ಶೃಂಗೇರಿ: ಆಧ್ಯಾತ್ಮಿಕ ಹಾಗೂ ಲೌಕಿಕ ಜೀವನದಲ್ಲಿ ಸಾರ್ಥಕದ ಹಾದಿಯಲ್ಲಿ ಮುನ್ನಡೆಯಲು ಭಗವದ್ಗೀತೆ ನಿರಂತರ ಮಾರ್ಗದರ್ಶನ ನೀಡುತ್ತಿದ್ದು, ಸರ್ವರೂ ಗೀತೆಯ ಪಠಣ ಮಾಡಬೇಕು ಎಂದು ಶೃಂಗೇರಿ ಶಾರದಾಪೀಠದ ಜಗದ್ಗುರು ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ತಿಳಿಸಿದರು.
ಗುರುನಿವಾಸದಲ್ಲಿ ಬುಧವಾರ ಗೀತಾ ಜಯಂತಿ ಪ್ರಯುಕ್ತ ಆಶೀರ್ವಚನ ನೀಡಿದ ಅವರು, ಗೀತೆಯನ್ನು ಪಠಣ ಮಾಡಿ ಅದರಲ್ಲಿರುವ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ವ್ಯಕ್ತಿತ್ವ ಪರಿಪೂರ್ಣವಾಗಲು ಸಾಧ್ಯ. ಜಗದ್ಗುರು ಭಗವಾನ್ ಶ್ರೀಕೃಷ್ಣ ಗೀತೆಯಲ್ಲಿ ನಾವು ಬದುಕಿನಲ್ಲಿ ರೂಪಿಸಿಕೊಳ್ಳಬೇಕಾದ ಉತ್ತಮ ಕಾರ್ಯದ ಕುರಿತು ಹಲವಾರು ಕಡೆ ಉಲ್ಲೇಖಿಸಿದ್ದಾನೆ ಎಂದರು.
ಗೀತೆ ಜ್ಞಾನದ ಮೌಲ್ಯಗಳನ್ನು ನೀಡಿ ಜನಸಾಮಾನ್ಯರಲ್ಲಿ ಪ್ರಜ್ಞಾನ ಬೆಳೆಸುವಲ್ಲಿ ಸಹಕಾರಿ. ಬಾಲ್ಯದಿಂದಲೇ ಶಿಕ್ಷಣದ ಜತೆ ಗೀತೆಯನ್ನು ಪಠಣ ಮಾಡಿದರೆ ಮಾನಸಿಕ ದೃಢತೆ ಹೆಚ್ಚುತ್ತದೆ. ಆಗ ನಾವು ಮಾಡುವ ಯಾವುದೇ ಜವಾಬ್ದಾರಿ ಕೆಲಸದಲ್ಲಿ ಸಮಸ್ಯೆಗಳು ಬಂದಾಗ ವಿಚಲಿತವಾಗದೆ ನಮ್ಮ ಗುರಿ ಮುಟ್ಟಲು ಗೀತೆ ಮಾರ್ಗದರ್ಶನ ನೀಡುತ್ತದೆ. ದೈವೀ ಸಂಪತ್ತನ್ನು ಸಾಕ್ಷಾತ್ಕರಿಸಿಕೊಳ್ಳುವ ಅಧ್ಭುತ ಶಕ್ತಿ ಭಗವತ್ ಗೀತೆಯಲ್ಲಿ ಅಡಕವಾಗಿದೆ ಎಂದು ಹೇಳಿದರು.
ಗೀತೆ ಕಲಿತವರು ನಿರಂತರ ಮೂರು ಜನರಿಗೆ ಕಲಿಸಿಕೊಡುವ ಕಾರ್ಯಕ್ಕೆ ಸನ್ನದ್ಧರಾಗಬೇಕಿದೆ. ಗುರು ಯಾವಾಗಲೂ ನಮಗೆ ಸನ್ಮಾರ್ಗ ತೋರಿಸುವ ಧೀಶಕ್ತಿ. ಅವರು ನೀಡುವ ಉಪದೇಶಗಳನ್ನು ನಾವು ಶ್ರದ್ಧಾಭಕ್ತಿಯಿಂದ ಆಲಿಸಬೇಕು. ಸ್ವಧರ್ಮಾಚರಣೆ ಪ್ರತಿಯೊಬ್ಬರಿಗೂ ಪ್ರಾಮುಖ್ಯ. ನಮ್ಮ ಧರ್ಮದ ಮೌಲ್ಯಗಳು ಅತ್ಯಂತ ಶ್ರೇಷ್ಠವಾದುದು. ನಮ್ಮ ಹಿರಿಯರು ಸ್ವಹಿತ ಲಾಭವಿಲ್ಲದೆ ನಮ್ಮ ಒಳಿತಿಗಾಗಿ ಗ್ರಂಥಗಳನ್ನು ರಚಿಸಿದ್ದಾರೆ. ಯಾವುದೋ ಕಾಲದಲ್ಲಿ ಬರೆದ ಗ್ರಂಥಗಳನ್ನು ನಾವು ಮನನ ಮಾಡಿದಾಗ ನಮಗೆ ಶ್ರೇಯಸ್ಸು ಉಂಟಾಗುತ್ತದೆ. ಶ್ರೀಮಠದಲ್ಲಿ ಹಲವಾರು ವರ್ಷಗಳಿಂದ ಗೀತಾ ಜ್ಞಾನ ಯಜ್ಞ ಅಭಿಯಾನ ನಡೆಯುತ್ತಿದ್ದು, ದೇಶ-ವಿದೇಶದವರು ಇಲ್ಲಿಗೆ ಬಂದು ಗೀತೆಯನ್ನು ಪಠಿಸುತ್ತಾರೆ ಎಂದರು.