ಬದಲಾಗದಿದ್ದರೆ ಉಳಿಗಾಲವಿಲ್ಲ

ಕೋಲಾರ: ಜಿಲ್ಲೆಯ ವಸತಿಶಾಲೆ, ಹಾಸ್ಟೆಲ್​ಗಳಲ್ಲಿ ಪ್ರಿನ್ಸಿಪಾಲ್, ವಾರ್ಡನ್ ಅಥವಾ ಅಡುಗೆಯವರ ನಡುವಿನ ಸಮಸ್ಯೆಗೆ ಮಕ್ಕಳನ್ನು ಎತ್ತಿಕಟ್ಟಿ ಗುಂಪುಗಳನ್ನಾಗಿ ಮಾಡಿದರೆ ಸಹಿಸಲು ಸಾಧ್ಯವಿಲ್ಲ. ಎಸ್​ಎಸ್​ಎಲ್​ಸಿ ಫಲಿತಾಂಶ ಉತ್ತಮಪಡಿಸಲು ಒತ್ತು ನೀಡಿ ಎಂದು ಜಿಪಂ ಸಿಇಒ ಜಿ. ಜಗದೀಶ್ ತಾಕೀತು ಮಾಡಿದರು.

ಜಿಪಂ ಸಭಾಂಗಣದಲ್ಲಿ ಸೋಮವಾರ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ಹಾಗೂ ಮುರಾರ್ಜಿ ದೇಸಾಯಿ, ಕಿತ್ತೂರು ಚೆನ್ನಮ್ಮ ವಸತಿ ಶಾಲೆಗೆ ಸಂಬಂಧಿಸಿದಂತೆ ಎಸ್​ಎಸ್​ಎಲ್​ಸಿ ಫಲಿತಾಂಶ ವಿಶ್ಲೇಷಣೆ ಸಂಬಂಧ ಸಭೆ ನಡೆಸಿದ ಅವರು, ಮಕ್ಕಳನ್ನು ಎತ್ತಿಕಟ್ಟಿರುವುಯದು ನನ್ನ ಗಮನಕ್ಕೆ ಬಂದಲ್ಲಿ ನಾನು ಕೆಟ್ಟವನಾಗಬೇಕಾಗುತ್ತದೆ. ಪ್ರಾಂಶುಪಾಲರು ತಂಡದ ನಾಯಕರಂತೆ ಕೆಲಸ ಮಾಡಬೇಕೆಂದು ಕಿವಿಮಾತು ಹೇಳಿದರು.

ಕಳೆದ ವರ್ಷ ಎಸ್​ಎಸ್​ಎಲ್​ಸಿ ಓದಿದ ಹಾಸ್ಟೆಲ್ ವಿದ್ಯಾರ್ಥಿಗಳ ಫಲಿತಾಂಶ ಶೇ.71ರಷ್ಟಿತ್ತು. ಈ ಬಾರಿ ಶೇ.87.06ರಷ್ಟಾಗಿದೆ. ಮುಂದಿನ ವರ್ಷ ಇನ್ನೂ ಶೇ.10ರಷ್ಟು ಉತ್ತಮಗೊಳ್ಳಬೇಕು. ಶೇ. 100ರಷ್ಟು ಫಲಿತಾಂಶ ಪಡೆಯಲು ಪ್ರಯತ್ನಿಸಬೇಕು, ಇನ್ನು ಮುಂದೆ ಪ್ರತಿ ತಿಂಗಳ ಪರಿಶೀಲನಾ ಸಭೆ ನಡೆಸುತ್ತೇನೆ. ಈ ದಿಸೆಯಲ್ಲಿ ಈಗಿನಿಂದಲೇ ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು.

ಶೋಕಾಸ್ ನೋಟಿಸ್: ಸರ್ಕಾರ ಕೋಟ್ಯಂತರ ರೂ. ಖರ್ಚು ಮಾಡಿ ಹಾಸ್ಟೆಲ್​ಗಳಲ್ಲಿ ಎಲ್ಲ ಸೌಲಭ್ಯ ಕಲ್ಪಿಸಿದರೂ ಫಲಿತಾಂಶ ಉತ್ತಮಗೊಳ್ಳದಿದ್ದರೆ ನೀವೇ ಕಾರಣ. ಸಮಾಜ ವಿಜ್ಞಾನ, ವಿಜ್ಞಾನ, ಕನ್ನಡದಲ್ಲೂ ಕೆಲ ವಿದ್ಯಾರ್ಥಿಗಳು ಫೇಲಾಗುತ್ತಾರೆ ಎಂದರೆ ಕ್ಷಮಿಸಲಾರದ ಅಪರಾಧ. ಬದಲಾವಣೆ ಕಾಣದಿದ್ದಲ್ಲಿ ಉಳಿಗಾಲವಿಲ್ಲ. ಕಡಿಮೆ ಫಲಿತಾಂಶ ಬಂದ ಹಾಸ್ಟೆಲ್ ವಾರ್ಡನ್​ಗಳಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿ ವಿವರಣೆ ಪಡೆಯುವಂತೆ ಇಲಾಖೆ ಜಂಟಿ ನಿರ್ದೇಶಕಿ ಎಚ್.ಸಿ ಸಿಂಧುಗೆ ಸೂಚಿಸಿದರು.

