ಬದಲಾಗುತ್ತೆ ಮುದ್ರಣ ಮಾಧ್ಯಮ ಸ್ವರೂಪ

ತುಮಕೂರು: ಮಾಧ್ಯಮ ಕ್ಷೇತ್ರದ ಒಟ್ಟಾರೆ ಭವಿಷ್ಯ ಡಿಜಿಟಲ್ ಮಾಧ್ಯಮಗಳಲ್ಲಿ ಅಡಗಿದೆ ಎಂದು ದುಬೈಯ ಹೈಯರ್ ಕಾಲೇಜಸ್ ಆಫ್ ಟೆಕ್ನಾಲಜಿಯ ಅಪ್ಲೈಡ್ ಮೀಡಿಯಾ ವಿಭಾಗದ ಉಪನ್ಯಾಸಕ ಡಾ.ಎಂ.ಶ್ರೀಶಾ ಅಭಿಪ್ರಾಯಪಟ್ಟರು.

ತುಮಕೂರು ವಿವಿ ಕಲಾ ಕಾಲೇಜು ಪತ್ರಿಕೋದ್ಯಮ ವಿಭಾಗ ಶುಕ್ರವಾರ ಹಮ್ಮಿಕೊಂಡಿದ್ದ ‘ಮಾಧ್ಯಮರಂಗ: ಭವಿಷ್ಯದಲ್ಲೇನಿದೆ?’ ವಿಷಯ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಾಂಪ್ರದಾಯಿಕ ಮಾಧ್ಯಮಗಳ ಜಾಗವನ್ನು ಸಾಮಾಜಿಕ ಜಾಲತಾಣಗಳು ಆವರಿಸಿಕೊಳ್ಳುತ್ತಿವೆ. ಮುದ್ರಣ ಮಾಧ್ಯಮಕ್ಕೆ ಭವಿಷ್ಯವಿಲ್ಲ ಎಂದು ಇದರರ್ಥವಲ್ಲ. ಭವಿಷ್ಯದಲ್ಲಿ ಅದರ ಸ್ವರೂಪ ಬದಲಾಗಲಿದೆ. ವಾಸ್ತವವಾಗಿ ಸ್ಥಳೀಯ ಪತ್ರಿಕೆಗಳಿಗೆ ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯವಿದೆ ಎಂದರು.

ಕಾರ್ಪೇರೇಟ್ ಕಂಪನಿಗಳು ತಮ್ಮ ಜಾಹೀರಾತು ಮೊತ್ತದ ಶೇ.45 ಪಾಲನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರಕ್ಕಾಗಿ ಬಳಸಲಿವೆ. ಸೋಶಿಯಲ್ ಮೀಡಿಯಾ ಮ್ಯಾನೇಜರ್ ಎಂಬುದು ಮುಂದಿನ ಕೆಲವೇ ವರ್ಷಗಳಲ್ಲಿ ಪ್ರತಿಷ್ಠಿತ ಹುದ್ದೆಯಾಗಲಿದೆ ಎಂದರು.

2000ರಲ್ಲಿ ಭಾರತದಲ್ಲಿ ಅಂತರ್ಜಾಲ ಬಳಸುವವರ ಪ್ರಮಾಣ ಶೇ.2 ಇತ್ತು. ಆಗ ಅಮೇರಿಕದ ಶೇ.52 ಜನಸಂಖ್ಯೆ ಇಂಟರ್ನೆಟ್ ಬಳಸುತ್ತಿತ್ತು. ಈಗ ಭಾರತದ ಶೇ.60 ಮಂದಿ ಅಂತರ್ಜಾಲ ಬಳಸುತ್ತಿದ್ದಾರೆ. ಮುಂದಿನ ಕೆಲವೇ ವರ್ಷಗಳಲ್ಲಿ ಭಾರತದ 90 ಕೋಟಿ ಜನರು ಇಂಟರ್ನೆಟ್ ಬಳಸಲಿದ್ದು, ಇದರ ಅನುಕೂಲ ಮಾಧ್ಯಮರಂಗಕ್ಕೆ ಸಿಗಲಿದೆ ಎಂದರು.

