ಬರಡು ಭೂಮಿಯಲ್ಲಿ ನೀರು ಚಿಮ್ಮಿಸಿದ ಟೆಕ್ಕಿ

ಯುವಕನೊಬ್ಬ ಮನಸ್ಸು ಮಾಡಿದರೆ ಇಡೀ ಗ್ರಾಮದ ಸಮಸ್ಯೆ ಪರಿಹರಿಸಲು ಸಾಧ್ಯವೇ? ಈ ಪ್ರಶ್ನೆಗೆ ಕರ್ನಾಟಕ ಗಡಿಯಂಚಿನ ಹಲ್ಗಾರಾ ಗ್ರಾಮವೇ ಉತ್ತರ. ನಾಲ್ಕೈದು ವರ್ಷ ಹನಿ ನೀರಿಗಾಗಿ ಹಪಹಪಿಸುತ್ತಿದ್ದ ಈ ಗ್ರಾಮದ ಜನರೀಗ ವರ್ಷಕ್ಕೆ ಏನಿಲ್ಲವೆಂದರೂ 200 ಕೋಟಿ ಲೀಟರ್ ನೀರು ಸಂಗ್ರಹಿಸುತ್ತಿದ್ದಾರೆ. ಇಂಥದ್ದೊಂದು ಮ್ಯಾಜಿಕ್​ನ ಹಿಂದಿದೆ ಯುವ ಟೆಕ್ಕಿಯ ಸಾಹಸಗಾಥೆ.

ಸುಚೇತನಾ ನಾಯ್ಕ

ಹಲ್ಗಾರಾ. ಇದು ಕರ್ನಾಟಕ ಗಡಿಯಂಚಿನಿಂದ ಕೇವಲ ಆರೇಳು ಕಿ.ಮೀ. ದೂರವಿರುವ ಪುಟ್ಟ ಗ್ರಾಮ. ಮಹಾರಾಷ್ಟ್ರದ ಲಾತೂರು ಜಿಲ್ಲೆಗೆ ಇದು ಸೇರಿದೆ. ಜನಸಂಖ್ಯೆ ಸರಿಸುಮಾರು ಏಳೂವರೆ ಸಾವಿರ. ಯಾವುದೋ ಒಂದು ಮೂಲೆಯಲ್ಲಿ ತಣ್ಣಗಿದ್ದ ಈ ಗ್ರಾಮವೀಗ ಬರ ನಿರ್ವಹಣೆಯಲ್ಲಿ ದೇಶ- ವಿದೇಶಗಳ ಗಮನ ಸೆಳೆದಿದೆ. ವಿವಿಧೆಡೆಗಳ ಜಲ ತಜ್ಞರು ಇಲ್ಲಿಗೆ ಬಂದು ಗ್ರಾಮದ ‘ಗುಟ್ಟು’ ತಿಳಿದುಕೊಳ್ಳುತ್ತಿದ್ದಾರೆ.

ಇಂಥದ್ದೊಂದು ‘ಚಮತ್ಕಾರ’ಕ್ಕೆ ಕಾರಣವಾದದ್ದು ಒಬ್ಬ ಯುವ ಟೆಕ್ಕಿ. ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿರುವ ಸಾಂಟಾಕ್ಲಾರಾದಲ್ಲಿ ಯಾಹೂ ಕಂಪನಿಯಲ್ಲಿ ನಿರ್ದೇಶಕರಾಗಿ ಕೆಲಸ ನಿರ್ವಹಿಸುತ್ತಿರುವ ದತ್ತಾ ಪಾಟೀಲ್ ಅವರ ವರ್ಷಗಳ ಪರಿಶ್ರಮದಿಂದ ಹಲ್ಗಾರಾ ಗ್ರಾಮದಲ್ಲೀಗ ನೀರಿನ ಚಿಲುಮೆ ಉಕ್ಕಿದೆ. ಬರದಿಂದಾಗಿ ಅಂತರ್ಜಲ ಬತ್ತಿ ಹೋಗಿ ಕುಡಿಯುವ ಹನಿ ನೀರಿಗೂ ತತ್ವಾರ ಪಡುತ್ತಿದ್ದ ಗ್ರಾಮದಲ್ಲೀಗ ನೀರಿನ ಸಮಸ್ಯೆ ಇಲ್ಲ. ವರ್ಷಕ್ಕೆ 200 ಕೋಟಿ ಲೀಟರ್ ಸಂಗ್ರಹಿಸಿಟ್ಟುಕೊಳ್ಳುವ ಸಾಮರ್ಥ್ಯವನ್ನು ಈ ಗ್ರಾಮ ಪಡೆದಿದೆ.

