ಬರದೂರಲ್ಲಿ ಭರಪೂರ ಮಾಲಿನ್ಯ

ಮುಂಡರಗಿ: ತಾಲೂಕಿನ ಬರದೂರ ಗ್ರಾಮದಲ್ಲಿ ಮಲೀನತೆ ಹೆಚ್ಚಾಗಿದ್ದು ಜನರು ಹಲವು ರೋಗಗಳಿಂದ ನರಳುತ್ತಿದ್ದಾರೆ. ಜತೆಗೆ ಫ್ಲೋರೈಡ್​ಯುುಕ್ತ ನೀರು ಕುಡಿದ ಜನರು ಹಲವು ಸಮಸ್ಯೆ ಎದುರಿಸುತ್ತಿದ್ದಾರೆ.

ಕಂಡಲ್ಲೆಲ್ಲ ಕಸದ ರಾಶಿ, ಚರಂಡಿಯಲ್ಲಿ ನೀರು ಹರಿಯದೇ ಗಲೀಜು ಸಂಗ್ರಹವಾಗಿ ದುರ್ನಾತ ಬೀರುತ್ತಿದೆ. ಕೆಲವೆಡೆ ರಸ್ತೆಗಳ ಮೇಲೆ ಗಲೀಜು ನೀರು ಹರಿಯುವುದರಿಂದ ಸ್ಥಳೀಯರು ನಿತ್ಯ ಕಿರಿಕಿರಿ ಅನುಭವಿಸುತ್ತಿದ್ದಾರೆ. ಗ್ರಾಮದಲ್ಲಿ ಒಂದು ತಿಂಗಳಿನಿಂದ ಹಲವಾರು ಜನರು ಚಿಕೂನ್​ಗುನ್ಯಾ ಸೇರಿ ಇತರೆ ಕಾಯಿಲೆಗಳಿಂದ ನರಳುತ್ತಿದ್ದಾರೆ. ನಿತ್ಯ ನಾಲ್ಕೈದು ಜನರು ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೆ, ಫ್ಲೋರೈಡ್​ಯುುಕ್ತ ನೀರು ಸೇವಿಸಿ ಹಲವಾರು ಜನರು ಮೊಣಕಾಲು ನೋವಿನಿಂದ ತೊಂದರೆ ಅನುಭವಿಸುತ್ತಿದ್ದಾರೆ.

ಗ್ರಾಮ ಪಂಚಾಯಿತಿ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾರೊಬ್ಬರೂ ಗ್ರಾಮದ ಸ್ವಚ್ಛತೆ ಕಡೆಗೆ ಗಮನ ಹರಿಸುತ್ತಿಲ್ಲ, 2018ರ ಯುಗಾದಿ ಹಬ್ಬದ ಮುನ್ನ ಗ್ರಾ.ಪಂ.ವತಿಯಿಂದ ಸ್ವಚ್ಛತೆ ಕಾರ್ಯ ಕೈಗೊಳ್ಳಲಾಗಿತ್ತು. ಆದರೆ, ಪ್ರಸಕ್ತ ವರ್ಷದ ಯುಗಾದಿ ಹಬ್ಬ ಮುಗಿದರೂ ಸ್ವಚ್ಛತೆಯ ಕಾರ್ಯ ಕೈಗೊಂಡಿಲ್ಲ. ಗ್ರಾಮದಲ್ಲಿ ಸೊಳ್ಳೆ, ತಿಗಣಿ ಕಾಟ ಹೆಚ್ಚಾಗಿದ್ದು ಜನರ ಗೋಳು ಕೇಳೋರೆ ಇಲ್ಲದಂತಾಗಿದೆ.

ಫ್ಲೋರೈಡ್ ನೀರು ಪೂರೈಕೆ: ಗ್ರಾಮಕ್ಕೆ ಸಮಪರ್ಕವಾಗಿ ತುಂಗಭದ್ರಾ ನದಿ ನೀರು ಪೂರೈಕೆಯಾಗುತ್ತಿಲ್ಲ. ಜಲಾಗಾರವನ್ನೂ ಸ್ವಚ್ಛಗೊಳಿಸಿಲ್ಲ. ಒಂದು ವಾರ ಅಥವಾ ಹದಿನೈದು ದಿನಗಳಿಗೊಮ್ಮೆ ಪೂರೈಸುವ ನದಿ ನೀರು ಗ್ರಾಮಕ್ಕೆ ಸಾಕಾಗುವುದಿಲ್ಲ. ಹೀಗಾಗಿ ಕೊಳವೆಬಾವಿಯ ಫ್ಲೋರೈಡ್ ಮಿಶ್ರಿತ ನೀರು ಪೂರೈಸಲಾಗುತ್ತಿದೆ. ಇದರಿಂದ ವಯೋವೃದ್ಧರಿಗೆ ಮೊಣಕಾಲು ನೋವು ಕಾಣಿಸಿಕೊಳ್ಳುತ್ತಿದೆ. ಗ್ರಾಮೀಣ ಕುಡಿಯುವ ನೀರು ಸರಬುರಾಜು ಇಲಾಖೆಯು ಜನರಿಗೆ ಸಮಪರ್ಕವಾಗಿ ನದಿ ನೀರು ಪೂರೈಸುವಲ್ಲಿ ನಿಷ್ಕಾಳಜಿ ತೋರಿದೆ ಎನ್ನುವುದು ಗ್ರಾಮಸ್ಥರ ಆರೋಪವಾಗಿದೆ.

ಬರದೂರ ಗ್ರಾಮದಲ್ಲಿ ಎಲ್ಲಿ ನೋಡಿದರೂ ಮಲೀನತೆ ಹೆಚ್ಚಾಗಿದೆ. ಫ್ಲೋರೈಡ್​ಯುುಕ್ತ ನೀರು ಕುಡಿಯುವುದರಿಂದ ಗ್ರಾಮಸ್ಥರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಚಿಕೂನ್​ಗುನ್ಯಾ ಹರಡಿರುವ ಕುರಿತು ಅಧಿಕಾರಿಗಳ ಗಮನಕ್ಕೆ ತಂದರೂ ಇದುವರೆಗೆ ಯಾರೂ ಸೂಕ್ತ ಕ್ರಮ ಕೈಗೊಂಡಿಲ್ಲ.
| ಮುದುಕಗೌಡ ನಾಡಗೌಡ್ರ, ಬರದೂರ ಗ್ರಾಮಸ್ಥ

ಬರದೂರ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿ ಸ್ವಚ್ಛತೆಗೆ ಕ್ರಮ ಕೈಗೊಳ್ಳಲಾಗುತ್ತದೆ. ಸಮರ್ಪಕವಾಗಿ ನದಿ ನೀರು ಪೂರೈಸಲು ಗ್ರಾಮೀಣ ಕುಡಿಯುವ ನೀರು ಸರಬುರಾಜು ಇಲಾಖೆಗೆ ತಿಳಿಸಲಾಗುತ್ತದೆ. ರೋಗ ಹರಡುತ್ತಿರುವುದರ ಕುರಿತು ಆರೋಗ್ಯ ಇಲಾಖೆ ಜೊತೆ ರ್ಚಚಿಸುತ್ತೇನೆ.
| ಡಿ.ಜಾನಕಿರಾಮ್ ತಾ.ಪಂ ಪ್ರಭಾರಿ ಇಒ