Friday, 16th November 2018  

Vijayavani

Breaking News

ಬಡತನ ನಿಮೂಲನೆಗೆ ಪಣತೊಟ್ಟ ಇಂದಿರಾ ಗಾಂಧಿ

Monday, 27.11.2017, 3:02 AM       No Comments

| ಪಿ. ಚಿದಂಬರಂ 

ರಾಷ್ಟ್ರೀಯ ಆಚರಣೆಯೊಂದು ನಡೆಯದೆಯೇ 2017ರ ನವೆಂಬರ್ 19 ಸರಿದೇ ಹೋಯಿತು. ಇದು ನಮ್ಮ ಇತಿಹಾಸ ಪ್ರಜ್ಞೆಯ ‘ವಿಷಾದನೀಯ ಪ್ರತಿಬಿಂಬ’ವಾಗಿತ್ತು, ನಾಚಿಕೆಗೇಡಿನ ಸಂಗತಿಯಾಗಿತ್ತು, ಸರ್ಕಾರದ ಉದಾಸೀನ ಮನೋಭಾವಕ್ಕೆ ಸಾಕ್ಷಿಯಾದ ಒಂದು ಮೌನಭಾಷ್ಯವಾಗಿತ್ತು ಎಂದರೆ ಅತಿಶಯೋಕ್ತಿಯಾಗಲಾರದು.

ಅದು ಭಾರತದ ಮೂರನೇ ಮತ್ತು ಆರನೇ ಪ್ರಧಾನ ಮಂತ್ರಿ ಇಂದಿರಾ ಗಾಂಧಿಯವರ 100ನೇ ಜನ್ಮ ವಾರ್ಷಿಕೋತ್ಸವವಾಗಿತ್ತು. ಅವರನ್ನು ಪ್ರೀತಿಸುತ್ತಿದ್ದವರೂ, ದ್ವೇಷಿಸುತ್ತಿದ್ದವರೂ ಅಗಾಧ ಸಂಖ್ಯೆಯಲ್ಲಿದ್ದುದು ನಿಜ, ಆದರೆ ಬದುಕಿರುವಷ್ಟು ದಿನವೂ ಅವರು ಎಂದಿಗೂ ಉಪೇಕ್ಷಿಸಲ್ಪಟ್ಟಿರಲಿಲ್ಲ.

ಯಶಸ್ಸು ಮತ್ತು ವೈಫಲ್ಯಗಳು ಯಾವ ಪ್ರಧಾನಿಯನ್ನೂ ಬಿಟ್ಟಿಲ್ಲ. ಆದರೆ, ಅವು ಘಟಿಸಿದ್ದು ಯಾವ ಕಾಲಘಟ್ಟ ಹಾಗೂ ಸಂದರ್ಭದಲ್ಲಿ, ಮತ್ತು ಆ ಸಮಯದಲ್ಲಿ ಒಂದಿಡೀ ದೇಶ ಮತ್ತು ಆಯಾ ಪ್ರಧಾನ ಮಂತ್ರಿ ಎದುರಿಸಿದ ಸವಾಲುಗಳೇನು ಎಂಬುದರ ಹಿನ್ನೆಲೆಯಲ್ಲಿ ಈ ಯಶಸ್ಸು ಮತ್ತು ವೈಫಲ್ಯಗಳೆರಡರ ಮೌಲ್ಯಮಾಪನ ಮಾಡಬೇಕಾಗುತ್ತದೆ. ಇಂದಿರಾ ಗಾಂಧಿಯವರು 1966ರಲ್ಲಿ ಪ್ರಧಾನ ಮಂತ್ರಿಯಾದಾಗಿನ ಸ್ಥಿತಿಗತಿಗಳಿವು-

# ಅಷ್ಟೊತ್ತಿಗಾಗಲೇ ಸಂಭವಿಸಿದ್ದ ಎರಡು ಯುದ್ಧಗಳು (1962 ಮತ್ತು 1965) ದೇಶದ ಸಂಪನ್ಮೂಲಗಳನ್ನು ಬರಿದುಮಾಡಿಬಿಟ್ಟಿದ್ದವು;

# ಆಹಾರಧಾನ್ಯಗಳ ಅಗಾಧ ಕೊರತೆ ತಾಂಡವವಾಡುತ್ತಿದ್ದುದರಿಂದಾಗಿ, ’ಕ್ಠಚ್ಝಿಜ್ಚಿ ಔಚಡಿ 480’ರ ಅಡಿಯಲ್ಲಿ ದೇಶವು ಆಹಾರದ ನೆರವನ್ನು ನೆಚ್ಚಬೇಕಾದಂಥ ಅಪಾಯದ ಪರಿಸ್ಥಿತಿ ನಿರ್ವಣವಾಗಿತ್ತು;