ಯಾರೀ ದತ್ತಾ ಪಾಟೀಲ್?: ದತ್ತಾ ಅವರು ಹಲ್ಗಾರಾ ಗ್ರಾಮದಲ್ಲಿ ತೀರಾ ಬಡಕುಟುಂಬದಲ್ಲಿ ಹುಟ್ಟಿದವರು. ತಾಯಿ ಬೇರೆಯವರ ಹೊಲದಲ್ಲಿ ದುಡಿದರೆ ಮಾತ್ರ ಹೊಟ್ಟೆ ತುಂಬಿಸಿಕೊಳ್ಳುವ ಪರಿಸ್ಥಿತಿ ದತ್ತಾ ಹಾಗೂ ಇಬ್ಬರು ಸಹೋದರರದ್ದು. ತಾಯಿ ನಾಲ್ಕನೆಯ ಕ್ಲಾಸಿನವರೆಗೆ ಮಾತ್ರ ಓದಿದ್ದರೂ, ಮಕ್ಕಳು ಓದಿ ಒಳ್ಳೆಯ ಉದ್ಯೋಗ ಗಿಟ್ಟಿಸಿಕೊಳ್ಳಬೇಕೆಂಬ ಮಹದಾಸೆಯಿಂದಾಗಿ ಅವರನ್ನು ಕಷ್ಟಪಟ್ಟು ದುಡಿದು ಶಾಲೆಗೆ ಕಳುಹಿಸಿದ್ದರು.

ಓದಿನಲ್ಲಿ ತುಂಬಾ ಬುದ್ಧಿವಂತರಾಗಿದ್ದ ದತ್ತಾ, ಶಾಲೆಯಲ್ಲಿ ಸದಾ ಮುಂದು. 10ನೆಯ ತರಗತಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿ, ವಿಜ್ಞಾನ ವಿಷಯವನ್ನು ಆಯ್ಕೆ ಮಾಡಿಕೊಂಡು ದ್ವಿತೀಯ ಪಿಯುಸಿಯಲ್ಲಿ 3ನೇ ರ್ಯಾಂಕ್ ಗಳಿಸಿದರು. ನಂತರ ಕಂಪ್ಯೂಟರ್ ಇಂಜಿನಿಯರಿಂಗ್ ಕೋರ್ಸ್ ಸೇರಿಕೊಂಡು ಅಲ್ಲಿಯೂ ಉತ್ತಮ ಅಂಕ ಗಳಿಸಿದ್ದರಿಂದ ಯಾಹೂ ಕಂಪನಿಯಲ್ಲಿ ಕೆಲಸ ಸಿಕ್ಕಿತು. ರಜೆ ಸಿಕ್ಕಾಗಲೆಲ್ಲಾ ಊರಿಗೆ ಹೋಗುತ್ತಿದ್ದ ದತ್ತಾ ಅವರಿಗೆ, ಮಹಾರಾಷ್ಟ್ರ, ಕರ್ನಾಟಕದ ರೈತರ ಆತ್ಮಹತ್ಯೆ ಪ್ರಕರಣಗಳನ್ನು ಕೇಳಿ ದುಃಖವಾಗಿತ್ತಂತೆ. ಅದರ ಜತೆಗೆ, 2016ರಲ್ಲಿ ಲಾತೂರ್ ಜಿಲ್ಲೆಯಲ್ಲಿ ಭೀಕರ ಬರಗಾಲ ಬಂದು ಗ್ರಾಮಸ್ಥರನ್ನು ಹೈರಾಣಾಗಿ ಮಾಡಿದ್ದು ತೀವ್ರ ದುಃಖ ತಂದಿತ್ತು. ‘ಹಸಿರಿನಿಂದ ಹಿಂದೊಮ್ಮೆ ಕಂಗೊಳಿಸುತ್ತಿದ್ದ ನನ್ನ ಗ್ರಾಮದಲ್ಲಿ ಎಲ್ಲಿಯೂ ಹಸಿರು ಕಾಣಿಸಲಿಲ್ಲ. ಭೂಮಿ ಬಿರುಕು ಬಿಟ್ಟಿದ್ದ ದೃಶ್ಯವೇ ಗೋಚರಿಸಿತು. ಎಲ್ಲೆಡೆ ಟ್ಯಾಂಕರ್ ನೀರು ಸರಬರಾಜು ಆಗುತ್ತಿತ್ತು. ಹೇಗಾದರೂ ಮಾಡಿ ಬರದ ಭೂಮಿಯಲ್ಲಿ ನೀರುಕ್ಕಿಸುವ ಪಣ ತೊಟ್ಟೆ’ ಎನ್ನುತ್ತಾರೆ ಅವರು.

