ಬನ್ನಿ.. ನೈಸರ್ಗಿಕ ಮಾವು ತಿನ್ನಿ

ಧಾರವಾಡ: ನಗರದ ರೈಲ್ವೆ ಸ್ಟೇಶನ್ ರಸ್ತೆಯ ತೋಟಗಾರಿಕೆ ಇಲಾಖೆ ಆವರಣದಲ್ಲಿ ಹಣ್ಣುಗಳ ರಾಜ ಎಂದೇ ಪ್ರಸಿದ್ಧ ಪಡೆದ ಮಾವಿನ ಘಮಲು ಆವರಿಸಿದೆ. ಇಡೀ ಆವರಣದಲ್ಲಿ ಮಾವಿನ ಹಣ್ಣಿನ ಮಳಿಗೆಗಳು ತಲೆ ಎತ್ತಿದ್ದು, ಎತ್ತ ನೋಡಿದರೂ ಮಾವಿನ ಸೊಬಗು ಕಾಣುತ್ತಿದೆ. ಮಾವು ಪ್ರಿಯರು ತೋಟಗಾರಿಕೆ ಆವರಣದತ್ತ ದಾಂಗುಡಿ ಇಡುತ್ತಿದ್ದಾರೆ.

ಜಿಲ್ಲೆಯ ರೈತರಿಂದ ನೇರವಾಗಿ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಹಾಗೂ ನೈಸರ್ಗಿಕ ವಿಧಾನದಿಂದ ಮಾಗಿಸಿದ ಹಣ್ಣುಗಳನ್ನು ತಲುಪಿಸುವ ಉದ್ದೇಶದಿಂದ ತೋಟಗಾರಿಕೆ ಇಲಾಖೆ ಆವರಣದಲ್ಲಿ 5 ದಿನಗಳ ಕಾಲ ಹಮ್ಮಿಕೊಡಿರುವ ಮಾವು ಮೇಳಕ್ಕೆ ಜಿ.ಪಂ. ಸಿಇಒ ಡಾ. ಬಿ.ಸಿ. ಸತೀಶ ಶನಿವಾರ ಚಾಲನೆ ನೀಡಿದರು.

ನಂತರ ಆವರಣದಲ್ಲಿ ನಿರ್ವಿುಸಿರುವ ಸುಮಾರು 60 ಮಳಿಗೆಗಳಿಗೆ ಭೇಟಿ ನೀಡಿ, ರೈತರೊಂದಿಗೆ ಮಾವಿನ ಹಣ್ಣುಗಳ ವಿವಿಧ ತಳಿಗಳ ಬಗ್ಗೆ ಮಾಹಿತಿ ಪಡೆದು ಮಾವಿನ ರುಚಿ ಸವಿದರು. ಅವರಿಗೆ ಅಪರ ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ, ಜಿ.ಪಂ. ಅಧ್ಯಕ್ಷೆ ವಿಜಯಲಕ್ಷ್ಮೀ ಪಾಟೀಲ, ಹಾಪ್​ಕಾಮ್್ಸ ಆಡಳಿತ ಮಂಡಳಿ ಅಧ್ಯಕ್ಷ ಈಶ್ವರಚಂದ್ರ ಹೊಸಮನಿ, ಇತರರು ಸಾಥ್ ನೀಡಿದರು.

ನಂತರ ಡಾ. ಬಿ.ಸಿ. ಸತೀಶ ಮಾತನಾಡಿ, ಮಧ್ಯವರ್ತಿಗಳ ಹಾವಳಿ ತಪ್ಪಿಸಿ ರೈತರಿಂದ ನೇರವಾಗಿ ಗ್ರಾಹಕರಿಗೆ ಮಾವುಗಳನ್ನು ಮಾರಾಟ ಮಾಡಲು ಮೇಳ ಅನುಕೂಲವಾಗಿದೆ. ಪ್ರತಿ ವರ್ಷವೂ ರೈತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮುಂದಿ ದಿನಗಳಲ್ಲಿ ಸಹ ಇನ್ನೂ ಹೆಚ್ಚಿನ ರೈತರು ಮೇಳದಲ್ಲಿ ಪಾಲ್ಗೊಳ್ಳುವಂತಾಗಲಿ ಎಂದು ಶುಭ ಹಾರೈಸಿದರು.

