ಬದುಕಿ ಬರಲಿಲ್ಲ ತಂದೆ-ಮಗ

ಧಾರವಾಡ: ಇಲ್ಲಿನ ಕುಮಾರೇಶ್ವರನಗರದ ದುರಂತ ಕಟ್ಟಡದ ಅವಶೇಷಗಳ ಅಡಿ ಸಿಲುಕಿ ತಂದೆ- ಮಗ ದಾರುಣವಾಗಿ ಸಾವನ್ನಪ್ಪಿದ್ದಾರೆ. ನೆಹರು ನಗರದ ಮಹೇಶ್ವರಯ್ಯ ಹಿರೇಮಠ, ಅವರ ಪುತ್ರ ಆಶಿತ್ ಹಿರೇಮಠ ಮೃತ ದುರ್ದೈವಿಗಳು.

ಪತಿ ಹಾಗೂ ಮಾವ ಜೀವಂತವಾಗಿ ಬರಲಿ ಎಂದು ಪ್ರಾರ್ಥಿಸುತ್ತ, ಕಣ್ಣೀರು ಹಾಕುತ್ತ ಕಾದು ಕುಳಿತಿದ್ದ ಆಶಿತ್​ನ ಗರ್ಭಿಣಿ ಪತ್ನಿಯ ಪ್ರಾರ್ಥನೆ ಕೊನೆಗೂ ಫಲಿಸಲಿಲ್ಲ.

ಮಂಗಳವಾರ ಮಧ್ಯಾಹ್ನ 3.30ರ ಸುಮಾರಿಗೆ ಕಟ್ಟಡ ಕುಸಿದು ಬಿದ್ದಾಗ ಪೇಂಟ್ಸ್ ಮಳಿಗೆ ಹೊಂದಿದ್ದ ಮಹೇಶ್ವರಯ್ಯ ಹಾಗೂ ಆಶಿತ್ ಅವಶೇಷಗಳ ಅಡಿ ಸಿಲುಕಿದ್ದರು. ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಒಬ್ಬೊಬ್ಬರನ್ನೇ ಹೊರಗೆ ಕರೆದುಕೊಂಡು ಬರುತ್ತಿದ್ದರು. ಈ ವೇಳೆ ಸ್ಥಳದಲ್ಲಿದ್ದ ಆಶಿತ್​ನ ಗರ್ಭಿಣಿ ಪತ್ನಿ ಜ್ಯೋತಿ ಹಿರೇಮಠ, ತಮ್ಮವರೂ ಬದುಕಿ ಬರುತ್ತಾರೆ ಎಂಬ ನಿರೀಕ್ಷೆ ಇಟ್ಟುಕೊಂಡಿದ್ದರು. ಸ್ಥಳದಲ್ಲಿ ಸೇರಿದ್ದ ನೂರಾರು ಜನರೂ ಆ ಮಹಿಳೆ ಪರವಾಗಿ ಪ್ರಾರ್ಥಿಸಿದ್ದರು. ಆದರೆ ವಿಧಿಬರಹ ಬೇರೆಯದೇ ಆಗಿತ್ತು. ಆಕೆಯ ಪತಿ ಹಾಗೂ ಮಾವ ಇಬ್ಬರೂ ಬುಧವಾರ ಶವವಾಗಿ ಹೊರಹೊರಬಂದಾಗ ಅಲ್ಲಿ ಕಣ್ಣಲ್ಲಿ ನೀರು ಜಿನುಗದಿದ್ದವರು ಯಾರೂ ಇರಲಿಲ್ಲ.

ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದಾಗ ಮಂಗಳವಾರ ಸಂಜೆಯಿಂದ ರಾತ್ರಿಯಿಡೀ ಜ್ಯೋತಿ ಹಾಗೂ ಅವರ ಸಂಬಂಧಿಕರು ಆತಂಕದಿಂದ ಅತ್ತಿಂದಿತ್ತ ಓಡಾಡುತ್ತಿದ್ದರು. ಕಣ್ತುಂಬ ನೀರು ತುಂಬಿಕೊಂಡಿದ್ದ ಅವರು, ಕಾರ್ಯಾಚರಣೆ ತಂಡದವರು ಯಾರನ್ನಾದರೂ ರಕ್ಷಿಸಿ ಹೊರಗೆ ಕರೆತಂದಾಗ ಅವರೆಲ್ಲ ಮುಖ ಒರೆಸಿಕೊಂಡು ಕಣ್ಣರಳಿಸಿ ನೋಡುತ್ತಿದ್ದ ದೃಶ್ಯ ಎಂಥವರ ಕರುಳೂ ಚುರ್ ಎನ್ನುವಂತೆ ಮಾಡುತ್ತಿತ್ತು.