ಕೆಲಸಕ್ಕೆ ಹಾಜರಾದರೂ ಅವರನ್ನು ಗ್ರಾಮದ ದುಃಸ್ಥಿತಿ ಬಾಧಿಸುತ್ತಿತ್ತಂತೆ. ಇದೇ ಕಾರಣಕ್ಕೆ ಸುದೀರ್ಘ ರಜೆ ಪಡೆದು ವಿವಿಧ ತಜ್ಞರನ್ನು ಸಂರ್ಪಸಿ ಹಲ್ಗಾರಾದ ವಾರ್ಷಿಕ ಮಳೆಯ ಪ್ರಮಾಣದ ಬಗ್ಗೆ ಅಧ್ಯಯನ ನಡೆಸಿದರು. ಅದರ ಅಧ್ಯಯನದ ವೇಳೆಗೆ, ವಿವಿಧ ಸ್ಥಳಗಳ ವಿಷಯ ಕಲೆ ಹಾಕುವಾಗ ಕ್ಯಾಲಿಫೋರ್ನಿಯಾ ಐದು ವರ್ಷಗಳಿಂದ ಬರಗಾಲಕ್ಕೆ ತುತ್ತಾಗಿದ್ದರೂ ಎಂದಿಗೂ ನೀರಿನ ಕೊರತೆ ಕಂಡಿರಲಿಲ್ಲ, ನೀರಿಗಾಗಿ ಟ್ಯಾಂಕರನ್ನು ಅವರು ಆಶ್ರಯಿಸಿರಲಿಲ್ಲ. ಜತೆಗೆ, ಅವರು ಕಾರ್ಯನಿರ್ವಹಿಸುತ್ತಿದ್ದ ಸಾಂಟಾಕ್ಲಾರಾದಲ್ಲಿ 2016ರಲ್ಲಿ ಬಂದ ಮಳೆ ಪ್ರಮಾಣ 400 ಮಿಲಿ ಮೀಟರ್. ಆದರೆ ಅವರ ಗ್ರಾಮದಲ್ಲಿ (ಹಲ್ಗಾರಾ) ಬಂದದ್ದು ದುಪ್ಪಟ್ಟು ಅಂದರೆ, 800 ಮಿಲಿ ಮೀಟರ್. ಇದರ ಬೆನ್ನಟ್ಟಿ ಹೋದ ಅವರಿಗೆ ಅರಿವಾಗಿದ್ದು ಕ್ಯಾಲಿಫೋರ್ನಿಯಾದ ಅಂತರ್ಜಲ ಮಟ್ಟ 70 ಅಡಿ ಇದ್ದರೆ, ಹಲ್ಗಾರಾದಲ್ಲಿ 800 ಅಡಿ ಕೆಳಗೆ ಇದೆ ಎನ್ನುವುದು. ಆಗ ಅವರಿಗೆ ತಿಳಿದದ್ದು, ಬರಗಾಲದ ವ್ಯಾಖ್ಯಾನವು ಅಂತರ್ಜಲ ಮಟ್ಟ ಮತ್ತು ಸ್ಥಳಗಳನ್ನು ಆಧರಿಸಿದ್ದು ಎಂಬುದಾಗಿ.

