ಚಿತ್ರದುರ್ಗ: ಕೋಟೆನಗರಿಯ ಪ್ರಮುಖ ಶಕ್ತಿದೇವತೆಯಾದ ಹೊಳಲ್ಕೆರೆ ರಸ್ತೆಯ ಬರಗೇರಮ್ಮ ದೇಗುಲದಲ್ಲಿ ನವರಾತ್ರಿ ಮಹೋತ್ಸವದ ಅಂಗವಾಗಿ ದೇವಿಯ ಹಲವು ಮೂರ್ತಿ ಪ್ರತಿಷ್ಠಾಪಿಸಿ, ನವದುರ್ಗೆಯರ ವಿವಿಧ ರೂಪಗಳ ಮಾದರಿಯಲ್ಲಿ ಅಲಂಕರಿಸಲಾಗಿದೆ.
ದೇಗುಲ ಪ್ರವೇಶಿಸುತ್ತಿದ್ದಂತೆ ಬಲ-ಎಡ ಎರಡೂ ಬದಿಯಲ್ಲೂ ಜೋಡು ಕತ್ತಿ-ಗುರಾಣಿಯೊಂದಿಗೆ ಪಾಳೆಗಾರರ ಕಲ್ಲಿನ ಕೋಟೆ ಮಾದರಿಯೂ ಭಕ್ತರ ಗಮನ ಸೆಳೆಯುತ್ತಿದೆ.
ಕೋಟೆಯ ಪ್ರತಿ ದ್ವಾರದಲ್ಲೂ ನಾನಾ ರೂಪದಲ್ಲಿ ದೇವಿ ಭಕ್ತರಿಗೆ ದರ್ಶನ ನೀಡುತ್ತಿದ್ದು, ಅನೇಕರು ಶ್ರದ್ಧಾ-ಭಕ್ತಿಯಿಂದ ಕಣ್ತುಂಬಿಕೊಳ್ಳುತ್ತಿದ್ದಾರೆ. ಸಾವಿರಾರು ಬಳೆಗಳ ಅಲಂಕಾರದೊಂದಿಗೆ ಹರನ ಹೃದಯರಾಣಿ ಪಾರ್ವತಿ, ಆನೆ ಅಂಬಾರಿಯೊಂದಿಗೆ ನಾಡದೇವಿ ಚಾಮುಂಡೇಶ್ವರಿ ಅಮ್ಮನ ಮಾದರಿ ಅತ್ಯಾಕರ್ಷಣೀಯವಾಗಿದೆ.
ಇನ್ನೂ ಸಾವಿರಾರು ಚಾಕೊಲೇಟ್‌ಗಳಿಂದ ದುರ್ಗಾ ಮಾತೆ ಮಾದರಿ ಕಂಗೊಳಿಸುತ್ತಿದೆ. ಇದು ಚಿಣ್ಣರನ್ನೇ ಹೆಚ್ಚಾಗಿ ಗಮನ ಸೆಳೆಯುತ್ತಿದೆ. ವಿವಿಧ ವರ್ಣದ ಪುಷ್ಪಾಲಂಕಾರದೊಂದಿಗೆ ಶಾಂತಿ ಸ್ವರೂಪಿಣಿಯಾಗಿಯೂ ದೇವಿ ಭಕ್ತರಿಗೆ ಅಭಯ ನೀಡುತ್ತಿರುವ ಮಾದರಿ ಸೇರಿ ಇಡೀ ದೇಗುಲ ನವರಾತ್ರಿ ವೈಭವಕ್ಕೆ ಸಾಕ್ಷಿಯಾಗಿದೆ.
ದೇವಿಯ ನೂತನ ಬೆಳ್ಳಿ ಮುಖ ಪದ್ಮಕ್ಕೆ ಭಾನುವಾರ ಸರ್ವಶಕ್ತಿ ಸ್ವರೂಪಿಣಿಯಾದ ಕೂಷ್ಮಾಂಡ ಮಾತೆಯ ರೂಪದ ಮಾದರಿಯಲ್ಲಿ ಅಲಂಕರಿಸಲಾಗಿತ್ತು. ಅನೇಕರು ದೇಗುಲಕ್ಕೆ ಭೇಟಿ ನೀಡಿ ದರ್ಶನ ಪಡೆದರು. ನಂತರ ಭಕ್ತರಿಗೆ ಮಹಾಮಂಗಳಾರತಿ, ತೀರ್ಥ, ಪ್ರಸಾದ ವಿತರಿಸಲಾಯಿತು.
ವಿಜಯದಶಮಿ ಹಬ್ಬವಾದ ಮರುದಿನ ಅ. 13ರಂದು ದೇವಿಯ ಕೆಂಡಾರ್ಚನೆ ಮಹೋತ್ಸವ ದೇಗುಲ ಮುಂಭಾಗ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಲಿದೆ ಎಂದು ಅರ್ಚಕ ಪೂಜಾರ್ ಸತ್ಯಪ್ಪ ತಿಳಿಸಿದ್ದಾರೆ.