ಔರಾದ್: ಬೆಂಗಳೂರಿನಲ್ಲಿ 2015ರಲ್ಲಿ ಸ್ಥಾಪಿತವಾದ ದಿ-ನಡ್ಜ್ ಫೌಂಡೇಷನ್ ಲಾಭರಹಿತ ಸಂಸ್ಥೆಯಾಗಿದ್ದು, ಬಡತನವನ್ನು ನಿವಾರಿಸಲು ಕಾಯರ್ೋನ್ಮುಖವಾಗಿದೆ ಎಂದು ನಡ್ಜ್ ಅಲ್ಟ್ರಾ ಪವರ್ ಪ್ರೋಗ್ರಾಂ ರಾಜ್ಯ ಮುಖ್ಯಸ್ಥ ಶ್ರೀಕಾಂತಕುಮಾರ ರೌಥ್ ಹೇಳಿದರು.
ನಾರಾಯಣಪುರ, ವಡಗಾಂವ(ಡಿ) ವಲಯದ ಹಳ್ಳಿಗಳಲ್ಲಿ ಶುಕ್ರವಾರ ಕಡುಬಡತನದ ಕುಟುಂಬಗಳ ಸವರ್ೆ ಹಾಗೂ ಮಾಹಿತಿ ಕಲೆಹಾಕುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅತುಲ್ ಸತೀಜಾ ಸಂಸ್ಥೆ ಸಂಸ್ಥಾಪಕರಾಗಿದ್ದು, ಕಳೆದ ಆ.20ರಿಂದ ಕಲಬುರಗಿ ಮತ್ತು ಬೀದರ್ ಜಿಲ್ಲೆಯ ಔರಾದ್ ತಾಲೂಕಿನಲ್ಲಿ ಸವರ್ೆ ನಡೆಯುತ್ತಿದೆ ಎಂದರು.
ಈ ಸಂಸ್ಥೆಯ ಪ್ರಮುಖ ಅಂಗವಾದ ಅಲ್ಟ್ರಾ ಪವರ್ ಕಾರ್ಯಕ್ರಮವು 21 ಸದಸ್ಯರ ಕ್ಷೇತ್ರ ತಂಡದೊಂದಿಗೆ ಪ್ರಾರಂಭಿಸಲಾಗಿದ್ದು, 1000ಕ್ಕೂ ಹೆಚ್ಚು ಅತಿ ಕಡುಬಡವರ(ನಿರ್ಗತಿಕರು) ಶ್ರೇಯೋಭಿವೃದ್ಧಿಗೆ ಶ್ರಮಿಸಲು ಪಣತೊಟ್ಟಿದೆ. ಜನರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನಿಡಿದರು.
ಬಡತನದ ಸಂಕೀರ್ಣ ಸಮಸ್ಯೆಯನ್ನು ಬಹು ಕೋನಗಳಿಂದ ನಿಭಾಯಿಸಲು ಕೌಶಲ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಕೇಂದ್ರ, ಸಾಮಾಜಿಕ ಆವಿಷ್ಕಾರ ಕೇಂದ್ರ ಮತ್ತು ಗ್ರಾಮೀಣ ಅಭಿವೃದ್ಧಿ ಕೇಂದ್ರಗಳ ಮುಖಾಂತರ ಕಾರ್ಯಮಾಡುತ್ತಿದೆ. ಕೌಶಲ ಮತ್ತು ಉದ್ಯೋಗವನ್ನು ಸಕ್ರಿಯಗೊಳಿಸುವ ಮೂಲಕ ಪ್ರವರ್ಧಮಾನದ ಜೀವನವನ್ನು ನಡೆಸಲು ಅವಕಾಶವಂಚಿತ ಯುವಕರಿಗೆ ದಾರಿ ಮಾಡಿಕೊಡುತ್ತದೆ ಎಂದು ಮಾಹಿತಿ ನೀಡಿದರು.
ಸಂಸ್ಥೆಯ ಕಲಬುರಗಿ ಮುಖ್ಯಸ್ಥ ನಾಗರಾಜ ಹೆಂಬಾಡಿ ಮಾತನಾಡಿ, ಅತಿ ಬಡತನದ ಕುಟುಂಬಗಳನ್ನು ಪರಿಶೀಲನೆ ಮಾಡಲು ಸಂಪನ್ಮೂಲ ವ್ಯಕ್ತಿಗಳನ್ನು ನಿಯೋಜಿಸಿ ಅವರಿಗೆ ಜಾರ್ಖಂಡ ರಾಜ್ಯದಲ್ಲಿ ಏಳು ದಿನಗಳ ತರಬೇತಿ ನೀಡಿ ಸಜ್ಜುಗೊಳಿಸಲಾಗಿದೆ. ಅವರು ಔರಾದ್ ತಾಲೂಕಿನ ಗ್ರಾಮಗಳ ಗುರುತಿಸುವಿಕೆ ಮತ್ತು ನಂತರ ತೀವ್ರ ಬಡ ಕುಟುಂಬಗಳ ಆಯ್ಕೆ ಮತ್ತು ಮೌಲ್ಯೀಕರಣ ಮಾಡಲಿದ್ದಾರೆ ಎಂದರು.
ಶಿವಕುಮಾರ ಬಿರಾದಾರ್, ರತಿಕಾಂತ ಸ್ವಾಮಿ, ರವಿಕುಮಾರ ಮಠಪತಿ, ಸೂರ್ಯಕಾಂತ ಇತರರಿದ್ದರು.