ಬಣ್ಣದಲ್ಲಿ ಬಗೆದಷ್ಟೂ ಭಾವನೆಗಳು

ಧುನಿಕತೆಯ ವೇಗಕ್ಕೆ ಬದುಕೂ ಅಂಟಿಕೊಂಡಿದೆ. ಪ್ರತಿಯೊಬ್ಬರ ಜೀವನವೂ ಅವರವರದೇ ಆದ ಜಂಜಡಗಳು, ಒತ್ತಡಗಳ ಮಧ್ಯೆ ಸಾಗುತ್ತಿದೆ. ಹೀಗಿರುವಾಗ ಕುಟುಂಬ ನಿಭಾಯಿಸಬೇಕಾ? ಖಾಸಗಿ ಬದುಕಿಗೆ ಸಮಯ ನೀಡಬೇಕಾ? ಯಾವಾಗಲೂ ಕೆಲಸ ಮಾಡುತ್ತಲೇ ಇರಬೇಕಾ ಎಂಬ ಗೊಂದಲದಲ್ಲಿ ಬೇಸತ್ತ ಜೀವಗಳಿಗೂ ಒಂದು ಸಣ್ಣ ಬ್ರೇಕ್ ಬೇಕಲ್ಲವೇ? ಆ ಬ್ರೇಕ್ ‘ಒಂಥರಾ ಬಣ್ಣಗಳು’ ಚಿತ್ರದಲ್ಲಿ ಸಿಗಲಿದೆಯಂತೆ. ಪಯಣದಲ್ಲಿಯೇ ಸಾಗುವ ಸಿನಿಮಾದಲ್ಲಿ ಬಗೆದಷ್ಟೂ ಎಮೋಷನ್ಸ್, ಚಿತ್ರದುದ್ದಕ್ಕೂ ಹೊಸ ಹೊಸ ಜಾಗಗಳನ್ನು ಪರಿಚಯಿಸಿದ್ದಾರಂತೆ ನಿರ್ದೇಶಕ ಸುನೀಲ್ ಭೀಮ್ಾವ್. ಇತ್ತೀಚೆಗೆ ಪಯಣದ ಹಾದಿಯನ್ನು ಮೆಲುಕು ಹಾಕಿಕೊಂಡ ಚಿತ್ರತಂಡ, ಆ 17ಕ್ಕೆ ಸಿನಿಮಾ ಬಿಡುಗಡೆ ಮಾಡುವುದಾಗಿಯೂ ಘೋಷಿಸಿಕೊಂಡಿತು.