ವಿಶೇಷ ತರಗತಿ: ಎಸ್​ಎಸ್​ಎಲ್​ಸಿ ಪೂರಕ ಪರೀಕ್ಷೆಗೆ ಒಂದು ತಿಂಗಳ ಕಾಲಾವಕಾಶ ಇದೆ. ಆಯಾ ತಾಲೂಕುಗಳಲ್ಲಿನ ಒಂದು ವಸತಿ ಶಾಲೆಯಲ್ಲಿ ಅನುತ್ತೀರ್ಣರಾದ ಮಕ್ಕಳನ್ನು ಸೇರಿಸಿ ನುರಿತ ಶಿಕ್ಷಕರಿಂದ ತರಗತಿ ನಡೆಸಿ ಉತ್ತೀರ್ಣರಾಗುವಷ್ಟು ಸಜ್ಜುಗೊಳಿಸಿದರೆ ಭವಿಷ್ಯ ರೂಪಿಸಿಕೊಳ್ಳುತ್ತಾರೆ. ಈ ಸಂಬಂಧ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.

ಮುಳಬಾಗಿಲಿನ ಘಟ್ಟು ವೆಂಕಟರಮಣದ ಮುರಾರ್ಜಿ ದೇಸಾಯಿ ವಸತಿ ಶಾಲೆ ಮಾದರಿಯಾಗಿದ್ದು, ವಸತಿ ಶಾಲೆ ನಡೆಸುವ ಕುರಿತು ಅಲ್ಲಿ ವಸತಿ ಶಾಲೆಗಳ ಪ್ರಾಂಶುಪಾಲರಿಗೆ ಒಂದು ದಿನದ ಕಾರ್ಯಾಗಾರ ನಡೆಸಲು ದಿನಾಂಕ ನಿಗದಿಪಡಿಸುವಂತೆ ಸೂಚಿಸಿದರು.

ಮುಂದಿನ ವರ್ಷದ ಫಲಿತಾಂಶಕ್ಕಾಗಿ ಮಕ್ಕಳ ಸ್ಥಿತಿಗತಿಗಳ ವರದಿ ಸಿದ್ಧಪಡಿಸಿಕೊಳ್ಳಬೇಕು. ಹಾಸ್ಟೆಲ್ ವಾರ್ಡನ್​ಗಳು ಮಕ್ಕಳ ಕಡೆ ಸಂಪೂರ್ಣ ಗಮನ ನೀಡುವಂತಿದ್ದರೆ ಕಾರ್ಯನಿರ್ವಹಿಸಿ, ಇಲ್ಲವೇ ಸ್ವಯಂಪ್ರೇರಿತರಾಗಿ ನೀವೇ ಕೆಲಸ ಬಿಟ್ಟು ಹೋಗಿ ಎಂದು ಎಚ್ಚರಿಸಿದರು.

ಹಾಸ್ಟೆಲ್​ಗಳ ಬಯೋಮೆಟ್ರಿಕ್ ಹಾಜರಾತಿ ಸಮಾಧಾನಕರವಾಗಿಲ್ಲ. ಒತ್ತಾಯಕ್ಕೆ ಮಕ್ಕಳನ್ನು ಕರೆತಂದು ಹಿಡಿದಿಟ್ಟುಕೊಳ್ಳುವುದನ್ನು ಬಿಡಬೇಕು. ಹಾಸ್ಟೆಲ್​ನಲ್ಲಿರುವ ಮಕ್ಕಳು ಹೊರಗೆ ಹೋಗಿದ್ದಾಗ ಅನಾಹುತಗಳಾದಲ್ಲಿ ನೀವೇ ಜವಾಬ್ದಾರರು. ಯಾರ ಒತ್ತಾಯಕ್ಕೂ ಹಾಸ್ಟೆಲ್ ನಡೆಸುವಂತಾಗಬಾರದು.

| ಜಿ. ಜಗದೀಶ್, ಜಿಪಂ ಸಿಇಒ

Leave a Reply

Your email address will not be published. Required fields are marked *