ಬದಲಾಗಿಲ್ಲ ಬಸವರಾಜು ದಿನಚರಿ

ತುಮಕೂರು: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಂತಹ ಪ್ರಬಲ ಎದುರಾಳಿ ವಿರುದ್ಧದ ಲೋಕಸಮರದಲ್ಲಿ ಬಿಜೆಪಿ ಅಭ್ಯರ್ಥಿ, ಮಾಜಿ ಸಂಸದ ಜಿ.ಎಸ್.ಬಸವರಾಜು ಮೊಗದಲ್ಲಿ ಕೊಂಚವೂ ಬಳಲಿಕೆ ಕಂಡುಬರಲಿಲ್ಲ. 2 ತಿಂಗಳಿನಿಂದ ಟಿಕೆಟ್ ಹೋರಾಟದಿಂದ ಹಿಡಿದು ಚುನಾವಣೆ ಹಣಾಹಣಿಯವರೆಗೂ ಹಗಲಿರುಳು ಕ್ಷಣವೂ ಬಿಡುವಿಲ್ಲದೆ ರಾಜಕೀಯ ಪೈಪೋಟಿಯಲ್ಲಿ ತೊಡಗಿದ್ದ 77 ವರ್ಷದ ಬಸವರಾಜು ದಿನಚರಿ ಶುಕ್ರವಾರವೂ ಎಂದಿನಂತಿತ್ತು.

ಗುರುವಾರ ಇಡೀ ದಿನ ಕ್ಷೇತ್ರಾದ್ಯಂತ ಓಡಾಡಿದ್ದ ಬಸವರಾಜು ಶುಕ್ರವಾರ ವಿಶ್ರಾಂತಿಗೆ ಮೊರೆ ಹೋಗದೆ ಬೆಳಗ್ಗೆ ಎಂದಿನಂತೆ ಬೇಗನೆ ಎದ್ದು, ಯೋಗಾಭ್ಯಾಸದಲ್ಲಿ ತೊಡಗಿದರು. ಬಳಿಕ ಸ್ನಾನ ಪೂಜೆ ಮುಗಿಸಿ ಬೆಳಗಿನ ಉಪಾಹಾರದ ಜತೆಗೆ ದಿನಪತ್ರಿಕೆಗಳತ್ತ ಕಣ್ಣು ಹೊರಳಿಸಿದ್ದಲ್ಲದೆ ಮತದಾನದ ಅಂಕಿ-ಅಂಶ ತೆಗೆದುಕೊಂಡು ರಾಜಕೀಯ ಲೆಕ್ಕಾಚಾರ ನಡೆಸಿದರು. ಈ ಸಂದರ್ಭ ಮನೆಗೆ ಬಂದ ಮಾಧ್ಯಮದವರ ಜತೆ ಕೆಲಹೊತ್ತು ಹರಟುತ್ತ ಅನಿಸಿಕೆ ಹಂಚಿಕೊಂಡರು.

ಮತ ಪ್ರಮಾಣ ಹೆಚ್ಚಳಕ್ಕೆ ಮೋದಿ ಕಾರಣ!: ಈ ಬಾರಿ ಸುಶಿಕ್ಷಿತರು, ಯುವಕರು ಮತಗಟ್ಟೆಗಳಲ್ಲಿ ಸಾಲುಗಟ್ಟಿ ನಿಂತಿದ್ದು ಕಂಡುಬಂತು. ಬದ್ಧತೆಯಿಂದ ಬಂದು ಮತದಾನ ಮಾಡಿದ್ದಾರೆ, ಕಳೆದ ಬಾರಿಗಿಂತ ಹೆಚ್ಚು ಮತದಾನ ಆಗಿದೆ. ಇದಕ್ಕೆ ಮೋದಿ ಕಾರಣ ಎಂದು ಜಿ.ಎಸ್.ಬಸವರಾಜು ಸಮರ್ಥಿಸಿಕೊಂಡರು.

ಈ ಬಾರಿ ಚುನಾವಣೆ ಬೂದಿ ಮುಚ್ಚಿದ ಕೆಂಡದಂತಿತ್ತು. ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಚುನಾವಣೆ ಎದುರಿಸಿದ್ದೇವೆ. ನಮಗೆ ಹಣಕಾಸಿನ ತೊಂದರೆಯಿತ್ತು. ಆದರೂ, ದೈವ ಬಲದಿಂದ ಮಾಡಿದ್ದೇವೆ. ಬಿಜೆಪಿ ಪ್ರಣಾಳಿಕೆ ನೋಡಿ ಜನ ಮತಹಾಕಿದ್ದಾರೆ ಎಂದು ಹೇಳಿದರು.