ಆ ಬಗ್ಗೆ ಇನ್ನಷ್ಟು ಅಧ್ಯಯನ ನಡೆಸಿದ ದತ್ತಾ, ಸೀದಾ ಗ್ರಾಮಕ್ಕೆ ಬಂದರು. ತಮ್ಮ ಗ್ರಾಮದಲ್ಲಿ ಬೀಳುವ ಪ್ರತಿ ಮಳೆ ಹನಿಯನ್ನೂ ಸಂರಕ್ಷಿಸಿ ಅಂತರ್ಜಲ ಮಟ್ಟವನ್ನು ವೃದ್ಧಿಸುವ ಉದ್ದೇಶದಿಂದ ನೀರಿನ ಶೆಡ್​ಗಳ ನಿರ್ವಣಕ್ಕೆ ಮುಂದಾದರು. ನದಿಯಿಂದ ಸಮುದ್ರಕ್ಕೆ ಸೇರ್ಪಡೆಯಾಗುವ ನೀರಿನಲ್ಲಿ ಶೇ. 30ರಷ್ಟನ್ನು ಭೂಮಿಯೊಳಕ್ಕೆ ಇಳಿಸಿದರೂ ಭಾರತದ ಶೇ. 50ರಷ್ಟು ಕೃಷಿ ಭೂಮಿಯನ್ನು ಸುರಕ್ಷಿತ ಜಲ ಪ್ರದೇಶವನ್ನಾಗಿ ಪರಿವರ್ತಿಸಬಹುದು ಎಂಬುದನ್ನು ಅರಿತರು. -ಠಿ;3 ಲಕ್ಷ ಸ್ವಂತ ದುಡ್ಡು ಖರ್ಚು ಮಾಡಿ 20 ಕಿ.ಮೀ. ಉದ್ದದ ಕಾಲುವೆ ಸರಿಪಡಿಸುವತ್ತ ಹೆಜ್ಜೆ ಇಟ್ಟರು. ಇನ್ನೂ ಹೆಚ್ಚಿನ ಹಣದ ಅವಶ್ಯಕತೆ ಇತ್ತು. ಇವರ ಈ ಏಕಾಂಗಿ ಪರಿಶ್ರಮವನ್ನು ಅದಾಗಲೇ ಅರಿತಿದ್ದ ಗ್ರಾಮಸ್ಥರು 5 ಲಕ್ಷ ಸಂಗ್ರಹಿಸಿ, ಇವರ ಜತೆ ದಿನದ ಎರಡು ಗಂಟೆ ಶ್ರಮಾದಾನಕ್ಕೆ ಸಿದ್ಧರಾದರು.