ಗಾಯಾಳುಗಳನ್ನು ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ರವಾನಿಸುತ್ತಿರುವುದನ್ನು ತಿಳಿದು ಸಂಬಂಧಿಕರೆಲ್ಲ ಅಲ್ಲಿಗೇ ಧಾವಿಸಿದ್ದರು. ಆಂಬುಲೆನ್ಸ್​ಗಳು ಬಂದಾಗಲೊಮ್ಮೆ ತಮ್ಮವರು ಬಂದರೇನೊ ಎಂದು ಧಾವಿಸಿ ಹೋಗಿ ಹೋಗಿ ನೋಡುತ್ತಿದ್ದರು. ಆದರೆ ವೈದ್ಯರು ಕೊಡುತ್ತಿದ್ದ ಉತ್ತರ ಕೇಳಿ ಮತ್ತಷ್ಟು ಬೇಸರ ವ್ಯಕ್ತಪಡಿಸುತ್ತಿದ್ದರು. ತಡರಾತ್ರಿಯೆಲ್ಲ ಆಕೆ ಗಂಡನಿಗಾಗಿ ಊಟ, ನಿದ್ದೆ ಬಿಟ್ಟು ಕಾಯ್ದರೂ ಪ್ರಯೋಜನವಾಗಲಿಲ್ಲ.

ಬುಧವಾರ ಬೆಳಗಿನ ಜಾವ ಪತಿಯ ಶವ ತರುತ್ತಿದ್ದಂತೆ ಆಕಾಶವೇ ತಲೆ ಮೇಲೆ ಬಿದ್ದಂತಾಗಿತ್ತು. ಪತಿಯ ಸಾವಿನ ಸುದ್ದಿಯನ್ನು ಅರಗಿಸಿಕೊಳ್ಳುವ ಮೊದಲೇ ಬುಧವಾರ ಸಂಜೆ 5 ಗಂಟೆ ಸುಮಾರಿಗೆ ಜ್ಯೋತಿ ಅವರ ಮಾವ ಮಹೇಶ್ವರಯ್ಯ ಅವರ ಶವವನ್ನೂ ಹೊರತೆಗೆಯಲಾಯಿತು. ಘೊರ ದುರಂತಕ್ಕೆ ಕಾರಣರಾದವರ ಮೇಲೆ ನೊಂದವರ ಕುಟುಂಬ ಹಿಡಿಶಾಪ ಹಾಕುತ್ತಿದ್ದ ದೃಶ್ಯ ಮನಕಲಕುವಂತಿತ್ತು.

ಸೀಮಂತ ಕಾರ್ಯವಿತ್ತು!

ಆಶಿತ್ ಹಾಗೂ ಜ್ಯೋತಿ ಮದುವೆಯಾಗಿ ಆರೇಳು ತಿಂಗಳಷ್ಟೇ ಕಳೆದಿದೆ. ಗರ್ಭಿಣಿಯಾಗಿದ್ದ ಜ್ಯೋತಿ ಹಿರೇಮಠಗೆ ಸಂಬಂಧಿಕರು ಸೀಮಂತ ಕಾರ್ಯ ಮಾಡಲು ಯೋಜಿಸಿದ್ದರು. ದುರಂತ ಕಟ್ಟಡದಲ್ಲಿ ಲಕ್ಷಾಂತರ ರೂ. ವ್ಯಯಿಸಿ ಮಳಿಗೆ ಖರೀದಿಸಿದ್ದ ಮಹೇಶ್ವರಯ್ಯ, ತಮ್ಮ ಪುತ್ರ ಆಶಿತ್​ನೊಂದಿಗೆ ಪೇಂಟ್ಸ್ ಅಂಗಡಿ ಹಾಕಿಕೊಂಡಿದ್ದರು. ಇಬ್ಬರೂ ಅಂಗಡಿಯಲ್ಲಿದ್ದ ವೇಳೆ ಕಟ್ಟಡ ಕುಸಿದು ದಾರುಣ ಅಂತ್ಯ ಕಂಡಿದ್ದಾರೆ. ಜ್ಯೋತಿಯ ಸೀಮಂತದ ಮೂಲಕ ಮತ್ತೊಂದು ಶುಭ ಸಮಾರಂಭದ ಎದುರು ನೋಡುತ್ತಿದ್ದ ಹಿರೇಮಠ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಕಳಪೆ ಕಟ್ಟಡ ನಿರ್ವಿುಸಿದವರು ಅವರನ್ನು ಶಾಶ್ವತ ದುಃಖದ ಮಡುವಿನಲ್ಲಿ ಕೆಡವಿದ್ದಾರೆ.