ಇದು ನನ್ನ 8ನೇ ಲೋಕಸಭಾ ಚುನಾವಣೆ. ಸೋಲು-ಗೆಲುವನ್ನು ಸಮಚಿತ್ತದಿಂದ ಸ್ವೀಕರಿಸಿದ್ದೇನೆ ಎಂದ ಬಸವರಾಜು ಮೊಗದಲ್ಲಿ ಎಲ್ಲಿಯೂ ಆಯಾಸ ಕಾಣಲಿಲ್ಲ. ಮತಪ್ರಮಾಣ ಹೆಚ್ಚಾಗಿದ್ದರಿಂದ ಗೆದ್ದೇ ಬಿಡುತ್ತೇನೆಂಬ ಅಹಂ ಕೂಡ ಅವರ ಮಾತುಗಳಲ್ಲಿ ಇರಲಿಲ್ಲ.

ಜೆಡಿಎಸ್​ಗಿಲ್ಲ ಕುರುಬರ ಬೆಂಬಲ ಎಂದ ಜಿಎಸ್​ಬಿ: ಮತದಾನ ದಿನ ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್.ರಾಜಣ್ಣ ಭೇಟಿ ವಿಚಾರ ಸಮರ್ಥಿಸಿಕೊಂಡ ಜಿ.ಎಸ್.ಬಸವರಾಜು, ಅವರ ಹುಟ್ಟುಹಬ್ಬಕ್ಕೆ ಹೋಗಿರಲಿಲ್ಲ. ಹಾಗಾಗಿ, ಗುರುವಾರ ಹೋಗಿದ್ದೆ. ಬೆಳಗಿನ ಉಪಹಾರ ಸೇವಿಸಿ ಬಂದಿದ್ದೇನೆ ಹೊರತು ರಾಜಕೀಯ ಕಾರಣವೇನೂ ಇಲ್ಲ ಎಂದರು. ರಾಷ್ಟ್ರ ಮಟ್ಟಕ್ಕೆ ಬೆಳೆಯುತ್ತಿದ್ದ ವ್ಯಕ್ತಿಯನ್ನು ದೇವೇಗೌಡರ ಕುಟುಂಬ ಮಕಾಡೆ ಮಲಗಿಸಿದ್ದರಿಂದ ಕುರುಬ ಸಮುದಾಯ ಅವರ ವಿರುದ್ಧ ತಿರುಗಿ ಬಿದ್ದಿದೆ. ಹಾಗಾಗಿ ಕುರುಬ ಸಮುದಾಯ ಈ ಬಾರಿ ಜೆಡಿಎಸ್ ಬೆಂಬಲಿಸಿಲ್ಲ. ಬಿಜೆಪಿಗೆ ಗೆಲ್ಲುವ ವಿಶ್ವಾಸ ಇದೆ. ಮಧುಗಿರಿ, ಕೊರಟಗೆರೆಯಲ್ಲಿ ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಮತ ಬಿಜೆಪಿಗೆ ಬಂದಿದೆ ಎಂದು ತಿಳಿಸಿದರು.

ಸುಶಿಕ್ಷಿತರು, ಯುವಕರು ಮತಗಟ್ಟೆಗಳಿಗೆ ಬಂದು ಬದ್ಧತೆಯಿಂದ ಮತದಾನ ಮಾಡಿದ್ದಾರೆ ಇದಕ್ಕೆ ಮೋದಿ ಕಾರಣ

| ಜಿ.ಎಸ್.ಬಸವರಾಜು ಬಿಜೆಪಿ ಅಭ್ಯರ್ಥಿ

ದಣಿವರಿಯದ ದೇವೇಗೌಡ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಸ್ಪರ್ಧೆಯಿಂದ ತುಮಕೂರು ಲೋಕಸಭಾ ಕ್ಷೇತ್ರ ದೇಶದ ಗಮನ ಸೆಳೆದಿತ್ತು. 87ರ ಇಳಿವಯಸ್ಸಿನಲ್ಲಿ ಮೊಮ್ಮಕ್ಕಳ ಗೆಲುವಿನ ಜತೆಗೆ ಮೈತ್ರಿಕೂಟದ ಅಭ್ಯರ್ಥಿಗಳ ಗೆಲುವಿಗೆ 14 ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರ ನಡೆಸಿದ್ದ ದೇವೇಗೌಡರು ಮತದಾನದ ಮರುದಿನವೂ ವಿಶ್ರಾಂತಿ ಬಯಸಲಿಲ್ಲ. ಬದಲಿಗೆ ನೇರವಾಗಿ ಉತ್ತರ ಕರ್ನಾಟಕದ ರಾಯಚೂರು, ವಿಜಾಪುರ ಜಿಲ್ಲೆಯತ್ತ ಪಯಣ ಬೆಳೆಸಿ ಅಲ್ಲಿ ಮೈತ್ರಿ ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ತೊಡಗಿಕೊಂಡರು.

Leave a Reply

Your email address will not be published. Required fields are marked *