ಆದರೆ ಅಷ್ಟು ಹಣ ಸಾಲುತ್ತಿರಲಿಲ್ಲ. ತಮ್ಮ ಕಂಪನಿಯ ಅಧಿಕಾರಿಗಳ ಎದುರು ಯೋಜನೆ ವಿಸõತ ವಿಷಯ ಮಂಡನೆ ಮಾಡಿದರು. ಇವರ ಪರಿಶ್ರಮವನ್ನು ಕಂಡು ಖುಷಿಗೊಂಡ ಕಂಪನಿಯ ಸಾಮಾಜಿಕ ಹೊಣೆಗಾರಿಕೆಯ ಘಟಕ ಮುಂದಿನ ಮೂರು ವರ್ಷದ ಯೋಜನೆಗೆ ಒಂದು ಕೋಟಿ ರೂಪಾಯಿ ನೀಡಲು ಮುಂದಾಯಿತು. ಇದರ ಜತೆಗೆ ಅಲ್ಲಿ-ಇಲ್ಲಿ ಹಣ ಸಂಗ್ರಹಿಸಿದರು. ತಮ್ಮಂತೆಯೇ ಬೇರೆ ಬೇರೆ ಊರುಗಳಿಗೆ ವಲಸೆ ಹೋದ ಯುವಕರನ್ನು ಸಂರ್ಪಸಿದರು, ಪರಿಣತರೊಂದಿಗೆ ರ್ಚಚಿಸಿ ತಾಂತ್ರಿಕ ಮಾರ್ಗದರ್ಶನ ಪಡೆದರು.ಇದರ ಜತೆಗೆ ಸ್ವಂತ ಹಣ -ಠಿ;22 ಲಕ್ಷ ಖರ್ಚು ಮಾಡಿ ಗ್ರಾಮಸ್ಥರ ಜತೆಗೂಡಿ 26 ಚೆಕ್ ಡ್ಯಾಂಗಳನ್ನು ನಿರ್ವಿುಸಿದರು. ಮಳೆಗಾಲದಲ್ಲಿ ನೀರು ಸಂಗ್ರಹಿಸಲು ಕೆರೆಗಳನ್ನು ನಿರ್ವಿುಸಿದರು. ಇದರ ಫಲವಾಗಿ ಹಲ್ಗಾರಾ ಗ್ರಾಮದಲ್ಲಿ ಅಂತರ್ಜಲ ಮಟ್ಟ 800 ಅಡಿಯಿಂದ 100 ಅಡಿಗೆ ಏರಿಕೆಯಾಗಿದೆ. 200 ಕೋಟಿ ಲೀಟರ್ ನೀರು ಉಳಿಯುವಂತೆ ಮಾಡಿದೆ.

‘ನಿಮ್ಮ ಗುರಿಯ ಮೇಲೆ ನಂಬಿಕೆಯಿದ್ದರೆ ಬಿಡಬೇಡಿ. ಅದನ್ನು ಸಾಧಿಸುವ ಹಠವಿರಲಿ. ಎಂದಿಗೂ ಹಿಂದಕ್ಕೆ ನೋಡಬೇಡಿ. ಏಕ ಮನಸ್ಸಿನಲ್ಲಿ ಪಣ ತೊಟ್ಟು ಕೆಲಸ ಮಾಡಿದರೆ ಎಲ್ಲವೂ ಸಾಧ್ಯ’ ಎನ್ನುತ್ತಾರೆ ದತ್ತಾ. ಎರಡನೆಯ ಹಂತವಾಗಿ, ತಮ್ಮ ಗ್ರಾಮವನ್ನು ಬಯಲು ಶೌಚಮುಕ್ತವನ್ನಾಗಿ ಮಾಡುವ ಪಣ ತೊಟ್ಟಿರುವ ದತ್ತಾ ಅವರು, ಕೈಯಿಂದಲೇ ಸ್ವಲ್ಪ ದುಡ್ಡು ಹಾಕಿ ಗ್ರಾಮದಲ್ಲಿ 900 ಶೌಚಗೃಹ ನಿರ್ವಣಕ್ಕೆ ಮುಂದಾಗಿದ್ದಾರೆ. ಇವರ ಕಾರ್ಯಕ್ಕೆ ಅವರ ಕಂಪನಿ ಸೇರಿದಂತೆ ಗ್ರಾಮಸ್ಥರೂ ನೆರವಿನ ಹಸ್ತ ಚಾಚುತ್ತಿದ್ದಾರೆ.