ಮಾವು ಮೇಳಕ್ಕೆ ಸಂಜೆ ಚಾಲನೆ ನೀಡಿದ್ದರೂ, ಗ್ರಾಹಕರು ಬೆಳಗ್ಗೆಯಿಂದಲೇ ಮೇಳಕ್ಕೆ ಆಗಮಿಸಿ ಖರೀದಿಯಲ್ಲಿ ತೊಡಗಿದ್ದರು. ಮಧ್ಯವರ್ತಿಗಳ ಹಾವಳಿ ಇಲ್ಲದೆ ನೈಸರ್ಗಿಕವಾಗಿ ಮಾಗಿದ ಮಾವುಗಳನ್ನು ಖರೀದಿಸಲು ಮೇಳ ಅನುಕೂಲವಾಗಿದೆ ಎಂಬ ಅಭಿಪ್ರಾಯವನ್ನು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ರಾಮಚಂದ್ರ ಮಡಿವಾಳ ವ್ಯಕ್ತಪಡಿಸಿದರು.

ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಡಾ.ರಾಮಚಂದ್ರ ಮಡಿವಾಳ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಪ್ರಶಾಂತ ಕುಲಕರ್ಣಿ, ಜಿಲ್ಲಾ ಹಾಪ್​ಕಾಮ್್ಸ ವ್ಯವಸ್ಥಾಪಕ ನಿರ್ದೇಶಕ ಪ್ರವೀಣ ಕಾಮಾಟಿ, ಡಿ.ಟಿ. ಪಾಟೀಲ, ಉಳವಪ್ಪ ದಾಸನೂರ, ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ಶಿಲ್ಪಶ್ರೀ, ಅಧಿಕಾರಿಗಳು, ಸಿಬ್ಬಂದಿ, ಇತರರು ಇದ್ದರು.

45 ತಳಿಗಳು ಲಭ್ಯ: ತೋಟಗಾರಿಕೆ ಇಲಾಖೆಯಲ್ಲಿ ಅವಳವಡಿಸಿರುವ ಅಂದಾಜು 60 ಮಳಿಗೆಗಳಲ್ಲಿ ವಿವಿಧ ತಳಿಯ ಮಾವುಗಳ ಪ್ರದರ್ಶನ ಹಾಗೂ ಮಾರಾಟ ನಡೆಯಲಿದೆ. ಸುತ್ತಲಿನ ಗ್ರಾಮಗಳಾದ ಕೆಲಗೇರಿ, ಚಿಕ್ಕಮಲ್ಲಿಗವಾಡ, ಜೋಗೆಲ್ಲಾಪುರ, ತೇಗೂರ ಸೇರಿದಂತೆ ಜಿಲ್ಲೆಯ ಸುತ್ತಲಿನ ಗ್ರಾಮಗಳ ಜನರು ಪಾಲ್ಗೊಂಡಿದ್ದಾರೆ. ಆಪೂಸ್, ಕಲ್ಮಿ, ರುಮಾನಿ, ಅಲ್ಪಾನ್ಸೋ, ಸ್ವರ್ಣ ಜಹಾಂಗೀರ, ದಶೇಹರಿ, ನೀಲಂ, ಮಲ್ಲಿಕಾ, ಸಣ್ಣೆಲೆ, ವನರಾಜ ಸೇರಿ 45ಕ್ಕೂ ಹೆಚ್ಚು ಮಾವಿನ ಹಣ್ಣುಗಳ ಮಾರಾಟ ನಡೆಸಿದ್ದಾರೆ.

Leave a Reply

Your email address will not be published. Required fields are marked *