ಬರದ ನಾಡಿನಲ್ಲಿ ವಿಕೆಟ್​ಗಳ ಸುರಿಮಳೆ

ಕೇಪ್​ಟೌನ್: ಪರಿಪೂರ್ಣ ಅಭ್ಯಾಸದ ಕೊರತೆಯಿದ್ದರೂ ಸ್ಟಾರ್ ಬ್ಯಾಟ್ಸ್​ಮನ್ ವಿರಾಟ್ ಕೊಹ್ಲಿ ಸಾರಥ್ಯದ ಟೀಮ್ ಇಂಡಿಯಾ, ದಕ್ಷಿಣ ಆಫ್ರಿಕಾ ಪ್ರವಾಸದ ಸವಾಲಿನ ಟೆಸ್ಟ್ ಸರಣಿಯನ್ನು ಪರಿಣಾಮಕಾರಿ ಬೌಲಿಂಗ್ ಮೂಲಕ ಆರಂಭಿಸಿದೆ. ಆಫ್ರಿಕಾ ನೆಲದಲ್ಲಿ ಆರಂಭಿಸಿದ ಚೊಚ್ಚಲ ದಾಳಿಯಲ್ಲಿ ಕರಾರುವಾಕ್ ಬೌಲಿಂಗ್ ನಿರ್ವಹಣೆ ತೋರಿದ ಸ್ವಿಂಗ್ ಸ್ಪೆಷಲಿಸ್ಟ್ ಭುವನೇಶ್ವರ್ ಕುಮಾರ್(87ಕ್ಕೆ 4) ಹರಿಣಗಳ ಪಡೆಯನ್ನು ಸಾಧಾರಣ ಮೊತ್ತಕ್ಕೆ ಕಟ್ಟಿ ಹಾಕಿದರು. ಬೌಲಿಂಗ್​ನಲ್ಲಿ ದೊರೆತ ಈ ಕನಸಿನ ಆರಂಭದ ನಡುವೆಯೂ ಭಾರತೀಯ ಬ್ಯಾಟಿಂಗ್ ವಿಭಾಗ ಆರಂಭದಲ್ಲೇ ದುಃಸ್ವಪ್ನ ಎದುರಿಸಿದೆ.

ಹೊಸ ವರ್ಷದ ಮೊದಲ ಶುಕ್ರವಾರ ಆರಂಭಗೊಂಡ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ನಾಯಕ ಫಾಫ್ ಡು ಪ್ಲೆಸಿಸ್ ಟಾಸ್ ಗೆದ್ದು ಬ್ಯಾಟಿಂಗ್​ಗೆ ಇಳಿಯುವ ಧೈರ್ಯ ತೋರಿದರು. ಇಲ್ಲಿ ಕಳೆದ ವರ್ಷ ನಡೆದಿದ್ದ ಲಂಕಾ ವಿರುದ್ಧದ ಕೊನೇ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿ ಗೆದ್ದ ಲೆಕ್ಕಾಚಾರದಲ್ಲೇ ದಕ್ಷಿಣ ಆಫ್ರಿಕಾ ಈ ಬಾರಿಯೂ ಮೊದಲು ಬ್ಯಾಟಿಂಗ್​ಗೆ ಇಳಿಯಿತು. ಆದರೆ ಆಫ್ರಿಕಾ ಮೊದಲ ದಿನ ಪೂರ್ತಿ ಬ್ಯಾಟಿಂಗ್ ಮಾಡದಂತೆ ಭಾರತ ಕಡಿವಾಣ ಹಾಕುವಲ್ಲಿ ಯಶಕಂಡಿತು. ಡುಪ್ಲೆಸಿಸ್(62ರನ್, 104 ಎಸೆತ, 12ಬೌಂಡರಿ) ಹಾಗೂ ಎಬಿಡಿ ವಿಲಿಯರ್ಸ್ (65ರನ್, 84ಎಸೆತ, 11ಬೌಂಡರಿ) ಅರ್ಧಶತಕದ ನಡುವೆ ಆಫ್ರಿಕಾ 286 ರನ್​ಗೆ ಮೊದಲ ಇನಿಂಗ್ಸ್ ಮುಗಿಸಿತು. 12ರನ್​ಗೆ ಮೊದಲ 3 ವಿಕೆಟ್ ಕಳೆದುಕೊಂಡು 150ರೊಳಗೆ ಆಲೌಟಾಗುವ ಭೀತಿಯಲ್ಲಿದ್ದ ದಕ್ಷಿಣ ಆಫ್ರಿಕಾ ನಂತರ ಮುನ್ನೂರರ ಸನಿಹ ಹೋಗಿದ್ದು ಗಮನಾರ್ಹ. ಪ್ರತಿಯಾಗಿ ಭಾರತವೂ 28 ರನ್​ಗೆ 3 ವಿಕೆಟ್ ಕಳೆದುಕೊಂಡಿದ್ದು, ಇನಿಂಗ್ಸ್ ಮುನ್ನಡೆಗೆ ಇನ್ನೂ 258 ರನ್ ಬೇಕಾಗಿದೆ. ವೇಗದ ಪಿಚ್​ನಲ್ಲಿ ಭಾರತ ಮೊದಲ ದಿನದ ಗೌರವ ಪಡೆದಂತೆ ಕಂಡರೂ, ಹರಿಣಗಳ ಪಡೆ ದಿನದಂತ್ಯದಲ್ಲಿ ಕಂಡ ಯಶಸ್ಸು 2ನೇ ದಿನದಾಟದ ಬಗ್ಗೆ ಕುತೂಹಲ ಹೆಚ್ಚಿಸಿದೆ.