ಇಂಗ್ಲಿಷೂ ಗೊತ್ತಿರಲಿಲ್ಲ, ಕಂಪ್ಯೂಟರೂ ತಿಳಿದಿರಲಿಲ್ಲ

ಪ್ರತಿಷ್ಠಿತ ಶಾಲೆಗಳಿಂದ ಬಂದ, ಇಂಗ್ಲಿಷ್ ಮೀಡಿಯಂನಲ್ಲಿ ಕಲಿತ, ಕಂಪ್ಯೂಟರ್​ನಲ್ಲಿ ಸಂಪೂರ್ಣ ಶಿಕ್ಷಣ ಪಡೆದ ವಿದ್ಯಾರ್ಥಿಗಳ ತುಂಬಿರುವ ಕ್ಲಾಸಿನಲ್ಲಿ ದತ್ತಾ ಅವರು ಪಟ್ಟ ಪರಿಪಾಟಲು ಅಷ್ಟಿಷ್ಟಲ್ಲವಂತೆ. ‘ನನಗೆ ಕಂಪ್ಯೂಟರ್ ಅಂದರೆ ಏನು ಎಂದೇ ತಿಳಿದಿರಲಿಲ್ಲ. ದ್ವಿತೀಯ ಪಿಯುಸಿಯಲ್ಲಿ ಹೆಚ್ಚಿನ ಅಂಕ ಗಳಿಸಿ ಕಂಪ್ಯೂಟರ್ ಇಂಜಿನಿಯರಿಂಗ್ ಸೇರಿಕೊಂಡೆ. ನಮ್ಮ ಟೀಚರ್ ಇ-ಮೇಲ್ ಐಡಿ ಹಾಗೂ ಪಾಸ್​ವರ್ಡ್​ನಿಂದ ಕಂಪ್ಯೂಟರ್ ಲಾಗಿನ್ ಮಾಡಿ ಎಂದು ಹೇಳಿದರು. ಅವು ಏನು ಎಂದೇ ನನಗೆ ತಿಳಿದಿರಲಿಲ್ಲ. ನಮ್ಮ ಗ್ರಾಮದಲ್ಲಿ ಅಂಥದ್ದೆಲ್ಲಾ ಹೇಳಿಕೊಡುವುದು ದೂರದ ಮಾತು, ಅದರ ಬಗ್ಗೆ ಅರಿವೇ ಇರಲಿಲ್ಲ. ಇಂಗ್ಲಿಷ್ ಅಂತೂ ಬರುತ್ತಲೇ ಇರಲಿಲ್ಲ. ದಿಕ್ಕು ತೋಚದಾಗಿತ್ತು. ಅಂತೂ- ಇಂತೂ ಆಗ ಅವರಿವರ ಬಳಿ ಹೇಳಿಸಿಕೊಂಡೆ. ಎಲ್ಲಾ ‘ಪ್ರತಿಭಾನ್ವಿತ’ರಿಗೆ ಸಮಾನವಾಗಿ ನಿಲ್ಲುವುದು ನನಗೆ ಸುಲಭವಾಗಿರಲಿಲ್ಲ. ಆದ್ದರಿಂದ ಕಷ್ಟಪಟ್ಟು ಓದತೊಡಗಿದೆ’ ಎನ್ನುವ ದತ್ತಾ ಅವರಿಗೆ ಇಂಜನಿಯರಿಂಗ್ ಫಲಿತಾಂಶ ಹೊರಬಿದ್ದಾಗ ದಂಗಾಗಿದ್ದರಂತೆ. ಕಾರಣ, ಅವರು ಫಸ್ಟ್ ರ್ಯಾಂಕ್​ನಿಂದ ತೇರ್ಗಡೆಯಾಗಿದ್ದರು! ಇದು ಅವರನ್ನು ಅಮೆರಿಕದ ಯಾಹೂ ಕಂಪನಿಯ ನಿರ್ದೇಶಕ ಸ್ಥಾನಕ್ಕೆ ಕೊಂಡೊಯ್ಯಿತು. ರಿಯಲ್ಹೀರೊ ದತ್ತಾ ಪಾಟೀಲ್ ಅವರನ್ನು ಈಗ ಎಲ್ಲರೂ ‘ಹಲ್ಗಾರಾದ ಶಾರುಖ್ ಖಾನ್’ ಎನ್ನುತ್ತಾರೆ. ಅದಕ್ಕೆ ಕಾರಣ, ಶಾರುಖ್ ಅವರು ‘ಸ್ವದೇಶ್’ ಚಿತ್ರದಲ್ಲಿ ಇದೇ ರೀತಿಯ ಪಾತ್ರ ಮಾಡಿದ್ದು. ಮೂಲ ಊರಿನಿಂದ ಬಹುದೂರ ನೆಲೆಸಿದ್ದ ಯುವಕ ಹಿಂದಿರುಗಿ ಬಂದು ಊರಿನ ಸುಧಾರಣೆ ಮಾಡುವ ಕಥೆಯನ್ನು ಹೊಂದಿದೆ.