ಬರದಲ್ಲಿ ನೀರಿಗೆ ಹಾಹಾಕಾರ

ಚಿಕ್ಕಬಳ್ಳಾಪುರ:  ಕುಡಿಯುವ ನೀರಿನ ಸಮಸ್ಯಾತ್ಮಕ ಗ್ರಾಮಗಳಲ್ಲಿ ಅಧಿಕಾರಿಗಳು ಸಮರ್ಪಕವಾಗಿ ಪರಿಹಾರ ಕ್ರಮ ಕೈಗೊಳ್ಳುತ್ತಿಲ್ಲ. ಬದಲಿಗೆ ರಾಜಕಾರಣಿಗಳನ್ನು ಮೀರಿಸುವಂತೆ ರಾಜಕಾರಣ ಮಾಡುತ್ತಿದ್ದಾರೆ ಎಂದು ವಿಧಾನಸಭೆ ಉಪ ಸಭಾಧ್ಯಕ್ಷ ಜೆ.ಕೆ.ಕೃಷ್ಣಾರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.

ಜಿಪಂ ಕಚೇರಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ತ್ರೖೆಮಾಸಿಕ ಕೆಡಿಪಿ ಸಭೆಯಲ್ಲಿ ನೀರಿನ ಹಾಹಾಕಾರ ಮತ್ತು ಪರಿಹಾರ ವಿಳಂಬದ ವಿಚಾರ ಪ್ರಸ್ತಾಪಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಇದಕ್ಕೆ ಶಿಡ್ಲಘಟ್ಟ ಶಾಸಕ ವಿ.ಮುನಿಯಪ್ಪ ಧ್ವನಿಗೂಡಿಸಿದರು.

ಕೊರೆಸಿದ ಕೊಳವೆಬಾವಿಯಲ್ಲಿ ನೀರು ಲಭ್ಯವಿದ್ದರೂ ತಿಂಗಳಾನುಗಟ್ಟಲೇ ಪಂಪ್ ಮೋಟಾರ್ ಅಳವಡಿಸುವುದಿಲ್ಲ. ಜನರಿಗೆ ಟ್ಯಾಂಕರ್ ನೀರು ಸಮರ್ಪಕವಾಗಿ ಸಿಗುತ್ತಿಲ್ಲ. ಇದರಿಂದ ಪ್ರತಿನಿತ್ಯ ದೂರುಗಳು ಕೇಳಿ ಬರುತ್ತಿವೆ. ಇದರ ಬಗ್ಗೆ ಗಮನ ಸೆಳೆಯಲು ದೂರವಾಣಿ ಕರೆ ಮಾಡಿದಾಗ ಸಂಬಂಧಪಟ್ಟ ಯಾವುದೇ ಅಧಿಕಾರಿ ಸ್ವೀಕರಿಸುತ್ತಿಲ್ಲ. ಶಾಸಕರಿಗೆ ಸಿಗದೆ, ಯಾವುದೇ ಮಾಹಿತಿಯೂ ನೀಡದೆ ಇಷ್ಟ ಬಂದಂತೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಶಿವಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯಾತ್ಮಕ 135 ಗ್ರಾಮಗಳನ್ನು ಗುರುತಿಸಲಾಗಿದೆ. ಈ ಪೈಕಿ 57 ಹಳ್ಳಿಗಳಿಗೆ ಟ್ಯಾಂಕರ್, 78 ಹಳ್ಳಿಗಳಿಗೆ ಖಾಸಗಿ ಕೊಳವೆಬಾವಿ ಮೂಲಕ ನೀರು ಪೂರೈಸಲಾಗುತ್ತಿದೆ ಎಂದರು.

ಜಿಲ್ಲಾಧಿಕಾರಿ ಪಿ.ಅನಿರುಧ್ ಶ್ರವಣ್ ಮಾತನಾಡಿ, ಚಿಂತಾಮಣಿಯ ಕನ್ನಂಪಲ್ಲಿ ಕೆರೆ ಬತ್ತಿದೆ. ಚಿಕ್ಕಬಳ್ಳಾಪುರದ ಜಕ್ಕಲಮಡಗು ಜಲಾಶಯದಲ್ಲೂ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಎಲ್ಲೆಡೆ ನೀರಿನ ಸಮಸ್ಯೆಯಾಗಿದೆ. ಈಗಾಗಲೇ ಪ್ರತಿ ತಾಲೂಕಿಗೂ ಪರಿಹಾರ ಕಾರ್ಯಕ್ಕೆ ತಲಾ ಒಂದು ಕೋಟಿ ರೂ. ನೀಡಲಾಗಿದೆ ಎಂದರು. ಜಿಪಂ ಅಧ್ಯಕ್ಷ ಎಚ್.ವಿ.ಮಂಜುನಾಥ್ ಮತ್ತಿತರರಿದ್ದರು.