# ಕಾಂಗ್ರೆಸ್ ಪಕ್ಷದ ಸಂಘಟನೆ ತೀರಾ ದುರ್ಬಲವಾಗಿತ್ತು (ಮತ್ತು ತರುವಾಯದ 24 ತಿಂಗಳ ಅವಧಿಯಲ್ಲಿ ದೇಶದ 8 ರಾಜ್ಯಗಳ ಚುನಾವಣೆಗಳಲ್ಲಿ ಪಕ್ಷ ಸೋಲುಂಡಿತು).

ಬಡವರ ಬೆಂಬಲ ಗೆಲ್ಲುವ ತಪಸ್ಸು: 1967ರ ಅತೃಪ್ತಿಕರ ಚುನಾವಣಾ ಫಲಿತಾಂಶದ ನಂತರ, ಬಡವರು ಕಾಂಗ್ರೆಸ್ ಪಕ್ಷದಿಂದ ವಿಮುಖರಾಗಿದ್ದಾರೆ ಎಂಬ ಸಂಗತಿಯನ್ನು ಪಕ್ಷದ ಮಿಕ್ಕೆಲ್ಲ ನಾಯಕಗಣದ ಪೈಕಿ ಸರಿಯಾಗಿ ಗುರುತಿಸಿದ್ದು ಇಂದಿರಾ ಮಾತ್ರವೇ. ಪಕ್ಷವು ಬಡವರ ಬೆಂಬಲವನ್ನು ಮರಳಿ ದಕ್ಕಿಸಿಕೊಳ್ಳಲೇಬೇಕಾಗಿತ್ತು. ಹೀಗಾಗಿ, ಅಂದು ಚಾಲ್ತಿಯಲ್ಲಿದ್ದ ಕಾಂಗ್ರೆಸ್​ನ ಸಿದ್ಧಾಂತವಾದ ‘ಸಮಾಜವಾದ’ದೊಂದಿಗೆ ಸಂಪೂರ್ಣ ಏಕನಿಷ್ಠವಾಗಿದ್ದ ಘನವಾದ ಕಾರ್ಯಸೂಚಿಯೊಂದನ್ನು ಮಂಡಿಸುವ ಮೂಲಕ ಇಂದಿರಾ ಈ ನಿಟ್ಟಿನಲ್ಲಿ ಹಾದಿ ತೋರಿದರು.

10-ಅಂಶಗಳ ಕಾರ್ಯಕ್ರಮವೊಂದನ್ನು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಅವಗಾಹನೆ-ಅನುಷ್ಠಾನಕ್ಕೆ ಇಂದಿರಾ ಕಳುಹಿಸಿಕೊಟ್ಟರು. ವರ್ತಮಾನದ ಉದಾರೀಕೃತ ಮಾರುಕಟ್ಟೆ ಆರ್ಥಿಕತೆಯೊಂದಿಗೆ ಇದರ ಕೆಲವೊಂದು ಅಂಶಗಳು ಹೊಂದಾಣಿಕೆ ಆಗುವುದಿಲ್ಲವಾದರೂ, ಆ ಕಾಲಘಟ್ಟದಲ್ಲಿ ಆರ್ಥಿಕವಾಗಿಯೂ ಮತ್ತು ಸಾಮಾಜಿಕವಾಗಿಯೂ ಅದು ಸಮರ್ಥನೀಯವಾಗಿತ್ತು ಎಂಬುದು ನನ್ನ ಅಭಿಪ್ರಾಯ. ಅದರ ಕೆಲವೊಂದು ಅಂಶಗಳು ಇಂದಿಗೂ ಪ್ರಸ್ತುತವಾಗಿವೆ. ಉದಾಹರಣೆಗೆ, ಕನಿಷ್ಠ ಅವಶ್ಯಕತೆಗಳು, ಗ್ರಾಮೀಣ ಕಾಮಗಾರಿಗಳ ಕಾರ್ಯಕ್ರಮ ಮತ್ತು ಭೂಸುಧಾರಣೆಗಳಿಗೆ ಅವಕಾಶ ಕಲ್ಪಿಸಿದ್ದು. ರಾಜಕೀಯ ಪಕ್ಷಗಳ ದೃಷ್ಟಿಯಲ್ಲಿ ನಗಣ್ಯವಾಗಿದ್ದ ಬಡಜನರನ್ನು ಈ ಕಾರ್ಯಸೂಚಿಯೆಡೆಗೆ ತಂದು ಆದ್ಯತಾ ವಲಯವಾಗಿ ಪರಿಗಣಿಸಲಾಯಿತು.

