More

    ಬಟಗೇರಾದಲ್ಲಿ ಎರಡು ಗುಂಪು ಮಧ್ಯೆ ಕಲಹ

    ಬಸವಕಲ್ಯಾಣ: ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳದಿಂದ ಉದ್ರಿಕ್ತ ಯುವಕರ ಗುಂಪೊAದು ಪೊಲೀಸ್ ವಾಹನದ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ತಾಲೂಕಿನ ಬಟಗೇರಾ ಗ್ರಾಮದಲ್ಲಿ ಬುಧವಾರ ರಾತ್ರಿ ಜರುಗಿದೆ. ಮುಂಜಾಗೃತಾ ಕ್ರಮವಾಗಿ ಗ್ರಾಮದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಿದ್ದು, ಗುರುವಾರ ಪರಿಸ್ಥಿತಿ ಶಾಂತವಾಗಿದೆ.

    ಗ್ರಾಮದಲ್ಲಿ ಬುಧವಾರ ದಸರಾ ಮಹೋತ್ಸವ ನಿಮಿತ್ತ ನಡೆದ ಮಹಾಲಕ್ಷ್ಮೀ ದೇವಿ ಪಲ್ಲಕ್ಕಿ ಮೆರವಣಿಗೆ ವೇಳೆ ಬಟಗೇರಾ ಹಾಗೂ ಬಟಗೇರಾ ವಾಡಿ ಗ್ರಾಮದ ಯುವಕರ ಗುಂಪಿನ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದಿದೆ. ಜಗಳದಿಂದ ಉದ್ರಿಕ್ತಗೊಂಡ ಬಟಗೇರಾ ವಾಡಿ ಗ್ರಾಮದ ಯುವಕರ ಗುಂಪು ರಾತ್ರಿ ಮತ್ತೆ ಬಟಗೇರಾ ಗ್ರಾಮಕ್ಕೆ ಆಗಮಿಸಿ ಪೊಲೀಸ್ ವಾಹನ ಸೇರಿ ಇತರ ವಾಹನ ಹಾಗೂ ಕೈಗೆ ಸಿಕ್ಕವರ ಮೇಲೆ ಕಲ್ಲು ತೂರಾಟ ನಡೆಸಿದೆ. ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡಿಸಿದೆ ಎನ್ನಲಾಗಿದೆ.

    ವಾಡಿಯ ಉದ್ರಿಕ್ತ ಯುವಕರು ಪೊಲೀಸ್ ವಾಹನದ ಮೇಲೆ ಕಲ್ಲು ಎತ್ತಿಹಾಕಿ ವಾಹನದ ಗಾಜುಗಳು ಪುಡಿ ಪುಡಿಗೊಳಿಸಿದ್ದಾರೆ. ಕಲ್ಲು ತೂರಾಟದಿಂದ ಪೊಲೀಸ್ ಎಆರ್‌ಎಸ್‌ಐಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿದು ಬಂದಿದೆ.

    ಸುದ್ದಿ ತಿಳಿದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಲಂಗೋಟಿ, ಹುಮನಾಬಾದ್ ಡಿವೈಎಸ್ಪಿ ಜೆ.ಎಸ್.ನ್ಯಾಮಗೌಡರ, ಸೇರಿ ಹಿರಿಯ ಪೊಲೀಸ್ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಸದ್ಯಕ್ಕೆ ಗ್ರಾಮದಲ್ಲಿ ವಾತಾವರಣ ಶಾಂತವಾಗಿದೆ.
    ಮುಂಜಾಗೃತ ಕ್ರಮವಾಗಿ ಗ್ರಾಮದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಸಿಪಿಐ ಕೃಷ್ಣಕುಮಾರ ಪಾಟೀಲ್, ಪಿಎಸ್‌ಐ ಶಿವಪ್ಪ ಮೇಟಿ ಪರಿಸ್ಥಿತಿಯ ಮೇಲೆ ನಿಗಾ ವಹಿಸಿದ್ದಾರೆ.

    ಘಟನೆಗೆ ಸಂಬಂಧಿಸಿದಂತೆ ೧೫ಕ್ಕೂ ಅಧಿಕ ಜನರ ವಿರುದ್ಧ ಮಂಠಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ೧೦ ಆರೋಪಿಗಳನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳ ಬಂಧನಕ್ಕೆ ಶೋಧ ಕಾರ್ಯ ಮುಂದುವರಿದಿದೆ.
    ಫೋಟೋ ತೆಗೆದಿದ್ದಕ್ಕೆ ಜಗಳ?: ಬಾಲಕಿಯರ ಫೊಟೊ ಸೆರೆಹಿಡಿಯುತ್ತಿರುವುದನ್ನು ಬೆಟಗೇರಾದವರು ಪ್ರಶ್ನಿಸಿದ್ದು ಜಗಳಕ್ಕೆ ಕಾರಣ ಎನ್ನಲಾಗುತ್ತಿದೆ. ಇದರಿಂದ ಉದ್ರಿಕ್ತಗೊಂಡ ಬಟಗೇರಾ ವಾಡಿಯ ೧೫ರಿಂದ ೨೦ ಯುವಕರ ತಂಡ ರಾತ್ರಿ ವೇಳೆ ಗ್ರಾಮಕ್ಕೆ ನುಗ್ಗಿ ಪೊಲೀಸ್ ವಾಹನ ಸೇರಿ ಕೈಗೆ ಸಿಕ್ಕವರ ಮೇಲೆ ಹಲ್ಲೆ ನಡೆಸಿದೆ ಎನ್ನಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts