ಬಡವರಿಗೆ ಉಚಿತ ಆರೋಗ್ಯ ಶಿಬಿರ ಸಹಕಾರಿ

ಮುಳಗುಂದ: ಗ್ರಾಮೀಣ ಜನರ ಆರೋಗ್ಯ ರಕ್ಷಣೆಗೆ ಉಚಿತ ಆರೋಗ್ಯ ಶಿಬಿರಗಳು ಸಹಕಾರಿಯಾಗಿವೆ. ಗ್ರಾಮಗಳಲ್ಲಿ ಆಯೋಜಿಸುವ ಇಂತಹ ಶಿಬಿರಗಳ ಪ್ರಯೋಜನವನ್ನು ಪ್ರತಿಯೊಬ್ಬ ಕೂಲಿ ಕಾರ್ವಿುಕರು ಪಡೆದುಕೊಳ್ಳಬೇಕು ಎಂದು ಚಿಂಚಲಿ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಎ.ಎಸ್. ಸವಡಿ ಹೇಳಿದರು.

ಸಮೀಪದ ನೀಲಗುಂದ ಗ್ರಾಮದ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಬದುವು ನಿರ್ಮಾಣ ಮಾಡುತ್ತಿರುವ 400 ಕೂಲಿ ಕಾರ್ವಿುಕರಿಗೆ ಉಚಿತವಾಗಿ ಆರೋಗ್ಯ ತಪಾಸಣೆ ಮತ್ತು ಔಷಧ ವಿತರಿಸಿ ಅವರು ಮಾತನಾಡಿದರು. ಕೆಲವೊಂದು ಕಾಯಿಲೆಗಳು ಮಾನವನಿಗೆ ಮಾರಕವಾಗಿದ್ದು, ಈಗಿನ ಪರಿಸ್ಥಿತಿಯಲ್ಲಿ ಸಣ್ಣ ಜ್ವರವನ್ನು ನಿರ್ಲಕ್ಷ್ಯ ಮಾಡಬಾರದು. ಪ್ರತಿಯೊಬ್ಬರೂ ಆರೋಗ್ಯದತ್ತ ಹೆಚ್ಚು ಗಮನ ಕೊಡಬೇಕು ಎಂದರು.

ಮುಳಗುಂದ ಕೃಷಿ ಸಹಾಯಕ ಅಧಿಕಾರಿ ಎಂ.ಎಸ್. ಸುಂಕಾಪೂರ ಮಾತನಾಡಿ, ನರೇಗಾ ಯೋಜನೆಯಲ್ಲಿ ಸುಮಾರು 400 ಜನ ಕೂಲಿ ಕೆಲಸಕ್ಕೆ ಬರುತ್ತಿದ್ದು, ಇವರಿಗೆ ಕೆಲಸ ಮಾಡುವ ಸ್ಥಳದಲ್ಲಿ ಆರೋಗ್ಯದ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ಇಂಥ ಶಿಬಿರ ಹಮ್ಮಿಕೊಳ್ಳಲಾಗಿದೆ. ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ರವಿ ವಗ್ಗನವರ, ಮೇಲ್ವಿಚಾರಕ ಎಕನಾಥ ಪಾಟೀಲ, ಲಕ್ಷ್ಮಿ ಎಸ್., ಕಮಲಾಕ್ಷಿ ಹಳ್ಳಿ, ಲಲಿತಾ ತಿರ್ಲಾಪೂರ, ನೀಲಮ್ಮಾ ಕಾಳೆ, ಪ್ರತಿಭಾ ಬಾಲರೆಡ್ಡಿ, ಯಮನೂರಪ್ಪ ನದಾಫ್, ಇತರರು ಇದ್ದರು.

Leave a Reply

Your email address will not be published. Required fields are marked *