋರ್​ವೆಲ್​ಗಳು ಬಂದಾಗಿವೆ. ಅವುಗಳನ್ನು ಅವಲಂಬಿಸಿದ ಬೆಳೆಗಳೆಲ್ಲ ಕಮರಿಹೋಗಿವೆ. ಇಷ್ಟೆಲ್ಲ ಸಂಕಷ್ಟಗಳ ಮಧ್ಯೆ ಬೆಳೆದ ಅಲ್ಪ ಬೆಳೆಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗದೆ ರೈತರು ಕಂಗಾಲಾಗಿದ್ದಾರೆ.

ಬಾರದ ಪರಿಹಾರ: ಈ ವರ್ಷ ಮುಂಗಾರಿನಲ್ಲಿ 39,500 ಹೆಕ್ಟೇರ್ ಬಿತ್ತನೆ ಗುರಿ ಪೈಕಿ 34,027 ಹೆಕ್ಟೇರ್ ಬಿತ್ತನೆಯಾಗಿತ್ತು. ಮಳೆ ಕೊರತೆಯಿಂದ 30,224 ಹೆಕ್ಟೇರ್ ಬೆಳೆ ನಾಶವಾಯಿತು. ಹಿಂಗಾರಿನಲ್ಲಿ 38,200 ಹೆಕ್ಟೇರ್ ಬಿತ್ತನೆ ಗುರಿ ಪೈಕಿ 22,823 ಹೆಕ್ಟೇರ್ ಬಿತ್ತನೆಯಾಗಿದೆ. ಆದರೆ, ತೇವಾಂಶವಿಲ್ಲದೆ ಬಹುತೇಕ ಬೆಳೆಗಳು ಒಣಗುತ್ತಿವೆ. ಸರ್ಕಾರವು ಮುಂಡರಗಿಯನ್ನು ಬರಪೀಡಿತ ತಾಲೂಕಾಗಿ ಆಗಸ್ಟ್​ನಲ್ಲಿ ಘೊಷಿಸಿದೆ. ಕೃಷಿ ಇಲಾಖೆಯು ಬೆಳೆ ಹಾನಿ ಸಮೀಕ್ಷೆ ಮಾಡಿ 21.75 ಕೋಟಿ ರೂ. ಪರಿಹಾರ ವಿತರಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಆದರೆ, ಸಮೀಕ್ಷೆ ಮರುಪರಿಶೀಲನೆ ನೆಪದಲ್ಲಿ ರೈತರಿಗೆ ಹಣ ವಿತರಿಸಲು ಕಾಲಹರಣ ಮಾಡಲಾಗುತ್ತಿದೆ.

ಕೈಗೆಟುಕದ ವಿಮೆ: ಫಸಲ್ ಬಿಮಾ ಯೋಜನೆಯಡಿ ತಾಲೂಕಿನ ಸಾವಿರಾರು ರೈತರು ವಿಮೆ ಹಣ ತುಂಬಿದ್ದಾರೆ. ಆದರೆ, ತಾಂತ್ರಿಕ ದೋಷದಿಂದಾಗಿ ಅವರು ಬೆಳೆ ವಿಮೆಯಿಂದ ವಂಚಿತರಾಗಿದ್ದಾರೆ. 2016-17ರಲ್ಲಿ ಮುಂಗಾರಿನಲ್ಲಿ 6,187, ಹಿಂಗಾರಿನಲ್ಲಿ 18,775, 2017-18ರಲ್ಲಿ ಮುಂಗಾರಿನಲ್ಲಿ 5,707 ರೈತರು, ಹಿಂಗಾರಿನಲ್ಲಿ 149, 2018-19ರಲ್ಲಿ ಮುಂಗಾರಿನಲ್ಲಿ 11,834, ಹಿಂಗಾರಿನಲ್ಲಿ 5,591 ರೈತರು ಬೆಳೆ ವಿಮೆ ಹಣ ತುಂಬಿದ್ದಾರೆ. ಈ ಪೈಕಿ 2016-17ನೇ ಸಾಲಿನ ಮುಂಗಾರಿನ ಬೆಳೆಗೆ 2378 ರೈತರಿಗೆ 2.21 ಕೋಟಿ ರೂ., ಹಿಂಗಾರಿನ ಬೆಳೆಗೆ 9,300 ರೈತರಿಗೆ 14.61 ಕೋಟಿ ರೂ. ಬೆಳೆ ವಿಮೆ ಹಣ ವಿತರಣೆಯಾಗಿದೆ. ಇನ್ನುಳಿದ ರೈತರಿಗೆ ಇನ್ನೂ ವಿಮೆ ಹಣ ಬಂದಿಲ್ಲ.

