ಬಣವಿ, ಆಕಳು ಬೆಂಕಿಗಾಹುತಿ

ಮುಂಡರಗಿ: ಶಾರ್ಟ್ ಸರ್ಕ್ಯೂಟ್​ನಿಂದ ತಗಡಿನ ಶೆಡ್​ಗೆ ಬೆಂಕಿ ತಗುಲಿ ಎರಡು ಮೇವಿನ ಬಣವಿ ಹಾಗೂ ಒಂದು ಆಕಳು ಬೆಂಕಿಗಾಹುತಿಯಾದ ಘಟನೆ ತಾಲೂಕಿನ ಹಿರೇವಡ್ಡಟ್ಟಿ ಗ್ರಾಮದ ಹೊರವಲಯದಲ್ಲಿ ಸೋಮವಾರ ತಡರಾತ್ರಿ ಸಂಭವಿಸಿದೆ.ಗ್ರಾಮದ ರೈತ ಬಸವರಾಜ ಶಂಕ್ರಪ್ಪ ಬೇಟಗೇರಿ ಅವರು ತಮ್ಮ 2.35 ಎಕರೆ ಜಮೀನಿನಲ್ಲಿ ಬೆಳೆದಿದ್ದ ಶೇಂಗಾ ಹಾಗೂ ಬಿಳಿಜೋಳದ ಮೇವಿನ ಬಣವಿಯನ್ನು ಹಾಕಿದ್ದರು. ಜಮೀನಿನ ಕೊಳವಿಬಾವಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಸರ್ವಿಸ್ ವೈರ್ ಶಾರ್ಟ್ ಸರ್ಕ್ಯೂಟ್​ನಿಂದಾಗಿ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಮೇವಿನ ಬಣವಿಗೆ ಬೆಂಕಿ ತಗುಲಿ ನಂತರ ಪಕ್ಕದಲ್ಲಿದ್ದ ತಗಡಿನ ಶೆಡ್​ಗೆ ಆವರಿಸಿದ ಪರಿಣಾಮ ಶೆಡ್​ನಲ್ಲಿದ್ದ ಒಂದು ಹಸು ಸ್ಥಳದಲ್ಲೇ ಬೆಂಕಿಗಾಹುತಿಯಾಗಿದೆ.
2 ಟ್ರ್ಯಾಕ್ಟರ್ ಜೋಳದ ಮೇವು, 4 ಟ್ರ್ಯಾಕ್ಟರ್ ಶೇಂಗಾ ಮೇವು ಹಾಗೂ ಒಂದು ಹಸು ಬೆಂಕಿಗೆ ಆಹುತಿಯಾಗಿದೆ. 1 ಲಕ್ಷ ರೂ. ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಘಟನಾ ಸ್ಥಳಕ್ಕೆ ಹಿರೇವಡ್ಡಟ್ಟಿ ಗ್ರಾಮ ಲೆಕ್ಕಾಧಿಕಾರಿ ಮಂಜುನಾಥ ಮಂದಾಗನಿ ಭೇಟಿ ನೀಡಿ ಪರಿಶೀಲಿಸಿದರು. ಮೇಲಧಿಕಾರಿಗಳ ಗಮನಕ್ಕೆ ತಂದು ಸರ್ಕಾರದಿಂದ ಪರಿಹಾರ ದೊರಕಿಸಿಕೊಡಲಾಗುವುದು ಎಂದು ತಿಳಿಸಿದರು.

Leave a Reply

Your email address will not be published. Required fields are marked *