ಬಜೆಟ್​ನಲ್ಲಿ ವಕೀಲರ ಕಡೆಗಣನೆಗೆ ಕಿಡಿ

ತುಮಕೂರು : ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಂಡಿಸಿದ ಬಜೆಟ್​ನಲ್ಲಿ ವಕೀಲ ಸಮುದಾಯವನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿ ಕಲಾಪ ಬಹಿಷ್ಕರಿಸಿದ ವಕೀಲರು, ಜಿಲ್ಲಾ ವಕೀಲರ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಭಾರತೀಯ ವಕೀಲರ ಪರಿಷತ್​ನಿಂದ ಮಂಗಳವಾರ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕರೆ ನೀಡಿದ ಹಿನ್ನೆಲೆಯಲ್ಲಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಜೆ.ಕೆ.ಅನಿಲ್ ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳು, ನಗರದ ನ್ಯಾಯಾಲಯದಿಂದ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ಮೆರವಣಿಗೆ ಮೂಲಕ ತೆರಳಿ ಪ್ರತಿಭಟನೆ ನಡೆಸಿದರು.

ರಾಷ್ಟ್ರಮಟ್ಟದಲ್ಲಿ ವಕೀಲರ ರಕ್ಷಣೆ ಕಾಯ್ದೆ ಜಾರಿಗೆ ತರಲು ಹಾಗೂ ಸರ್ಕಾರಗಳು ಈ ಸಾಲಿನ ಬಜೆಟ್​ನಲ್ಲಿ ವಕೀಲ ಸಮುದಾಯವನ್ನು ಕಡೆಗಣಿಸಿರುವುದಕ್ಕೆ ಭಾರತೀಯ ವಕೀಲರ ಪರಿಷತ್ ತೆಗೆದುಕೊಂಡ ನಿರ್ಣಯಗಳ ಪ್ರತಿಯನ್ನು ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿ ಅವರಿಗೆ ರವಾನಿಸುವಂತೆ ಮನವಿ ಮಾಡಲಾಯಿತು.

ಜಿಲ್ಲಾಧಿಕಾರಿ ಡಾ. ಕೆ.ರಾಕೇಶ್​ಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು.

ವಕೀಲರ ಸಂಘದ ಉಪಾಧ್ಯಕ್ಷ ಹರೀಶ್​ಬಾಬು, ಪ್ರಧಾನ ಕಾರ್ಯದರ್ಶಿ ಬಿ.ಆರ್.ದೇವರಾಜು, ಜಂಟಿ ಕಾರ್ಯದರ್ಶಿ ಎನ್.ಆರ್.ಲೋಕೇಶ್, ಕೋಶಾಧ್ಯಕ್ಷ ಆರ್.ಪಾತಣ್ಣ , ಸಮಿತಿ ಸದಸ್ಯರಾದ ಡಿ.ಎ.ಜಗದೀಶ್, ಎಂ.ಎನ್.ಜಗದೀಶ್, ಟಿ.ಕವಿತಾ, ರಘುನಂದನ್, ಸಿ.ಸುರೇಶ್​ಕುಮಾರ್, ಫಾಲಾಕ್ಷಯ್ಯ ಸೇರಿ ಹಲವು ವಕೀಲರು ಪಾಲ್ಗೊಂಡಿದ್ದರು.