ಬನವಾಸಿ ಹೋಬಳಿಯಲ್ಲಿ ಮಳೆ

ಶಿರಸಿ: ತಾಲೂಕಿನ ಬನವಾಸಿ ಹೋಬಳಿಯಲ್ಲಿ ಬುಧವಾರ ಸಂಜೆ ಭಾರೀ ಮಳೆ ಸುರಿದಿದೆ.

ಗಾಳಿಯೊಂದಿಗೆ, ಗುಡುಗು, ಸಿಡಿಲು ಸಮೇತ ಅಂದಾಜು 1 ತಾಸು ಬನವಾಸಿ, ಅಂಡಗಿ, ದಾಸನಕೊಪ್ಪ ಭಾಗದಲ್ಲಿ ಮಳೆ ಸುರಿಯಿತು. ಇದರಿಂದ ಹಿಂಗಾರು ಬೆಳೆಗಳಿಗೆ ಹಾನಿ ಉಂಟಾಗಿದೆ.

ಸೋಮವಾರವೂ ಮಳೆಯಾಗಿತ್ತು. ಈಗ ಎರಡನೇ ದಿನ ಮಳೆಯಾಗಿದ್ದರಿಂದ ಬಾಳೆ ತೋಟಗಳು ನಾಶವಾಗಿದ್ದು, ಮೆಕ್ಕೆ ಜೋಳಕ್ಕೂ ಹಾನಿಯಾಗಿದೆ.

ಮುರಿದು ಬಿದ್ದ ವಿದ್ಯುತ್ ಕಂಬ: ಮುಂಡಗೋಡ: ಬುಧವಾರ ಸಂಜೆ ಸುರಿದ ಮಳೆಯಿಂದಾಗಿ ಶಿರಸಿ ರಸ್ತೆಯ ಶಿಂಗನಳ್ಳಿ ಗ್ರಾಮದ ಹತ್ತಿರ ಗಿಡ ಉರುಳಿ ಬಿದ್ದಿದ್ದರಿಂದ ವಿದ್ಯುತ್ ಕಂಬವೊಂದು ಮುರಿದಿದೆ. ಅಲ್ಲದೆ ವಿದ್ಯುತ್ ಪ್ರವಹಿಸುತ್ತಿರುವ ತಂತಿ ರಸ್ತೆ ಮೇಲೆ ಬಿದ್ದಿದ್ದರಿಂದ ಅಂದಾಜು 2 ಗಂಟೆ ಕಾಲ ವಾಹನ ಸಂಚಾರಕ್ಕೆ ವ್ಯತ್ಯಯ ಉಂಟಾಯಿತು. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಹೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ವಿನಾಯಕ ಪೇಟಕರ್ ಅವರು ವಿದ್ಯುತ್ ಸಂಪರ್ಕ ಕಡಿತಗೊಳಿಸಿದರು. ರಸ್ತೆಗೆ ಅಡ್ಡಲಾಗಿ ಬಿದ್ದ ಮರವನ್ನು ಗ್ರಾಮಸ್ಥರ ನೆರವಿನಿಂದ ಹೆಸ್ಕಾಂ ಸಿಬ್ಬಂದಿ ಕಡಿದು ಸಂಚಾರ ಸುಗಮಗೊಳಿಸಿದರು.