ತರುವಾಯ ಬಂದ 20-ಅಂಶಗಳ ಕಾರ್ಯಕ್ರಮದಲ್ಲಿ, ಪರಿಶುದ್ಧ ಕುಡಿಯುವ ನೀರು, ಆರೋಗ್ಯ ಪಾಲನೆ, ಶಿಕ್ಷಣ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಬುಡಕಟ್ಟು ಜನರಿಗಾಗಿ ಸಾಮಾಜಿಕ ನ್ಯಾಯ, ಮಹಿಳೆಯರಿಗಾಗಿ ಅವಕಾಶಗಳು, ಪರಿಸರ ಸಂರಕ್ಷಣೆ ಇವೇ ಮೊದಲಾದ ಅಂಶಗಳನ್ನು ಸೇರಿಸುವ ಮೂಲಕ ಇಂದಿರಾ, ಬಡವರ ಹಿತಾಸಕ್ತಿಗಳ ಈಡೇರಿಕೆಯೆಡೆಗೆ ಗಮನ ಹರಿಸಿದರು. ನಂತರ ಅನೇಕ ಬಾರಿ, ನಿರ್ದಿಷ್ಟ ಕಾರ್ಯಕ್ರಮಗಳ ಮರುರಚನೆಯಾಗಿದೆಯಾದರೂ, 20-ಅಂಶಗಳ ಕಾರ್ಯಕ್ರಮದ ಆಶಯವು ನಂತರ ಬಂದ ಎಲ್ಲ ಸರ್ಕಾರಗಳ ಬಡತನ ನಿಮೂಲನಾ ಯತ್ನಗಳ ಪಾಲಿಗೆ ಮಾರ್ಗದರ್ಶಿಯಾಗಿರುವುದಂತೂ ಹೌದು.

ಬಡವರಿಗೆ ಬಲ: ಬಡತನ ನಿಮೂಲನೆಯ ಕುರಿತಾದ ಇಂದಿರಾರ ದೃಢಯತ್ನದ ಫಲಶ್ರುತಿ ಉತ್ತಮವಾಗೇ ಇತ್ತು. 1984ರ ಹೊತ್ತಿಗೆ ಬಡತನದ ಅನುಪಾತವು ಸುಮಾರು ಶೇ.10 ಅಂಶಗಳಷ್ಟು ಕುಸಿದು ಶೇ.44ರ ಮಟ್ಟವನ್ನು ತಲುಪಿದ್ದೇ ಇದಕ್ಕೆ ಸಾಕ್ಷಿ. ಬಡವರು ಇಂದಿರಾರನ್ನು ತಮ್ಮ ಸಂರಕ್ಷಕಿ ಹಾಗೂ ಉಪಕಾರಿ ಎಂದು ಪರಿಗಣಿಸಿದ್ದು ಈ ಕಾರಣದಿಂದಾಗಿಯೇ ಮತ್ತು ಈ ಗ್ರಹಿಕೆ ಮಾಸದೆ ಇಂದಿಗೂ ಅಬಾಧಿತವಾಗಿದೆ. ತರುವಾಯದ ಸರ್ಕಾರಗಳು, ಅಷ್ಟೇಕೆ, ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್​ಡಿಎ ಸರ್ಕಾರ ಕೂಡ ಬಡವರನ್ನು ತಮ್ಮ ಕಾರ್ಯಸೂಚಿಯ ಕೇಂದ್ರಬಿಂದುವಾಗಿ ಪರಿಗಣಿಸಲು ಯತ್ನಿಸಿದ್ದುಂಟು.

