ಬಜೆಟ್​ನಲ್ಲಿ ವೈಜ್ಞಾನಿಕ ಬೆಲೆ ನೀಡುವ ಯೋಜನೆ

ನವಲಗುಂದ:ಮುಖ್ಯಮಂತ್ರಿಗಳಿಗೆ ದೊಡ್ಡ ಚಿಂತನೆಗಳಿವೆ. ನಾವು ಬರೀ ಸಾಲ ಮನ್ನಾ ಮಾಡಿದರೆ, ರೈತರು ಮುಂದೆ ಬರುವುದಿಲ್ಲ. ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಂಬಲ ಬೆಲೆ ನೀಡುವ ವ್ಯವಸ್ಥೆಯನ್ನು ಬಜೆಟ್​ನಲ್ಲಿ ತರುವಂತೆ ಮುಖ್ಯಮಂತ್ರಿಗಳಿಗೆ ಹೇಳಿದ್ದೇನೆ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶಂಪೂರ ಹೇಳಿದರು.

ಭಾನುವಾರ ಹುಬ್ಬಳ್ಳಿಯಿಂದ ಗುಳೇದಗುಡ್ಡದ ಕಾರ್ಯಕ್ರಮವೊಂದಕ್ಕೆ ತೆರಳುತ್ತಿದ್ದಾಗ ಮಾರ್ಗ ಮಧ್ಯೆ ನವಲಗುಂದದಲ್ಲಿ ಜೆಡಿಎಸ್ ಕಾರ್ಯಲಯಕ್ಕೆ ಭೇಟಿ ನೀಡಿ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.

ಬಡವರ ಬಂಧು, ಕಾಯಕದಂತಹ ಯೋಜನೆ ಇಟ್ಟುಕೊಂಡು ಮತ್ತೆ ಬಜೆಟ್ ಮಾಡುತ್ತಿದ್ದೇವೆ. ಕಾಯಕ ಯೋಜನೆ ಸಮ್ಮಿಶ್ರ ಸರ್ಕಾರದ ದೊಡ್ಡ ಯೋಜನೆಯಾಗಿದೆ. ಒಂದೊಂದು ಮಹಿಳಾ ಗ್ರುಪ್​ಗೆ 10 ಲಕ್ಷ ರೂ ಸಾಲ ನೀಡುವ ಯೋಜನೆಯಾಗಿದ್ದು, ಅದರಲ್ಲಿ 5 ಲಕ್ಷ ರೂ. ಬಡ್ಡಿ ರಹಿತ ಮತ್ತು ಇನ್ನೈದು ಲಕ್ಷ ರೂ.ಗೆ ಕೇವಲ ಶೇ. 4ರಷ್ಟು ಬಡ್ಡಿದರದಲ್ಲಿ ಸಾಲ ನೀಡುವ ಯೋಜನೆ ಇದಾಗಿದೆ ಎಂದರು.

ಜನ ನಮಗಾಗಿ ಎಷ್ಟು ಎಂಎಲ್​ಎ ಸೀಟು ಗೆಲ್ಲಿಸಿದ್ದಾರೆ ಎಂಬುದು ಮುಖ್ಯವಲ್ಲ. ಜನ ಆಸೆಪಟ್ಟಂತೆ, ದೇವರ ದಯೆಯಿಂದ ಕುಮಾರಸ್ವಾಮಿ ಮುಖ್ಯಮಂತ್ರಿಗಳಾಗಿದ್ದಾರೆ. ಬೀದರ್​ನಿಂದ ಹಿಡಿದು ಚಾಮರಾಜನಗರ ತನಕ ಯಾವ ಮಣ್ಣಿನಲ್ಲಿ ಕಾಲಿಟ್ಟರೂ, ಮುಂದಿನ ಮುಖ್ಯಮಂತ್ರಿ ಕುಮಾರಸ್ವಾಮಿಯವರೇ ಎಂದು ಹೇಳುತ್ತಾ ಬಂದಿದ್ದೆ ಎಂದು ಸ್ಮರಿಸಿದರು.

ಮಾಜಿ ಶಾಸಕ ಎನ್. ಕೋನರಡ್ಡಿ, ಜೆಡಿಎಸ್ ವಕ್ತಾರ ರಮೇಶಬಾಬು, ಜೆಡಿಎಸ್ ತಾಲೂಕು ಅಧ್ಯಕ್ಷ ವೀರಣ್ಣ ನೀರಲಗಿ ಮಾತನಾಡಿದರು. ದೇವರಾಜ ಕಂಬಳಿ, ಹನುಮಂತಪ್ಪ ಇಬ್ರಾಹಿಂಪೂರ, ಪ್ರಕಾಶ ಶಿಗ್ಲಿ, ಸೈಪುದ್ದೀನ್ ಅವರಾದಿ, ಅಬ್ಬಾಸ ದೇವರಿಡು ಇತರರು ಇದ್ದರು.

ಪ್ರಧಾನಿ ಏಕೆ ಹಾಗೆ ಹೇಳಿದರೋ ಗೊತ್ತಿಲ್ಲ

ಹುಬ್ಬಳ್ಳಿ: ಪ್ರಧಾನಿಯವರು ಕರ್ನಾಟಕ ಮುಖ್ಯಮಂತ್ರಿ ಕ್ಲರ್ಕ್ ಆಗಿದ್ದಾರೆ ಎಂದು ಏಕೆ ಹೇಳಿದರೋ ಗೊತ್ತಿಲ್ಲ. ಕುಮಾರಸ್ವಾಮಿಯವರು ಸಮ್ಮಿಶ್ರ ಸರ್ಕಾರವನ್ನು ಚೆನ್ನಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ ಎಂದು ಸಚಿವ ಬಂಡೆಪ್ಪ ಕಾಶೆಂಪುರ ಹೇಳಿದರು.

ಭಾನುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರ ಸೂಪರ್ ಆಕ್ಟಿವ್ ಆಗಿದೆ. ಸಾಕಷ್ಟು ಯೋಜನೆಗಳನ್ನು ನೀಡಿದ್ದೇವೆ. ಯಾವುದೇ ಕಾರಣಕ್ಕೂ ಸರ್ಕಾರ ಬೀಳುವುದಿಲ್ಲ ಎಂದರು.

ಪುಟ್ಟರಂಗಶೆಟ್ಟಿಯವರ ಮೇಲೆ ಬಂದಿರುವ ಲಂಚ ಆರೋಪ ಕುರಿತು ತನಿಖೆ ನಡೆಯುತ್ತಿದೆ. ವರದಿ ಬಂದ ನಂತರ ಸರ್ಕಾರ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.