ಲದ್ದಿ ಹುಳು ಕಾಟಕ್ಕಿಲ್ಲ ಕಾಸು: ನೀರಾವರಿ ಪ್ರದೇಶದ ಲದ್ದಿಹುಳದ ಕಾಟವು ಗೋವಿನಜೋಳದೊಂದಿಗೆ ಏಕದಳ ಸಸ್ಯದಲ್ಲೂ ಕಾಣಿಸಿದೆ. ಔಷಧಿ ಸಿಂಪಡಿಸಿದರೂ ಕೀಟಬಾಧೆ ತಡೆಯಲಾಗುತ್ತಿಲ್ಲ. ಆದರೆ, ಔಷಧಿ ಸಿಂಪಡಿಸಿ ಬೆಳೆ ಕಾಪಾಡಿಕೊಳ್ಳಬೇಕೆ ಹೊರತು ಸರ್ಕಾರದಿಂದ ಪರಿಹಾರ ನೀಡಲು ಅವಕಾಶವಿಲ್ಲ ಎನ್ನುತ್ತಾರೆ ಕೃಷಿ ಅಧಿಕಾರಿ ಎಸ್.ಬಿ. ನೆಗಳೂರ.

ಯಂತ್ರಗಳಿಗೆ ‘ಖಾತ್ರಿ’ ಉದ್ಯೋಗ: ಬರದಿಂದ ಬೇಸತ್ತ ಜನತೆ ಕೆಲಸಕ್ಕಾಗಿ ಗೋವಾ, ಕೇರಳ, ಮಂಗಳೂರು ಮೊದಲಾದೆಡೆ ಗುಳೆ ಹೋಗುತ್ತಿದ್ದಾರೆ. ಸರ್ಕಾರವು ಹಳ್ಳಿಗರ ಗುಳೆ ತಪ್ಪಿಸಲು ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಪ್ರತಿ ವ್ಯಕ್ತಿಗೆ 100 ದಿನ ಕೆಲಸ ನೀಡಬೇಕು. ದಿನಕ್ಕೆ 249 ರೂ.ನಂತೆ ಕೂಲಿ ಹಣ ಪಾವತಿಸಬೇಕೆಂಬ ನಿಯಮವಿದೆ. ಆದರೆ, ತಾಲೂಕಿನ ಬಹುತೇಕ ಗ್ರಾಪಂಗಳಲ್ಲಿ ಉದ್ಯೋಗ ಖಾತ್ರಿ ಕೆಲಸಗಳಿಗೆ ಯಂತ್ರಗಳನ್ನು ಬಳಸಲಾಗುತ್ತಿದೆ.

ಮುಂಗಾರು ಹಂಗಾಮಿನಲ್ಲಿ ಬೆಳೆ ಹಾನಿ ಸಮೀಕ್ಷೆ ಮರು ಪರಿಶೀಲನೆ ಕಾರ್ಯ ನಡೆಸಲಾಗುತ್ತಿದೆ. ಹೀಗಾಗಿ ಪರಿಹಾರ ವಿತರಣೆ ವಿಳಂಬವಾಗಿದೆ. ಆದಷ್ಟು ಬೇಗ ವಿತರಿಸಲಾಗುತ್ತದೆ. 2016-17ರಲ್ಲಿ ತಾಂತ್ರಿಕ ತೊಂದರೆಯಿಂದ ಬೆಳೆ ವಿಮೆ ಹಣ ವಿತರಣೆ ಸಮಸ್ಯೆಯಾಯಿತು. ಬೆಳೆ ವಿಮೆ ವಿತರಣೆ ಸರ್ಕಾರದ ಹಂತದಲ್ಲಿದೆ. ರೈತರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುತ್ತದೆ.

| ಭ್ರಮರಾಂಬ ಗುಬ್ಬಿಶೆಟ್ಟಿ ತಹಸೀಲ್ದಾರ್

ಬರಗಾಲಕ್ಕೆ ರೈತರು ತತ್ತರಿಸಿದ್ದಾರೆ. ಸರ್ಕಾರ ರೈತರ ನೆರವಿಗೆ ಬರುತ್ತಿಲ್ಲ. ಬರಗಾಲ ಪೀಡಿತ ಪ್ರದೇಶವೆಂದು ಘೊಷಣೆಯಾದರೂ ರೈತರಿಗೆ ಬೆಳೆ ಹಾನಿ ಪರಿಹಾರ ವಿತರಿಸಿಲ್ಲ. 2016-17ನೇ ಸಾಲಿನಿಂದ ಈವರೆಗೂ ಬೆಳೆ ವಿಮೆ ಪರಹಾರ ಬಂದಿಲ್ಲ.

| ವೀರನಗೌಡ ಪಾಟೀಲ ರೈತ ಮುಖಂಡ