‘ಪ್ರತಾಪ್, ಕಿರಣ್, ಪ್ರವೀಣ್, ಸೋನು ಮತ್ತು ಹಿತಾ. ಚಿತ್ರ ಸಾಗುವುದೇ ಈ ಐದು ಪಾತ್ರಗಳ ಮೇಲೆ. ಐವರ ನಡುವೆ ಒಂದು ಕಥೆ ಸಾಗಿದರೆ, ಒಬ್ಬೊಬ್ಬರ ಮನಸ್ಸಿನಲ್ಲಿ ಒಂದೊಂದು ಭಿನ್ನ ಕಥೆ ತೆರೆದುಕೊಳ್ಳುತ್ತದೆ. ಐವರು ಆರಂಭಿಸುವ ಮೂರು ದಿನದ ಪ್ರಯಾಣದಲ್ಲಿ ಏನೆಲ್ಲ ಆಗುತ್ತದೆ? ಆ ಅನುಭವವನ್ನು ಇಡೀ ಸಿನಿಮಾದಲ್ಲಿ ಭಾವನಾತ್ಮಕವಾಗಿ ಕಟ್ಟಿಕೊಟ್ಟಿದ್ದೇವೆ’ ಎಂದು ಚಿತ್ರದ ಕಥೆ ವಿವರಿಸುತ್ತಾರೆ ನಿರ್ದೇಶಕ ಸುನೀಲ್. ನಿರ್ದೇಶಕರ ಕನಸಿಗೆ ಪೂರಕವಾಗಿ ದೃಶ್ಯಾವಳಿಗಳನ್ನು ಕಟ್ಟಿಕೊಟ್ಟ ಖುಷಿ ಛಾಯಾಗ್ರಾಹಕ ಮನೋಹರ್ ಜೋಶಿ ಮೊಗದಲ್ಲಿತ್ತು. ‘ಈವರೆಗೂ ಕರ್ನಾಟಕದಲ್ಲಿ ಎಲ್ಲೆಲ್ಲಿ ಸಿನಿಮಾಗಳು ಚಿತ್ರೀಕರಣವಾಗಿಲ್ಲವೋ, ಅಂಥ ಸ್ಥಳಗಳಲ್ಲಿ ನಮ್ಮ ಸಿನಿಮಾ ಶೂಟ್ ಆಗಿದೆ. 30 ದಿನಗಳ ಕಾಲ ಇಡೀ ಕರ್ನಾಟಕವನ್ನು ಹೊಸ ರೀತಿಯಲ್ಲಿ ತೋರಿಸಲು ಪ್ರಯತ್ನಪಟ್ಟಿದ್ದೇವೆ’ ಎಂದರು ಜೋಶಿ. ಬಿಜೆ ಭರತ್ ಸಂಗೀತದಲ್ಲಿ ಹಾಡುಗಳ ಸಂಯೋಜನೆಯಾಗಿದ್ದು, ಸುಪ್ರಿಯಾ, ಸಂಗೀತಾ, ಸಂಚಿತ್ ಹೆಗಡೆ ಸೇರಿ ಹೊಸ ಹೊಸ ಪ್ರತಿಭೆಗಳಿಗೆ ಅವರು ಅವಕಾಶ ನೀಡಿದ್ದಾರೆ. ಸುನೀಲ್ ಸಿನಿಮಾ ಸಾಹಸಕ್ಕೆ ಕೈ ಜೋಡಿಸಿದವರು ನಿರ್ವಪಕ ಯೋಗೇಶ್ ಕುಮಾರ್. ‘ಹೊಸಬರಿಗೆ ಪ್ರೋತ್ಸಾಹ ನೀಡಿದರೆ, ಇನ್ನೂ ಒಳ್ಳೊಳ್ಳೆಯ ಸಿನಿಮಾಗಳನ್ನು ನೀಡಲು ದಾರಿ ಮಾಡಿಕೊಟ್ಟಂತಾಗುತ್ತದೆ. ಅಷ್ಟೇ ಕಾಳಜಿಯಿಂದ ಸಿನಿಮಾ ಮಾಡಿದ್ದೇವೆ, ನೋಡಿ ಹರಸಿ’ ಎಂದರು.

ಸಿನಿಮಾ ನೋಡುತ್ತಿದ್ದರೆ ನಮ್ಮ ಕಥೆಯೇ ತೆರೆಮೇಲೆ ನೋಡಿದ ಅನುಭವ ಪ್ರತಿಯೊಬ್ಬ ಪ್ರೇಕ್ಷಕನಿಗೂ ಸಿಗಲಿದೆ ಎಂದು ಪ್ರತಾಪ್ ನಾರಾಯಣ್ ಹೇಳಿಕೊಂಡರೆ, ‘ಯುವಜನರನ್ನೇ ಗಮನದಲ್ಲಿಟ್ಟುಕೊಂಡು ಮೂಡಿಬಂದ ಸಿನಿಮಾ ಇದು. ಪಕ್ಕಾ ಹುಬ್ಬಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ’ ಎನ್ನುತ್ತಾರೆ ಸೋನು ಗೌಡ. ಫಾಸ್ಟ್ ದುನಿಯಾದಲ್ಲಿ ಒತ್ತಡಗಳನ್ನು ಬದಿಗಿಟ್ಟು, ಒಂದು ಬದಲಾವಣೆಗಾಗಿ ಬ್ರೇಕ್ ತೆಗೆದುಕೊಳ್ಳುವುದೇ ‘ಒಂಥರಾ ಬಣ್ಣಗಳು’ ಎಂಬುದು ಕಿರಣ್ ಶ್ರೀನಿವಾಸ್ ವ್ಯಾಖ್ಯಾನ. ಚಿತ್ರದಲ್ಲಿ ಪ್ರಬುದ್ಧ ಯುವತಿಯಾಗಿ, ನೇರ ನುಡಿಯ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರಂತೆ ಹಿತಾ ಚಂದ್ರಶೇಖರ್. ನವನಟ ಪ್ರವೀಣ್ ತಂಡದಲ್ಲಿ ಸ್ಥಾನ ಪಡೆದಿದ್ದು, ಸ್ನೇಹ-ಬಾಂಧವ್ಯಕ್ಕೆ ಸಂಬಂಧಿಸಿದ ಅಂಶಗಳನ್ನು ಚಿತ್ರದಲ್ಲಿ ಕಣ್ತುಂಬಿಕೊಳ್ಳಲಿದ್ದೀರಿ ಎನ್ನುತ್ತಾರೆ ಅವರು.

Leave a Reply

Your email address will not be published. Required fields are marked *