ಎಬಿಡಿ-ಪ್ಲೆಸಿಸ್ ಪ್ರತಿರೋಧ

ಭಾರತದ ವಿರುದ್ಧ ಮೂರು ವರ್ಷಗಳ ಹಿಂದೆ ಕೊನೇ ಬಾರಿ ಟೆಸ್ಟ್ ಆಡಿದ್ದ ಎಬಿಡಿ ಹಾಗೂ ಪ್ಲೆಸಿಸ್ ಜೋಡಿ ಕೊಹ್ಲಿ ಬೌಲರ್​ಗಳ ಮೇಲೆ ಕೌಂಟರ್ ಅಟ್ಯಾಕ್ ಮಾಡಿತು. ಇವರು ಸಿಂಗಲ್ಸ್-ಡಬಲ್ಸ್​ಗಿಂತ ಹೆಚ್ಚು ಬೌಂಡರಿಗಳನ್ನು ಸಿಡಿಸಿ ರನ್​ಗತಿಗೆ ಚೇತರಿಕೆ ನೀಡಿದರು. ಕೊಹ್ಲಿ ಪದೇ ಪದೇ ಫೀಲ್ಡಿಂಗ್ ಪ್ಲೇಸ್​ವೆುಂಟ್ ಬದಲಾವಣೆ ಮಾಡುತ್ತಿದ್ದರೂ ಭಾರತಕ್ಕೆ ಸತತ ಬೌಂಡರಿ ದುಬಾರಿಯಾಗತೊಡಗಿತು. ವೇಗಕ್ಕೆ ನೆರವೀಯುತ್ತಿದ್ದ ಪಿಚ್​ನಲ್ಲಿ ಏಕದಿನ ಶೈಲಿಯಲ್ಲಿ ಆಡಿದ ಈ ಜೋಡಿ 4ನೇ ವಿಕೆಟ್​ಗೆ 114ರನ್ ಜತೆಯಾಟವಾಡಿತು. ಭೋಜನ ವಿರಾಮದ ಬಳಿಕ ದಾಳಿಗಿಳಿದ ಬುಮ್ರಾ ಅಪಾಯಕಾರಿ ಎಬಿಡಿ ವಿಕೆಟ್ ಕಬಳಿಸಿ ಯಶ ತಂದರು.

ರಹಾನೆ, ರಾಹುಲ್ ಮಿಸ್

ಎಡಗೈ ಆರಂಭಿಕ ಶಿಖರ್ ಧವನ್ ಫಿಟ್ ಆಗಿ ಮರಳಿದಿದ್ದರಿಂದ ಕನ್ನಡಿಗ ಕೆಎಲ್ ರಾಹುಲ್ ತಂಡದಿಂದ ಹೊರಗುಳಿದರು. ಇನ್ನು, ಲಯದಲ್ಲಿರದ ಉಪನಾಯಕ ಅಜಿಂಕ್ಯ ರಹಾನೆ ಮತ್ತು ಅನುಭವಿ ವೇಗಿ ಇಶಾಂತ್ ಶರ್ಮರನ್ನು ಹೊರಗಿಟ್ಟಿದ್ದು ಭಾರತ ತಂಡದ ದಿಟ್ಟ ಆಯ್ಕೆ ಎನಿಸಿತು. ಫಾಮರ್್​ನಲ್ಲಿರುವ ರೋಹಿತ್ ಶರ್ಮ ಅವಕಾಶ ಪಡೆದರು.