ಆದರೆ, ಈಗ ಆಗಿರುವುದೇನು? ಕೇಂದ್ರ ಸರ್ಕಾರ ಮತ್ತು ಅನೇಕ ರಾಜ್ಯ ಸರ್ಕಾರಗಳು ಬಡವರನ್ನು ಮತ್ತೊಮ್ಮೆ ಮೂಲೆಗುಂಪುಮಾಡಿವೆ. ಕಾರ್ಯಸೂಚಿಯ ಕೇಂದ್ರಬಿಂದುವಾಗಿ ಗುರುತಿಸಲ್ಪಟ್ಟಿದ್ದ ಬಡವರೀಗ ಅಂಚಿಗೆ ತಳ್ಳಲ್ಪಟ್ಟಿದ್ದಾರೆ. ಒಟ್ಟು ವೆಚ್ಚದ ಒಂದು ಭಾಗವಾಗಿ ಶಿಕ್ಷಣ ಮತ್ತು ಆರೋಗ್ಯ ರಂಗಕ್ಕೆ ಮಾಡಲಾಗಿರುವ ಹಂಚಿಕೆಗಳು ತೀರಾ ಕಡಿಮೆಯಾಗಿವೆ. ರಾಷ್ಟ್ರೀಯ ಗ್ರಾಮೀಣ ಉದ್ಯೋಗಖಾತ್ರಿ ಯೋಜನೆಯನ್ನು ‘ಯುಪಿಎ ಸರ್ಕಾರದ ವೈಫಲ್ಯಕ್ಕಿರುವ ಒಂದು ದೃಷ್ಟಾಂತ’ ಎಂದು ವ್ಯರ್ಥಾಲಾಪ ಮಾಡಲಾಗಿದೆ. 2014-15 ಮತ್ತು 2015-16ರ ವರ್ಷಗಳಲ್ಲಿ, ಕೃಷಿ ಉತ್ಪನ್ನಗಳಿಗೆ ಸಂಬಂಧಿಸಿದಂತೆ ಕನಿಷ್ಠ ಬೆಂಬಲ ಬೆಲೆಯಲ್ಲಿ ತೀರಾ ಅಲ್ಪವೆನ್ನಬಹುದಾದ ಹೆಚ್ಚಳ ಮಾಡಲಾಯಿತು. ಸಣ್ಣ ಹಾಗೂ ಮಧ್ಯಮ ಗಾತ್ರದ ಉದ್ಯಮಗಳಿಗೆ ಬ್ಯಾಂಕ್ ಸಾಲ ನಿರಾಕರಿಸಲಾಯಿತು. ಎಲ್ಲಕ್ಕಿಂತ ಮಿಗಿಲಾಗಿ, ಪ್ರತಿ ವರ್ಷ ಉದ್ಯೋಗ ಮಾರುಕಟ್ಟೆಯನ್ನು ಪ್ರವೇಶಿಸುತ್ತಿರುವ 1.2 ಕೋಟಿ ಯುವಸಮೂಹಕ್ಕೆ ಅಗತ್ಯವಿರುವ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಕಳೆದ 3 ವರ್ಷಗಳ ಅವಧಿಯಲ್ಲಿ ಯಾವುದೇ ಯೋಗ್ಯ ಯತ್ನವಾಗಿಲ್ಲ ಎಂದು ವಿಷಾದದಿಂದಲೇ ಹೇಳಬೇಕಾಗಿದೆ.

