ಬಜೆಟ್ ಪೂರ್ವಭಾವಿ ಸಭೆಯಲ್ಲಿ ಕಿಡಿ

ಶ್ರೀರಂಗಪಟ್ಟಣ: ಪಟ್ಟಣದಲ್ಲಿ ಹೂವು, ಹಣ್ಣು, ತರಕಾರಿ ಮಾರುವ ರಸ್ತೆಬದಿ ವ್ಯಾಪಾರಿಗಳಿಗೆ ಅಂಗಡಿ ನಿರ್ಮಿಸಿ, ಆದಾಯದ ಮೂಲ ಸೃಷ್ಟಿಸದಿರುವುದು ಹಾಗೂ ಬೀದಿದೀಪ ನಿರ್ವಹಣೆ ಬಗ್ಗೆ ಪುರಸಭೆ ತಾತ್ಸಾರ ಹೊಂದಿರುವುದು ಸರಿಯಲ್ಲ ಎಂದು ಪುರಸಭಾ ಸದಸ್ಯ ಎಸ್.ಪ್ರಕಾಶ್ ಆಕ್ರೋಶ ವ್ಯಕ್ತಪಡಿಸಿದರು.

ಪುರಸಭೆಯಲ್ಲಿ ಶುಕ್ರವಾರ 2018-19 ಸಾಲಿನ ಆಯವ್ಯಯ ಸಂಬಂಧ ನಡೆದ ಪೂರ್ವಭಾವಿ ಸಭೆಯಲ್ಲಿ ಮುಖ್ಯಾಧಿಕಾರಿ ಕೃಷ್ಣ ಹಾಗೂ ಅಧಿಕಾರಿಗಳನ್ನು ಅವರು ತರಾಟೆಗೆ ತೆಗೆದುಕೊಂಡರು.

ಪಟ್ಟಣದ ಅಭಿವೃದ್ಧಿ ಕುರಿತ ಚರ್ಚೆ ವೇಳೆ ರಸ್ತೆ, ಮೋರಿ, ಡಕ್ ನಿರ್ಮಾಣ ಎಂದು ಹಣ ಪೋಲು ಮಾಡುವ ಬದಲಿಗೆ ಬೀದಿಬದಿಯ ವ್ಯಾಪಾರಿಗಳಿಗೆ ನಿರ್ಧಿಷ್ಟ ಸ್ಥಳದಲ್ಲಿ ಸೂರು ನಿರ್ಮಿಸುವ ಮೂಲಕ ಪುರಸಭೆಗೆ ಆದಾಯ ಬರುವಂತೆ ಮಾಡಬೇಕು. ಎಲ್‌ಇಡಿ ಲೈಟ್ ಮತ್ತು ಬೀದಿ ದೀಪ ನಿರ್ವಹಣೆಯಲ್ಲಿ ಬೇರೆ ಪುರಸಭೆಗಳಿಗೆ ಹೋಲಿಸಿದರೆ ನಮ್ಮ ಪುರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿ ನಿರ್ಲಕ್ಷೃ ತೋರುತ್ತಿದ್ದಾರೆ ಎಂದು ದೂರಿದರು.

ಅಂತೆಯೇ, ಮೃತರ ಅಂತ್ಯಸಂಸ್ಕಾರಕ್ಕೆ ಶವ ಸಾಗಿಸುವ ವಾಹನ ಖರಿದೀಸಲು ಪುರಸಭೆ ಹಣಮೀಸಲು ಇಡಬೇಕು. ಶುಂಭುಲಿಂಗಯ್ಯನ ಕಟ್ಟೆ ಸೇರಿ ಸೇತುವೆ ಪಕ್ಕದ ಕಿರಂಗೂರು ಸಶ್ಮಾನಗಳಲ್ಲಿ ಸುತ್ತಮುತ್ತಲು ಬೇಲಿ ಹಾಗೂ ಗಿಡಬೆಳೆದು ಮುಚ್ಚಿಹೋಗುತ್ತಿದ್ದು, ಅವುಗಳನ್ನು ಅಭಿವೃದ್ದಿಪಡಿಸಬೇಕು.

ಪಟ್ಟಣದಲ್ಲಿ ದಿನೇದಿನೇ ಸರಗಳ್ಳತನ, ಅಂಗಡಿಗಳ ಸರಣಿ ಕಳ್ಳತನ ನಡೆಯುತ್ತಿದ್ದು, ಇದಕ್ಕೆ ಬೀದಿ ದೀಪದ ನಿರ್ವಹಣೆ ಇಲ್ಲದಿರುವುದೇ ಕಾರಣವಾಗಿದೆ. ಬೀದಿ ದೀಪ ನಿರ್ವಹಣೆ ಜತೆಗೆ ಮುಖ್ಯ ರಸ್ತೆ, ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಬೇಕೆಂದು ಒತ್ತಾಯಿಸಿದರು.

ಸಭೆಯಲ್ಲಿ ಪುರಸಭಾ ಸದಸ್ಯರು ಹಾಗೂ ಪಟ್ಟಣದ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಸಾರ್ವಜನಿಕರು ಹಾಜರಿದ್ದರು.

Leave a Reply

Your email address will not be published. Required fields are marked *