ಬಡವನ ಮೇಲೆ ಅಧಿಕಾರಿಗಳ ದರ್ಪ

ಶಿರಸಿ: ಕಳೆದ ನಾಲ್ಕು ವರ್ಷಗಳಿಂದ ಮೌನದಿಂದ ಇದ್ದ ಅರಣ್ಯ ಇಲಾಖೆ ಮುಕ್ತಾಯದ ಹಂತದಲ್ಲಿದ್ದ ಬಡ ಕುಟುಂಬದ ಮನೆ ನೆಲಸಮಗೊಳಿಸಿದೆ.

ತಾಲೂಕಿನ ಇಸಳೂರು ಪಂಚಾಯಿತಿ ಹುಡಸಲಮನೆಯಲ್ಲಿ ಕೂಲಿ ಕೆಲಸ ಮಾಡುವ ಹನುಮಂತ ರಾಮಣ್ಣ ಭೋವಿವಡ್ಡರ್ ಎನ್ನುವವರು ಗುಡಿಸಲಿನಲ್ಲಿ ವಾಸವಾಗಿದ್ದರು. ಮೂವರು ಮಕ್ಕಳು ಪತ್ನಿಯೊಂದಿಗೆ ವಾಸವಾಗಿದ್ದ ಅವರು ಶಾಶ್ವತ ಸೂರು ನಿರ್ವಿುಸಿ ಕೊಳ್ಳುವ ಕನಸಿನೊಂದಿಗೆ ಮನೆಗೆ ತಾಗಿಯೇ ಇದ್ದ ಜಾಗದಲ್ಲಿ ನಾಲ್ಕು ವರ್ಷಗಳ ಹಿಂದೆ ಫೌಂಡೇಶನ್ ಹಾಕಿದ್ದರು. ಈ ನಡುವೆ ಪತ್ನಿ ಅಕಾಲಿಕ ನಿಧನ ಹೊಂದಿದ್ದರೂ ಮೂವರು ಮಕ್ಕಳ ಜವಾಬ್ದಾರಿ ವಹಿಸಿಕೊಂಡು ಕೂಲಿ ಮಾಡಿ ಮನೆ ಕೆಲಸವನ್ನು ಮುಂದುವರಿಸಿದ್ದಾರೆ. ಪ್ರತಿ ವರ್ಷವೂ ಉಳಿತಾಯದ ಹಣದಲ್ಲಿ ಮನೆ ನಿರ್ವಿುಸುತ್ತಿದ್ದರು. ಗೋಡೆ ನಿರ್ಮಾಣ ಪೂರ್ಣಗೊಂಡು ಮುಚ್ಚಿಗೆಯ ಹಂತದವರೆಗೂ ಬಂದಿದೆ.

ಆದರೆ, ಜ.14ರಂದು ಅರಣ್ಯ ಇಲಾಖೆ ಸಿಬ್ಬಂದಿ ಏಕಾಏಕಿಯಾಗಿ ‘ನೀವು ಅರಣ್ಯ ಇಲಾಖೆ ಜಾಗದಲ್ಲಿ ಮನೆ ನಿರ್ವಿುಸುತ್ತಿದ್ದೀರಿ’ ಎಂಬ ಕಾರಣ ನೀಡಿ ಮನೆಯನ್ನು ನೆಲಸಮಗೊಳಿಸಿದೆ. ಗೋಡೆಯ ಕಲ್ಲುಗಳನ್ನು ಕಿತ್ತೆಸೆದು ಫೌಂಡೇಶನ್​ಗೆ ಹಾನಿ ಉಂಟುಮಾಡಿದ್ದಾರೆ. ನಾಲ್ಕು ವರ್ಷಗಳಿಂದ ಕೂಲಿ ಮಾಡಿ ನಿರ್ವಿುಸಿಕೊಂಡ ಮನೆ ಒಂದೇ ದಿನಕ್ಕೆ ನೆಲಸಮವಾಗಿದೆ.

ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಚಂದ್ರು ಎಸಳೆ ಮತ್ತು ಇಸಳೂರು ಗ್ರಾ. ಪಂ. ಸದಸ್ಯ ಆರ್. ವಿ. ಹೆಗಡೆ ಚಿಪಗಿ, ಘಟನಾ ಸ್ಥಳಕ್ಕೆ ಶನಿವಾರ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಮಾಧ್ಯಮದೊಂದಿಗೆ ಮಾತನಾಡಿರುವ ಚಂದ್ರು ಎಸಳೆ, ‘ಫಾರೆಸ್ಟರ್ ಮತ್ತು ಆರ್​ಎಫ್​ಒ ಕಳೆದ ನಾಲ್ಕು ವರ್ಷಗಳಿಂದ ಈ ರಸ್ತೆಯಲ್ಲಿ ವಾರಕ್ಕೆ ಒಮ್ಮೆಯಾದರೂ ಸಂಚರಿಸುತ್ತಾರೆ. ಮನೆ ನಿರ್ಮಾಣ ಆರಂಭಿಸುವ ಹಂತದಲ್ಲಿಯೇ ಇದು ಅರಣ್ಯ ಜಾಗ, ಮನೆ ನಿರ್ವಿುಸಿಕೊಳ್ಳಬೇಡ ಎಂಬ ಸೂಚನೆ ನೀಡಬೇಕಿತ್ತು. ಪತ್ನಿಯೂ ಇಲ್ಲದೇ ಮಕ್ಕಳನ್ನು ನೋಡಿಕೊಂಡು ಕೂಲಿ ಮಾಡಿ ಮನೆ ನಿರ್ವಿುಸಿಕೊಂಡ ಈ ಬಡವನ ಮೇಲೆ ಅರಣ್ಯ ಇಲಾಖೆ ದೌರ್ಜನ್ಯ ನಡೆಸಿದೆ. ಇಷ್ಟ ವರ್ಷ ಸುಮ್ಮನಿದ್ದು ಏಕಾ ಏಕಿ ಈ ರೀತಿಯ ವರ್ತನೆ ತೋರಿಸಿರುವುದು ಬಡವರ ಮೇಲೆ ಇಲಾಖೆ ನಡೆಸುವ ದೌರ್ಜನ್ಯವಾಗಿದೆ. ಈ ಬಗ್ಗೆ ಉನ್ನತ ಅಧಿಕಾರಿಗಳ ಗಮನಕ್ಕೆ ತರಲಿದ್ದೇನೆ’ ಎಂದರು.

ಆಶ್ರಯ ಮನೆಯೂ ನೆಲಸಮ: ಸಮೀಪದಲ್ಲಿಯೇ ಅಂಗನವಾಡಿ ಸಹಾಯಕಿ ಲತಾ ರಾಮಚಂದ್ರ ನಾಯ್ಕ ಅವರು ನಿರ್ವಿುಸಿಕೊಳ್ಳುತ್ತಿದ್ದ ಆಶ್ರಯ ಮನೆಯನ್ನೂ ಅರಣ್ಯ ಇಲಾಖೆ ಸಿಬ್ಬಂದಿ ಕೆಡವಿದ್ದಾರೆ. ‘ಇದುವರೆಗೆ 80 ಸಾವಿರ ರೂ. ಖರ್ಚು ಮಾಡಿದ್ದೇನೆ. ಮೊದಲ ಬಿಲ್ ಮಂಜೂರಾಗಬೇಕಿದ್ದ ಈ ಸಂದರ್ಭದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಕೆಡವಿಹಾಕಿದ್ದಾರೆ’ ಎಂದು ಲತಾ ನಾಯ್ಕ ಕಣ್ಣೀರು ಹಾಕಿದ್ದಾರೆ.

Leave a Reply

Your email address will not be published. Required fields are marked *