ಬಡವರು ವಂಚನೆಗೀಡಾಗುತ್ತಿರುವುದು ಹೀಗೆ: ಬಡವರ ಪರವಾಗಿರಬೇಕಿದ್ದ ಕಾರ್ಯಸೂಚಿಗಳ ಜಾಗದಲ್ಲಿ ಚತುರತೆಯ ಘೋಷಣೆಗಳು ಬಂದು ಕೂತಿವೆ. ನಮ್ಮ ನಗರಗಳಲ್ಲಿ ವಾಸ ಮಾಡುವುದೇ ದುಸ್ತರ ಎನ್ನುವಂಥ ಪರಿಸ್ಥಿತಿ ನಿರ್ವಣವಾಗಿದ್ದರೂ, ಯಾವುದೋ ಆಯ್ದ ನಗರದ ಒಟ್ಟು ಪ್ರದೇಶದ ಒಂದು ಸಣ್ಣ ಭಾಗಕ್ಕಷ್ಟೇ ಪ್ರಯೋಜನಕಾರಿಯಾಗುವ ‘ಸ್ಮಾರ್ಟ್​ಸಿಟಿ’ ಯೋಜನೆಗೆ ಅಗಾಧ ಪ್ರಮಾಣದ ಹಣ ವಿನಿಯೋಗಿಸಲಾಗುತ್ತಿದೆ. 1 ಲಕ್ಷ ಕೋಟಿ ರೂ. ಸಾಲ ತಂದು ಬುಲೆಟ್ ಟ್ರೇನಿನ ಮೇಲೆ ಖರ್ಚುಮಾಡುವ ನಾವು, ಬಡವರು ಬಳಸುವ ಉಪನಗರದ ಟ್ರೇನುಗಳು ಮತ್ತು ಪಾದಚಾರಿ ಸೇತುವೆಗಳಂಥ ತೀರಾ ಹಳತಾಗಿರುವ ಅಥವಾ ಮುರಿದುಬೀಳುವಂತಿರುವ ರೈಲ್ವೆ ಮೂಲ ಸೌಕರ್ಯಗಳ ಸುಧಾರಣೆಯಂಥ ಬಹುದೊಡ್ಡ ವಿಷಯವನ್ನೇ ನಿರ್ಲಕ್ಷಿಸಿಬಿಟ್ಟಿದ್ದೇವೆ.

ನಗದುರಹಿತ ಆರ್ಥಿಕತೆಯೆಂಬ ಅನಿಶ್ಚಿತ ಗುರಿಯನ್ನು ಬೆನ್ನತ್ತಿರುವ ನಾವು, ದೇಶದ ಕರೆನ್ಸಿ ನೋಟುಗಳ ಶೇ.86ರಷ್ಟು ಭಾಗವನ್ನು ಅಮಾನ್ಯೀಕರಣಗೊಳಿಸಿಬಿಡುತ್ತೇವೆ; ಆದರೆ ಆ ಕಸರತ್ತಿನಲ್ಲಿ ಲಕ್ಷಾಂತರ ಜನರಿಗೆ ಒದಗಿದ ಸಂಕಟ-ಸಂಕಷ್ಟದ ಬಗ್ಗೆ ಕಿಂಚಿತ್ತೂ ಕಾಳಜಿ ತೋರುವುದಿಲ್ಲ. ‘ಸ್ಟಾರ್ಟಪ್ ಇಂಡಿಯಾ’ ಮತ್ತು ‘ಸ್ಟಾ್ಯಂಡಪ್ ಇಂಡಿಯಾ’ದಂಥ ಉಪಕ್ರಮಗಳಿಗೆ ಅಗಾದ ಮೊತ್ತದ ಹಣವನ್ನು ಬಾಚಿಕೊಡುವ ನಾವು, ಅಳಿವಿನಂಚಿಗೆ ಬಂದಿರುವ ಹಾಗೂ ಗಣನೀಯ ಪ್ರಮಾಣದಲ್ಲಿ ಉದ್ಯೋಗಾವಕಾಶವನ್ನು ಕಲ್ಪಿಸಿರುವ ಸಾವಿರಾರು ಸಣ್ಣಪುಟ್ಟ ವ್ಯಾಪಾರೋದ್ಯಮಗಳ ಕಡೆಗೆ ಕಣ್ಣೆತ್ತಿಯೂ ನೋಡುವುದಿಲ್ಲ.

ದಿವಾಳಿತನದ ಕಾನೂನನ್ನು ಪ್ರಬಲ ಹಿಡಿತದೊಂದಿಗೆ ಅನುಷ್ಠಾನಕ್ಕೆ ತರುವ ನಾವು, ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯನ್ನು ಕಸದಬುಟ್ಟಿಗೆ ಎಸೆದು ಕೈತೊಳೆದುಕೊಂಡುಬಿಡುತ್ತೇವೆ. ಆರೋಗ್ಯಕರ ಜೀವನಕ್ಕಿರುವ ಒಂದು ಮಾಗೋಪಾಯವಾಗಿ ‘ಯೋಗ’ವನ್ನು ಪ್ರವರ್ತಿಸಲು ಕೋಟ್ಯಂತರ ರೂಪಾಯಿ ವೆಚ್ಚಮಾಡುವ ನಾವು, ವಯಸ್ಸಾದವರು ಅಥವಾ ನಿರ್ಗತಿಕ ವ್ಯಕ್ತಿಗಳಿಗೆ ಪ್ರತಿ ತಿಂಗಳಿಗೆ 1,000 ರೂ.ನಷ್ಟು ಅಲ್ಪಪಿಂಚಣಿ ನೀಡುವುದಕ್ಕೆ ನಿರಾಕರಿಸುತ್ತೇವೆ, ತನ್ಮೂಲಕ ಅವರ ಸಾವಿಗೂ ಕಾರಣರಾಗುತ್ತಿದ್ದೇವೆ (ತಮಿಳುನಾಡು ಒಂದರಲ್ಲೇ, ಇಂಥ ಪಿಂಚಣಿಗೆಂದು ಕೋರಿ ಸಲ್ಲಿಸಲಾದ 27,06,758 ಅರ್ಜಿಗಳು ಬಂದಿದ್ದರೂ ಅವನ್ನು ಕಂತೆಕಟ್ಟಿ ಒಂದೆಡೆ ಇಡಲಾಗಿದೆ; ಕಾರಣ ತನ್ನಲ್ಲಿ ಹಣವಿಲ್ಲ ಎಂಬುದು ರಾಜ್ಯ ಸರ್ಕಾರ ಒಡ್ಡುತ್ತಿರುವ ನೆಪ).

ಮೂಡಿ’ಸ್, ಪ್ಯೂ ರಿಸರ್ಚ್ ಮತ್ತು ವಿಶ್ವಬ್ಯಾಂಕ್​ನ ಅನುಮೋದನೆಯನ್ನು ಗೆಲ್ಲಲು ಕೂಗುವ ಹರಾಜುಕಟ್ಟೆಯಲ್ಲಿ ಬಡವರಿಗೆ ಸ್ಥಾನವಾದರೂ ಎಲ್ಲಿದೆ? ಸರಳೀಕೃತ ವ್ಯವಹಾರ ಕಾರ್ಯಸೂಚಿ ಪಟ್ಟಿಯಲ್ಲಿ 100ರ ಶ್ರೇಯಾಂಕ ಪಡೆಯುವುದು ಸಂತೃಪ್ತಿಯ ಸಂಗತಿಯೇ. ಹಸಿವಿನ ಪಟ್ಟಿಯಲ್ಲೂ ಇಂಥದೇ ಶ್ರೇಯಾಂಕ ಪಡೆಯುವುದು ನಾಚಿಕೆಗೇಡಿನ ಸಂಗತಿಯಲ್ಲದೆ ಮತ್ತೇನು?

ಭಾರತದ ಸರಿಸುಮಾರು ಶೇ.22ರಷ್ಟು ಜನರು ಬಡತನದ ಕೂಪದಿಂದ ಇನ್ನೂ ಆಚೆ ಬಂದಿಲ್ಲ ಮತ್ತು ಘನತೆಯೊಂದಿಗೆ ಜೀವಿಸುವ ಹಕ್ಕು ಅವರಿಗೂ ಇದೆ ಎಂಬುದನ್ನು ಯಾವುದೇ ಸರ್ಕಾರವು ಮರೆತುಹೋಗುವುದಕ್ಕೆ ಜನ ಅವಕಾಶ ನೀಡಬಾರದು; ಇದು ಇಂದಿರಾ ಗಾಂಧಿಯವರು ತಮ್ಮ ಜೀವಿತಾವಧಿಯಲ್ಲಿ ಒಪ್ಪಿ ಸಮರ್ಥಿಸಿದ್ದ ಸಾರ್ವಕಾಲಿಕ ಸತ್ಯ.

(ಲೇಖಕರು ರಾಜ್ಯಸಭಾ ಸದಸ್ಯರು ಹಾಗೂ ಮಾಜಿ ವಿತ್ತ ಸಚಿವರು)

Leave a Reply

Your email address will not be published. Required fields are marked *

Back To Top