ಬರವಣಿಗೆ ರೂಪದ ವಿಷಯಗಳಿಗಿಂತ ವೀಡಿಯೋ ನೋಡುವುದರಲ್ಲಿ ಹೊಸ ತಲೆಮಾರು ಹೆಚ್ಚು ಆಸಕ್ತಿ ಹೊಂದಿದೆ ಎಂಬುದನ್ನು ಸಾಮಾಜಿಕ ಮಾಧ್ಯಮಗಳು ಅರ್ಥ ಮಾಡಿಕೊಂಡಿವೆ. ಇದಕ್ಕೆ ತಕ್ಕಂತೆ ಮುದ್ರಣ ಮಾಧ್ಯಮಗಳೂ ತಮ್ಮ ಸ್ವರೂಪ ಹಾಗೂ ವಿಧಾನ ಬದಲಿಸಿಕೊಳ್ಳುವುದು ಅನಿವಾರ್ಯವಾಗಿದೆ. ಅನಿಮೇಶನ್ ಇಂದು ಬಹುಕೋಟಿ ಉದ್ಯಮವಾಗಿದ್ದು, ಪತ್ರಿಕೋದ್ಯಮ ವಿದ್ಯಾರ್ಥಿಗಳು ಹೊಸ ಸಾಧ್ಯತೆಗಳತ್ತ ತಮ್ಮನ್ನು ತೆರೆದುಕೊಳ್ಳಬೇಕು. ಕೌಶಲ ಇಲ್ಲದ ಕೇವಲ ಪದವಿಗೆ ಮುಂದಿನ ದಿನಗಳಲ್ಲಿ ಯಾವ ಮೌಲ್ಯವೂ ಇರುವುದಿಲ್ಲ ಎಂದು ಎಚ್ಚರಿಸಿದರು.

ಮಾಧ್ಯಮದ ಪಾತ್ರ ಮಹತ್ವದ್ದು: ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕುಲಪತಿ ಪೊ›.ವೈ.ಎಸ್.ಸಿದ್ದೇಗೌಡ, ಭೂತ-ವರ್ತಮಾನ-ಭವಿಷ್ಯಗಳನ್ನು ಬೆಸೆಯುವ ಕೊಂಡಿಗಳಾಗಿರುವ ಮಾಧ್ಯಮಗಳು ಆಧುನಿಕ ಸಮಾಜದಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತಿವೆ ಎಂದರು. ಇಂದಿನ ಮಕ್ಕಳು ನಾಳೆಯ ಪ್ರಜೆಗಳು ಎಂಬ ಕಾಲ ಬದಲಾಗಿದೆ. ಇಂದಿನ ಮಕ್ಕಳು ಇಂದಿನ ಪ್ರಜೆಗಳು ಎಂದು ತಿದ್ದಿಕೊಳ್ಳಬೇಕಾಗಿದೆ. ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ವಿದ್ಯಾರ್ಥಿಗಳು ಕೌಶಲಗಳನ್ನು ಅಭಿವೃದ್ಧಿಪಡಿಸಿಕೊಂಡು ಉತ್ತಮ ಭವಿಷ್ಯ ಪಡೆಯಬೇಕು ಎಂದರು. ಪ್ರಾಚಾರ್ಯ ಪೊ›.ಕೆ.ರಾಮಚಂದ್ರಪ್ಪ ಮಾತನಾಡಿ, ಜಗತ್ತಿನ ಕಿಟಕಿಗಳಂತಿರುವ ಮಾಧ್ಯಮಗಳು ಅಭಿವೃದ್ಧಿಯ ಆಧಾರ ಸ್ತಂಭಗಳು ಎಂದರು.

ಉಪಪ್ರಾಂಶುಪಾಲ ಪೊ›.ಟಿ.ಎನ್.ಹರಿಪ್ರಸಾದ್, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಕೆ.ವಿ.ಸಿಬಂತಿ ಪದ್ಮನಾಭ, ಉಪನ್ಯಾಸಕ ಸಿ.ದೇವರಾಜು, ಎಂ.ಎಸ್.ಕೋಕಿಲಾ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *