ಯಾದಗಿರಿ: ಸೌಲಭ್ಯ ವಂಚಿತ ಕಡು ಬಡವರಿಗೆ ಸರಕಾರದ ಸೌಲಭ್ಯಗಳನ್ನು ಒದಗಿಸುವುದೇ ನಮ್ಮೆಲ್ಲರ ಮೂಲ ಉದ್ದೇಶವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದರು.
ಶಹಾಪುರದ ನಗರಸಭೆ ಆವರಣದಲ್ಲಿ ಮಂಗಳವಾರ ನಗರಸಭೆಯಿಂದ ಆಯೋಜಿಸಿದ್ದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಹೊಲಿಗೆ ಯಂತ್ರ, ಬ್ಯುಟಿಷಿಯನ್ ತರಬೇತಿ ಪ್ರಮಾಣ ಪತ್ರ ಮತ್ತು ಎಸ್ಸಿ, ಎಸ್ಟಿ ಸಮುದಾಯದವರಿಗೆ ಲ್ಯಾಪ್ಟಾಪ್ ವಿತರಣೆ, ಬೀದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಅಲೆಮಾರಿ, ಅರೆ ಅಲೆಮಾರಿ ಸಮಾಜದವರಿಗೆ ನಿವೇಶನ ಹಕ್ಕು ಪತ್ರ ವಿತರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ವಸತಿ ರಹಿತ ಹಾಗೂ ನಿವೇಶನ ರಹಿತ ಕುಟುಂಬಗಳಿಗೆ ನಿವೇಶನ ನೀಡುವ ಕುರಿತು ಕರೆದಾಗ ಸುಮಾರು 3500 ಅಜರ್ಿಗಳು ಬಂದಿದ್ದು, 22ರಿಂದ 25 ಎಕರೆ ಪ್ರದೇಶದಲ್ಲಿ ನಿವೇಶನ ನೀಡುವ ಕಾರ್ಯವಾಗಿದೆ ಎಂದರು.
ಕನ್ಯಾಕೋಳೂರು ರಸ್ತೆಯಲ್ಲಿ 200 ಸ್ಲಮ್ ಮನೆಗಳು, ಕುಂಬಾರ ಮತ್ತು ಬುಟ್ನಾಡಿ ಜನಾಂಗದವರಿಗೆ 2 ಎಕರೆ ಹಾಗೂ ಅಲೆಮಾರಿ ಜನಾಂಗದವರಿಗೆ 2 ಎಕರೆ ಜಮೀನು ಮಂಜೂರು ಸೇರಿ ಹಲವು ಕಾರ್ಯಗಳು ನಡೆದಿವೆ. ಹಳಿಸಗರ ಹತ್ತಿರದ ಮಲ್ಲಯ್ಯನ ದೇವಸ್ಥಾನದ ಹತ್ತಿರ 480 ನಿವೇಶನಕ್ಕೆ ನಗರಸಭೆ ವತಿಯಿಂದ 12 ಎಕರೆ ಜಮೀನಿಗೆ ಅನುಮೋದನೆ ನೀಡಲಾಗಿದ್ದು, ಕುಡಿಯುವ ನೀರು, ಸಿಸಿ ರಸ್ತೆ, ಚರಂಡಿ ಮತ್ತು ವಿದ್ಯುತ್ ಸಂಪರ್ಕ ಕಲ್ಪಿಸುವ ಕಾರ್ಯ ನಡೆದಿದೆ ಎಂದು ಹೇಳಿದರು.