ಕಂಪ್ಲಿ: ಒಳ ಮೀಸಲಾತಿ ನೀಡುವತನಕ ರಾಜ್ಯದಲ್ಲಿ ಬಡ್ತಿ, ನೇಮಕ ಪ್ರಕ್ರಿಯೆ ನಿಲ್ಲಿಸಬೇಕು. ಇಲ್ಲದಿದ್ದರೆ ನಾವು ಪ್ರಾಣತ್ಯಾಗಕ್ಕೂ ಹಿಂಜರಿಯುವುದಿಲ್ಲ ಎಂದು ಮಾದಿಗ ಸಮುದಾಯದ ಕ್ರಾಂತಿಕಾರಿ ರಥಯಾತ್ರೆ ರಾಜ್ಯ ಸಂಚಾಲಕ ಬಿ.ಆರ್.ಭಾಸ್ಕರ್ ಪ್ರಸಾದ್ ಹೇಳಿದರು.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಕ್ರಾಂತಿಕಾರಿ ರಥಯಾತ್ರೆ ಸಮಾವೇಶದಲ್ಲಿ ಗುರುವಾರ ಮಾತನಾಡಿದರು. ಒಳ ಮೀಸಲಾತಿ ಜಾರಿಗೊಳಿಸುವ ಅಧಿಕಾರವನ್ನು ಸುಪ್ರಿಂಕೋರ್ಟ್ ರಾಜ್ಯ ಸರ್ಕಾರಗಳಿಗೆ ನೀಡಿದ್ದರೂ, ರಾಜ್ಯದಲ್ಲಿ ಒಳಮೀಸಲಾತಿ ಜಾರಿಗೊಂಡಿಲ್ಲ. ಒಳಮೀಸಲಾತಿ ನೀಡುವತನಕ ಬಡ್ತಿ, ನೇಮಕ ಮಾಡುವುದಿಲ್ಲ ಎಂದು ಸಿಎಂ ನೀಡಿರುವ ಭರವಸೆ ಈಡೇರಿಸಬೇಕೆಂದು ಆಗ್ರಹಿಸಿದರು.
ಒಳ ಮೀಸಲಾತಿ ನೀಡದೆ 36 ಸಾವಿರ ಬ್ಯಾಕ್‌ಲಾಗ್ ಹುದ್ದೆ ಭರ್ತಿ, ಬಡ್ತಿಗೆ ಮುಂದಾಗಿರುವುದು ಮಾದಿಗ ಸಮುದಾಯಕ್ಕೆ ಸರ್ಕಾರ ಮಾಡುತ್ತಿರುವ ವಂಚನೆಯಾಗಿದೆ. ಹೊಸಪೇಟೆಯಲ್ಲಿ ಸಾಧನಾ ಸಮಾವೇಶಕ್ಕೆ ಸಿಎಂ ಬಂದಾಗ ಮಾದಿಗ ಸಮುದಾಯದ ಕ್ಷಮೆ ಕೇಳುವುದರೊಂದಿಗೆ ನೇಮಕ, ಬಡ್ತಿ ಪ್ರಕ್ರಿಯೆ ರದ್ದುಗೊಳಿಸುವಂತೆ ಒತ್ತಾಯಿಸಬೇಕೆಂದು ಬಿ.ಆರ್.ಭಾಸ್ಕರ್ ಪ್ರಸಾದ್ ತಿಳಿಸಿದರು.
ಇದಕ್ಕೂ ಮುನ್ನ ವಾಲ್ಮೀಕಿ ವೃತ್ತದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ರಥಯಾತ್ರೆ, ಬೈಕ್ ರ‌್ಯಾಲಿ ನಡೆದು ಅಂಬೇಡ್ಕರ್ ವೃತ್ತದಲ್ಲಿ ಸಮಾವೇಶಗೊಂಡಿತು. ಎಚ್.ಗುಂಡಪ್ಪ, ಆರ್.ಆಂಜಿನೇಯ, ಆರ್.ಎಂ.ರಾಮಯ್ಯ, ಎನ್.ಗಂಗಣ್ಣ, ಎನ್.ಬುಜ್ಜಿಕುಮಾರ್, ಎಚ್.ಶೇಖರ, ಎಚ್.ಯಲ್ಲಪ್ಪ, ಲಕ್ಷ್ಮೀಪತಿ ಇತರರಿದ್ದರು.