ಬುಮ್ರಾ ಸ್ಪೆಷಲ್ ಪದಾರ್ಪಣೆ

ಜಸ್​ಪ್ರೀತ್ ಬುಮ್ರಾಗೆ ಇದು ವಿಶೇಷ ಪದಾರ್ಪಣೆ ಎನಿಸಿತು. ಅವರು ವಿಶ್ವ ಸ್ಟಾರ್ ಬ್ಯಾಟ್ಸ್​ಮನ್ ಎಬಿಡಿ ವಿಲಿಯರ್ಸ್​ರನ್ನು ಬೌಲ್ಡ್ ಮಾಡುವ ಮೂಲಕ ಟೆಸ್ಟ್​ನ ಚೊಚ್ಚಲ ವಿಕೆಟ್ ಪಡೆದರು. ಈ ಮೂಲಕ ಎಲ್ಲ ಮಾದರಿಯಲ್ಲೂ ಪದಾರ್ಪಣೆಯ ಪಂದ್ಯದಲ್ಲಿ ದೊಡ್ಡ ವಿಕೆಟ್ ಬೇಟೆಯಾಡಿದ ಸಾಧನೆ ಮಾಡಿದರು. ಅವರಿಗೆ ಏಕದಿನದಲ್ಲಿ ಸ್ಟೀವನ್ ಸ್ಮಿತ್ ಮತ್ತು ಟಿ20ಯಲ್ಲಿ ಡೇವಿಡ್ ವಾರ್ನರ್ ಮೊದಲ ವಿಕೆಟ್ ಆಗಿದ್ದಾರೆ. ಪಂದ್ಯಕ್ಕೆ ಮುನ್ನ ನಾಯಕ ವಿರಾಟ್ ಕೊಹ್ಲಿ, ಬುಮ್ರಾಗೆ ಟೆಸ್ಟ್ ಕ್ಯಾಪ್ ವಿತರಿಸಿದರು.

02 – ಭುವನೇಶ್ವರ್ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಅತ್ಯಂತ ಶೀಘ್ರದಲ್ಲೆ (ಮೊದಲ ಓವರ್​ನ 3ನೇ ಎಸೆತ) ದಕ್ಷಿಣ ಆಫ್ರಿಕಾದ ಮೊದಲ ವಿಕೆಟ್ ಕಬಳಿಸಿದ ಭಾರತದ 2ನೇ ಬೌಲರ್ ಎನಿಸಿಕೊಂಡರು. ದಿಗ್ಗಜ ಕಪಿಲ್ ದೇವ್ 1992-93ರಲ್ಲಿ ಮೊದಲ ಎಸೆತದಲ್ಲೇ ಜಿಮ್ಮಿ ಕುಕ್​ರನ್ನು ಪೆವಿಲಿಯನ್​ಗೆ ಅಟ್ಟಿದ್ದರು.

03 – 2001ರ ಬಳಿಕ ಪ್ರವಾಸದ ಮೊದಲ 3 ಓವರ್​ಗಳಲ್ಲಿ 3 ವಿಕೆಟ್ ಕಬಳಿಸಿದ 3ನೇ ಸಾಧಕ ಭುವನೇಶ್ವರ್. 2007ರಲ್ಲಿ ಆಸ್ಟ್ರೇಲಿಯಾದ ಪ್ಯಾಟ್ ಕಮ್ಮಿನ್ಸ್ ಬಾಂಗ್ಲಾದಲ್ಲಿ, 2005ರಲ್ಲಿ ನ್ಯೂಜಿಲೆಂಡ್​ನ ಜೇಮ್್ಸ ಫ್ರಾಂಕ್ಲಿನ್ ಜಿಂಬಾಬ್ವೆಯಲ್ಲಿ ಈ ಸಾಧನೆ ಮಾಡಿದ್ದರು.

ಆಸರೆಯಾಗದ ಮಧ್ಯಮ ಕ್ರಮಾಂಕ

ಎಬಿಡಿ ಔಟಾದ ಬಳಿಕ ಪ್ಲೆಸಿಸ್ ಅರ್ಧಶತಕ ಪೂರೈಸಿದರಲ್ಲದೆ ವಿಕೆಟ್ ಕೀಪರ್ ಕ್ವಿಂಟನ್ ಡಿಕಾಕ್(43ರನ್, 40 ಎಸೆತ, 7ಬೌಂಡರಿ) ಜತೆ ತಂಡದ ಮೊತ್ತ 200ರ ಗಡಿ ದಾಟಿಸಿದರು. 5ನೇ ವಿಕೆಟ್​ಗೆ 60 ರನ್ ಸೇರಿಸಿದ ಈ ಜೋಡಿಯ ಆಟ ಹೆಚ್ಚು ಕಾಲ ವಿಸ್ತರಣೆಯಾಗಲಿಲ್ಲ. ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಎಸೆತದಲ್ಲಿ ಪ್ಲೆಸಿಸ್ ಔಟಾದರೆ, ಡಿಕಾಕ್​ರನ್ನು ಭುವಿ ಬಲಿಪಡೆದರು. ನಂತರ ಕೇಶವ ಮಹಾರಾಜ್(35) ಹಾಗೂ ಕಗಿಸೊ ರಬಾಡ(26) ಜೋಡಿ ಉಪಯುಕ್ತ ಕಾಣಿಕೆ ನೀಡಿತು. ಕೊನೇ 2 ವಿಕೆಟ್ ಅನ್ನು ಸ್ಪಿನ್ನರ್ ಅಶ್ವಿನ್ ಕಬಳಿಸಿ ಆಫ್ರಿಕಾ ಇನಿಂಗ್ಸ್​ಗೆ ಅಂತ್ಯ ಹಾಡಿದರು.