ಸ್ನಾನ ಮಾಡೋದು ಹೆಂಗ್ರಿ?:  ನೀರಿನ ಅಭಾವದಿಂದ ನಗರ, ಪಟ್ಟಣ ಪ್ರದೇಶದ ಕೆಲ ವಾರ್ಡ್​ಗಳಲ್ಲಿ 25 ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತಿದೆ ಎಂಬ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಭಾಸ್ಕರ್ ಮಾತಿಗೆ ಕೃಷ್ಣಾರೆಡ್ಡಿ ಕಿಡಿಕಾರಿದರು. ಹೀಗೆ ನೀರು ಪೂರೈಸಿದಾಗ ಕುಡಿಯೋದು ಹೇಗೆ? ಸ್ನಾನ ಮಾಡೋದು ಹೆಂಗ್ರಿ? ಇಂತಹ ಪರಿಸ್ಥಿತಿಯಲ್ಲೂ ಸೂಕ್ತ ಕ್ರಮ ಕೈಗೊಳ್ಳದಿರುವುದು ಸರಿಯಲ್ಲ. ಜನರ ಸಮಸ್ಯೆ ಅರ್ಥವಾಗುವುದಿಲ್ಲವೇ? ಎಂದು ಪ್ರಶ್ನಿಸಿದರು. ವಾರ್ಡ್​ಗಳಲ್ಲಿನ ಖಾಸಗಿ ಕೊಳವೆಬಾವಿಗಳನ್ನು ಗುರುತಿಸಬೇಕು. ಮಾಲೀಕರ ಮನವೊಲಿಸಿ ಜನರಿಗೆ ನೀರು ಪೂರೈಸಬೇಕು ಎಂದು ಸೂಚಿಸಿದರು.

ವಾರಕ್ಕೊಮ್ಮೆ ರ್ಚಚಿಸಿ:  ಮುಂಬರುವ ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿ ಬರ ಸಮಸ್ಯೆ ತೀವ್ರವಾಗಿ ಕಾಡಲಿದೆ. ಇದಕ್ಕೆ ವಾರಕ್ಕೊಮ್ಮೆ ಸಮಸ್ಯೆ ರ್ಚಚಿಸಿ ಬಗೆಹರಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ ಜಿಲ್ಲಾಡಳಿತಕ್ಕೆ ಸೂಚಿಸಿದರು.

ಹಿರಿಯ ಅಧಿಕಾರಿಗಳು ಸಮಸ್ಯಾತ್ಮಕ ಗ್ರಾಮಗಳಿಗೆ ಖುದ್ದು ಭೇಟಿ ನೀಡಿ ವಾಸ್ತವ ಸ್ಥಿತಿ ತಿಳಿದುಕೊಳ್ಳಬೇಕು. ಇದರಿಂದ ಅನುದಾನ ಸದ್ಬಳಕೆ ಜತೆಗೆ ಸಕಾಲಕ್ಕೆ ಸಮಸ್ಯೆ ಬಗೆಹರಿಸಬಹುದು ಎಂದರು.

ಮೇವು ಉತ್ಪಾದನೆಗೆ ಕ್ರಮ:  ಬೇರೆ ಜಿಲ್ಲೆಗಳಿಂದ ತರಿಸಿಕೊಳ್ಳುವುದರ ಬದಲಿಗೆ ಜಿಲ್ಲೆಯ ರೈತರ ಜಮೀನಿನಲ್ಲೇ ಹಸಿರು ಮೇವು ಬೆಳೆಸಲು ನಿರ್ಧರಿಸಲಾಗಿದೆ. ಇದಕ್ಕೆ ವಿಶೇಷ ಆಪ್ ಮೂಲಕ ರೈತರ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಅನಿರುಧ್ ಶ್ರವಣ್ ತಿಳಿಸಿದರು. ಒಂದು ಎಕರೆಯಲ್ಲಿ ಮೇವು ಬೆಳೆಯಲು ರೈತರಿಗೆ ಐದು ಸಾವಿರ ರೂ. ಪೋ›ತ್ಸಾಹಧನ ನೀಡುತ್ತಿದ್ದು, ಕೋಚಿಮುಲ್ ಸಹಕಾರದೊಂದಿಗೆ ಒಂದು ಸಾವಿರ ಎಕರೆಯಲ್ಲಿ ಮೇವು ಉತ್ಪಾದನೆ ಗುರಿ ಹೊಂದಲಾಗಿದೆ. ಪ್ರಸ್ತುತ ನಾಲ್ವರು ಹೆಸರು ನೋಂದಾಯಿಸಿಕೊಂಡಿದ್ದು, ಗ್ರಾಪಂ, ಹಾಲು ಉತ್ಪಾದಕರ ಸಹಕಾರ ಸಂಘ, ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆ ಮೂಲಕ ರೈತರಲ್ಲಿ ಅರಿವು ಮೂಡಿಸಲಾಗುವುದು ಎಂದರು.