ಬಡ ಮಕ್ಕಳ ಶಿಕ್ಷಣಕ್ಕಾಗಿ ವಿವಿಧ ಯೋಜನೆ

ವಿಜಯವಾಣಿ ಸುದ್ದಿಜಾಲ ಜೇವರ್ಗಿ
ಪಟ್ಟಣದ ಸಾರಿಗೆ ಘಟಕದ ಹತ್ತಿರ ಸಮಾಜ ಕಲ್ಯಾಣ ಇಲಾಖೆಯಿಂದ 4.5ಕೋಟಿ ರೂ. ವೆಚ್ಚದಲ್ಲಿ ಎಸ್ಸಿ/ ಎಸ್ಟಿ (ಬಾಲಕ) ವಿದ್ಯಾರ್ಥಿಗಳ ವಸತಿ ನಿಲಯ ನಿರ್ಮಾಣ ಮಾಡಲಾಗಿದೆ ಎಂದು ಶಾಸಕ ಡಾ.ಅಜಯಸಿಂಗ್ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿವಿಧ ಕಾಮಗಾರಿಗಳಿಗೆ ಚಾಲನೆ ಸಮಾರಂಭ ಉದ್ಘಾಟಿಸಿದ ಅವರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಭಿವೃದ್ಧಿಗೆ 2.90ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಎಸ್ಸಿ, ಎಸ್ಟಿ ಬಾಲಕರ ವಸತಿ ನಿಲಯ ನೆಲ ಮಹಡಿಗೆ 98ಲಕ್ಷ, ಮೊದಲ ಮಹಡಿಗೆ 99.42ಲಕ್ಷ, ಮಹಿಳಾ ವಿಶ್ರಾಂತಿ ಕೊಠಡಿಗೆ 12ಲಕ್ಷ ಹಾಗೂ 6 ಕೋಣೆಗಳ ನಿರ್ಮಾಣಕ್ಕೆ 1ಕೋಟಿ ಅನುದಾನ ನೀಡಲಾಗಿತ್ತು. ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗಿದೆ ಎಂದು ತಿಳಿಸಿದರು.

ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡಿಸುವ ಉದ್ದೇಶದಿಂದ ಶಾಲಾ ಕೋಣೆಗಳು ಹಾಗೂ ವಸತಿ ನಿಲಯಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ. ತಾಲೂಕಿನಲ್ಲಿ 6 ಮುರಾರ್ಜಿ ದೇಸಾಯಿ ವಸತಿ ಶಾಲೆಗಳು ಮಂಜೂರಾಗಿವೆ. ಅನುದಾನ ಬಿಡುಗಡೆಯಾದ ನಂತರ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.

ಜಿಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಶಾಂತಪ್ಪ ಕೂಡಲಗಿ, ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಪ್ರಭುಶೆಟ್ಟಿ ಮೂಲಗೆ, ತಹಸೀಲ್ದಾರ್ ಸಿದ್ದರಾಯ ಬೋಸಗಿ, ಸಮಾಜ ಕಲ್ಯಾಣ ಅಧಿಕಾರಿ ಅಶೋಕ ನಾಯಕ, ತಾಪಂ ಇಒ ಪ್ರಭು ಮಾನೆ, ಶಿಶು ಅಭಿವೃದ್ಧಿ ಅಧಿಕಾರಿ ಶಿವಪ್ರಕಾಶ ಹಿರೇಮಠ, ಬಿಸಿಎಂ ಅಧಿಕಾರಿ ವಿ.ಬಿ.ಹಿರೇಗೌಡ, ರೇಷ್ಮೆ ಇಲಾಖೆ ಅಧಿಕಾರಿ ಭೀಮಸೇನರಾವ್ ವಕೀಲ, ಭೂಸೇನಾ ನಿಗಮದ ಅಧಿಕಾರಿ ಸತೀಶ ಬಿ.ಟಿ, ಪಿಕಾರ್ಡ್​ ಬ್ಯಾಂಕ್ ಅಧ್ಯಕ್ಷ ಚಂದ್ರಕಾಂತ ಯಂಕಂಚಿ, ಪ್ರಮುಖರಾದ ರುಕುಂಪಟೇಲ್ ಇಜೇರಿ, ಖಾಸೀಂ ಪಟೇಲ್ ಮುದವಾಳ, ಚಂದ್ರಶೇಖರ ಹರನಾಳ, ರಾಜಶೇಖರ ಸೀರಿ, ಕಾಶಿರಾಯಗೌಡ ಯಲಗೋಡ, ಮುನ್ನಾ ಪಟೇಲ ಯಾಳವಾರ, ಶೌಕತ್ ಅಲಿ ಆಲೂರ, ಸಂಗಣ್ಣ ಇಟಗಾ, ನೀಲಕಂಠ ಅವಂಟಿ, ಮರೆಪ್ಪ ಸರಡಗಿ, ರವಿ ಕೋಳಕೂರ ಇತರರಿದ್ದರು. ಡಾ.ವಿಷ್ಣುವರ್ಧನ್ ಸ್ವಾಗತಿಸಿದರು. ಡಾ.ಕರಿಗೂಳೇಶ್ವರ ನಿರೂಪಣೆ ಮಾಡಿದರು.