ಭುವನೇಶ್ವರ್ ಸ್ವಿಂಗ್ ದಾಳಿ

ದಕ್ಷಿಣ ಆಫ್ರಿಕಾ ತಂಡ ಆರಂಭದಲ್ಲೇ ವೇಗಿ ಭುವನೇಶ್ವರ್​ರಿಂದ ಅನಿರೀಕ್ಷಿತ ಆಘಾತ ಎದುರಿಸಿತು. ಭುವಿ ತಮ್ಮ ಮೊದಲ ಮೂರು ಓವರ್​ಗಳಲ್ಲಿ ಆಫ್ರಿಕಾದ ಮೂವರು ಅಗ್ರ ಬ್ಯಾಟ್ಸ್​ಮನ್​ಗಳನ್ನು ಪೆವಿಲಿಯನ್​ಗೆ ಅಟ್ಟಿ ಭಾರತಕ್ಕೆ ಕನಸಿನ ಆರಂಭ ನೀಡಿದರು. ಆರಂಭಿಕ ಡೀನ್ ಎಲ್ಗರ್(0), ಭುವಿ ಎಸೆತದಲ್ಲಿ ವಿಕೆಟ್ ಕೀಪರ್ ಸಾಹಗೆ ಕ್ಯಾಚ್ ನೀಡಿದರು. ನಂತರ ಏಡನ್ ಮಾರ್ಕ್​ರಾಮ್5) ಹಾಗೂ ಅನುಭವಿ ಹಾಶಿಂ ಆಮ್ಲ(3) ಕೂಡ ಬೇಗನೆ ನಿರ್ಗಮಿಸಿದರು. ಪಂದ್ಯದ 3ನೇ ಓವರ್​ನ ಕೊನೇ ಎಸೆತದಲ್ಲಿ ಭುವಿ ಬಲಗೈ ಬ್ಯಾಟ್ಸ್​ಮನ್ ಮಾರ್ಕ್​ರಾಮ್ನ್ನು ಎಲ್​ಬಿ ಬಲೆಗೆ ಬೀಳಿಸಿದರು. ಭಾರತದ ನೆಲದಲ್ಲಿ ಕ್ಲಾಸ್ ಇನಿಂಗ್ಸ್ ಆಡುವ ಆಮ್ಲ ತವರಿನಲ್ಲಿ ಫೇಲ್ ಆದರು. ಆಫ್​ಸ್ಟಂಪ್​ನಿಂದ ಹೊರಹೋಗುತ್ತಿದ್ದ ಚೆಂಡನ್ನು ಮುಟ್ಟಿ ಸಾಹಗೆ ಕ್ಯಾಚ್ ನೀಡಿದರು. ಆಮ್ಲ ತವರಿನಲ್ಲಿ ಭಾರತದ ವಿರುದ್ಧ ಆಡಿದ ಕೊನೇ 8 ಟೆಸ್ಟ್​ನಲ್ಲಿ ಗಳಿಸಿದ ರನ್ ಕೇವಲ 384 ಆಗಿದೆ. ಭಾರತದ ನೆಲದಲ್ಲಿ ಅವರು 10 ಪಂದ್ಯದಲ್ಲಿ 941 ರನ್ ದಾಖಲಿಸಿದ್ದಾರೆ.

ಭಾರತಕ್ಕೂ ಆಘಾತ

ಭಾರತೀಯರ ಬ್ಯಾಟಿಂಗ್ ಆರಂಭ ಬೌಲಿಂಗ್​ಗೆ ವ್ಯತಿರಿಕ್ತವಾಗಿದೆ. ಆರಂಭಿಕರಾದ ಮುರಳಿ ವಿಜಯ್ (1) ಹಾಗೂ ಶಿಖರ್ ಧವನ್ (16) ಅನಾವಶ್ಯಕ ಹೊಡೆತಕ್ಕೆ ಮುಂದಾಗಿ ತಂಡದ ಮೊತ್ತ 18ರೊಳಗೆ ಪೆವಿಲಿಯನ್ ಸೇರಿದರು. ನಾಯಕ ವಿರಾಟ್ ಕೊಹ್ಲಿ(5) ವೇಗಿ ಮಾರ್ನ್ ಮಾರ್ಕೆಲ್​ಗೆ ವಿಕೆಟ್ ಒಪ್ಪಿಸಿದರು.

Leave a Reply

Your email address will not be published. Required fields are marked *